ಹೊಸಪೇಟೆ: ಎಲ್ಲ ಮನಸ್ಸುಗಳಿಗೆ ಸಂಬಂಧಿಸಿದ ಕೇಂದ್ರ ಎಂಬ ಅರ್ಥದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಾನಸ ಗಂಗೋತ್ರಿ ಎಂದು ನಾಮಕರಣ ಮಾಡಿರುವುದು ಕುವೆಂಪು ಅವರ ವಿಶ್ವಚೇತನ ಚಿಂತನೆ ಪ್ರತೀಕವಾಗಿದೆ ಎಂದು ಕನ್ನಡ ವಿವಿಯ ಲಲಿತಕಲಾ ನಿಕಾಯದ ಡೀನ್ ಡಾ. ಶಿವಾನಂದ ವಿರಕ್ತಮಠ ಹೇಳಿದರು.ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ವೈದಿಕ ಧರ್ಮದ ಪ್ರಭಾವ, ಜಾತಿ ಅಸಮಾನತೆ ಹಾಗೂ ವರ್ಗ ಸಂಘರ್ಷಗಳ ನಡುವೆಯೂ ಕುವೆಂಪು ಅವರು "ಮಾನವರೆಲ್ಲ ಶ್ರೇಷ್ಠರು, ಮಾನವರು ಒಂದೇ'''''''''''''''' ಎಂಬ ಮನೋಭಾವದಿಂದ ಶ್ರೀರಾಮಾಯಣಂ ದರ್ಶನಂ ಮಹಾಕಾವ್ಯವನ್ನು ರಚಿಸಿದ್ದಾರೆ. ಮಹಾಭಾರತ ಅಥವಾ ಭಗವದ್ಗೀತೆಗಿಂತ ರಾಮಾಯಣವನ್ನು ಆಯ್ಕೆ ಮಾಡಿಕೊಂಡಿರುವುದು ಕುವೆಂಪು ಅವರ ಸರ್ವತೋಮುಖ ಪ್ರಜ್ಞೆಯನ್ನು ತೋರಿಸುತ್ತದೆ. ಶ್ರೀ ರಾಮಾಯಣಂ ದರ್ಶನಂ ಕೃತಿಯಲ್ಲಿ 360 ಪ್ರಜ್ಞೆಯ ಆಯಾಮಗಳನ್ನು ಕಾಣಬಹುದಾಗಿದೆ ಎಂದರು.
ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ, ಕುವೆಂಪು ಅವರ ಸಾಹಿತ್ಯದ ಮೇಲೆ ಸಾಕಷ್ಟು ಅಧ್ಯಯನಗಳಾಗಿದ್ದರೂ, ಲಲಿತಕಲೆಗಳ ಮೂಲಕವಾದ ಅಧ್ಯಯನಗಳು ಕಡಿಮೆಯಾಗಿದೆ. ಕುವೆಂಪು ಅವರ ಬರವಣಿಗೆಯಲ್ಲಿ ಸಾಹಿತ್ಯದ ಜೊತೆಗೆ ಚಿತ್ರ, ಶಿಲ್ಪ, ಕಾವ್ಯ ಹಾಗೂ ರೂಪಕ, ಉಪಮೆಗಳ ಸೌಂದರ್ಯವನ್ನು ಕಾಣಬಹುದು. ಆದ್ದರಿಂದ ಕುವೆಂಪು ಅವರನ್ನು ಕೇವಲ ಸಾಹಿತ್ಯದ ಮೂಲಕವಲ್ಲದೆ ಲಲಿತಕಲೆಗಳ ದೃಷ್ಟಿಯಿಂದಲೂ ಅಧ್ಯಯನ ಮಾಡುವ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಇದ್ದರು.