ಕೊಪ್ಪಳ: ಮಾನವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾರ್ಮಿಕರ ಪಾತ್ರ ಗಣನೀಯವಾಗಿದ್ದು, ಕಾರ್ಮಿಕರ ಶ್ರಮವೇ ದೇಶದ ಪ್ರಗತಿಯ ಮೂಲ ಶಕ್ತಿಯಾಗಿದೆ ಎಂದು ಹಲಗೇರಿ ಗ್ರಾಪಂ ಅಭಿವೃದ್ದಿ ಅಧಿಕಾರಿ ಸಂಗಮೇಶ ತೇರಿನ ಹೇಳಿದರು.
ಕಾರ್ಮಿಕರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನ ದಿನವು ಕಾರ್ಮಿಕರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ಕಾರ್ಮಿಕತ್ವ ತಡೆದು ನ್ಯಾಯಯುತ ವೇತನ ಮತ್ತು ಸುರಕ್ಷಿತ ಪರಿಸರ ಒದಗಿಸುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಪಂ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಮಾತನಾಡಿ, ಕಾರ್ಮಿಕರು ಕೇವಲ ಕೆಲಸದ ಜತೆಗೆ ಗಮನ ಹರಿಸದೇ ಸಾಮಾಜಿಕ ಬದುಕು ಕಟ್ಟಿಕೊಳ್ಳಲು ಆರೋಗ್ಯದ ಕಡೆಗೆ ಕೂಡಾ ಗಮನಹರಿಸಬೇಕು. ಕಾರ್ಮಿಕರ ಬದುಕು ಸಂಕಷ್ಟಗಳಿಂದ ಕೂಡಿರುತ್ತದೆ.ಪ್ರತಿ ಶ್ರಮದ ಮೂಲಕ ಕುಟುಂಬದ ಜೀವನ ಸಾಗಿಸುವಂತದ್ದು. 1886ರ ಮೇ 4ರಂದು ಚಿಕಾಗೋದ,ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ಧಮನಕಾರಿ ಘಟನೆ ಆಧಾರಿಸಿಕೊಂಡು ಈ ಆಚರಣೆ ಜರುಗುತ್ತಿದೆ. ಬ್ರಿಟನಿನಲ್ಲಿ ಕಾರ್ಮಿಕ ದಿನ ಪ್ರಥಮ ಬಾರಿಗೆ 1892ರಲ್ಲಿ ಆಚರಿಸಲಾಗಿರುತ್ತದೆ. ಭಾರತದಲ್ಲಿ 1927ರಿಂದ ಆಚರಿಸಲಾಗುತ್ತಿದೆ.ಎಲ್ಲ ಕಾರ್ಮಿಕರು ಕುಟುಂಬದ ಹಿತದೃಷ್ಟಿಯಿಂದ ಸಾಮಾಜಿಕ ಭದ್ರತೆ ವಿಮೆ ಹೊಂದಬೇಕು ಎಂದರು.ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಕಾರ್ಮಿಕರ ಪ್ರಮುಖ ಹಕ್ಕುಗಳಾದ ನ್ಯಾಯಯುತ ವೇತನ ಮತ್ತು ಕೆಲಸದ ಸಮಯ, ಸಂಘ ಕಟ್ಟಿಕೊಳ್ಳುವ ಸ್ವಾತಂತ್ರ್ಯ, ಸುರಕ್ಷಿತ ಕೆಲಸದ ವಾತಾವರಣ, ಕೆಲಸದ ಸ್ಥಳದಲ್ಲಿ ತಾರತಮ್ಮವಿಲ್ಲದಿರುವದು, ಸಾಮಾಜಿಕ ಭದ್ರತೆ ಒದಗಿಸುವದು, ರಜೆ ಪಡೆಯುವ ಹಕ್ಕು ಇತ್ಯಾದಿಗಳನ್ನು ಕಾರ್ಮಿಕ ಕಾಯೆಯಲ್ಲಿ ಉಲ್ಲೇಖಿಸಿರುವ ಕುರಿತು ವಿವರಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲವು ಕೂಲಿಕಾರರಿಗೆ ಗುಲಾಬಿ ಹೂವು ನೀಡುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಿದರು.
ಗ್ರಾಪಂ ಡಿಇಒ ಮಾಲತೇಶ, ಪಂಚಾಕ್ಷರಿ, ಗ್ರಾಮ ಕಾಯಕ ಮಿತ್ರ ವಿಜಯಲಕ್ಷ್ಮೀ ಪಾಟೀಲ್, ಕಾಯಕ ಬಂಧು ರುದ್ರಪ್ಪ, ಗವಿಸಿದ್ದಪ್ಪ ಸೇರಿದಂತೆ 330 ಕ್ಕೂ ಹೆಚ್ಚು ಕೂಲಿಕಾರರು ಇದ್ದರು.