ಕಾರ್ಖಾನೆ ಆರಂಭಗೊಂಡು ಎರಡೂ ದಶಕಗಳು ಸಮೀಪಿಸುತ್ತಿದ್ದರೂ ಬೈಪಾಸ್ ಮಾರ್ಗದ ಬಗ್ಗೆ ಯೋಚಿಸದ ಜನಪ್ರತಿನಿಧಿಗಳು, ಈಐಡಿ ಕಾರ್ಖಾನೆಕನ್ನಡಪ್ರಭ ವಾರ್ತೆ ಹಳಿಯಾಳ
ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಕಲ ಸಿದ್ಧತೆ ಮಾಡಿರುವ ಈಐಡಿ ಸಕ್ಕರೆ ಕಾರ್ಖಾನೆಯು, ತನ್ನ ಕಾರ್ಖಾನೆಯಿಂದ ಹಳಿಯಾಳ ಪಟ್ಟಣಕ್ಕೆ ಪ್ರತಿ ವರ್ಷ ಎದುರಾಗುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ನಿರಾಸಕ್ತಿ ತಾಳಿರುವುದು ಬಹಿರಂಗಗೊಂಡಿದೆ.ಪರಿಣಾಮ ಹಳಿಯಾಳ ಪಟ್ಟಣ ವಾಹನ ಸಂಚಾರ ದಟ್ಟಣೆ ಟ್ರಾಫಿಕ್ ಸಮಸ್ಯೆಯಿಂದ ನಲುಗುತ್ತಿದೆ. ಕಾರ್ಖಾನೆಗೆ ಕಬ್ಬು ಪೂರೈಸಲು ಬರುತ್ತಿರುವ ಲಾರಿಗಳು, ಡಬಲ್ ಟ್ರಾಲಿ ಟ್ರ್ಯಾಕ್ಟರ್‌ಗಳಿಂದ ಪಟ್ಟಣದ ಮುಖ್ಯ ರಾಜ್ಯ ಹೆದ್ದಾರಿ ತುಂಬಿ ಹೋಗಿ ಟ್ರಾಫಿಕ್ ಜಾಮ್ ಆಯಿತು. ಇದರರ್ಥ ಕಾರ್ಖಾನೆಯವರು ಹಳಿಯಾಳ ಪಟ್ಟಣಕ್ಕೆ ತನ್ನಿಂದ ಎದುರಾಗುತ್ತಿರುವ ಸಮಸ್ಯೆ ನಿಯಂತ್ರಣಕ್ಕೆ ಯಾವುದೇ ಯೋಜನೆ ರೂಪಿಸದೇ ಕೇವಲ ಆದಾಯ ಗಳಿಕೆಯತ್ತಲೇ ಆದ್ಯತೆ ನೀಡಿರುವುದು ಕಂಡು ಬಂದಿದೆ.
ಟ್ರಾಫಿಕ್ ಜಾಮ್:ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಲು ಇರುವುದು ಒಂದೇ ಮಾರ್ಗ ಅದೂ ರಾಜ್ಯ ಹೆದ್ದಾರಿ, ಹಳಿಯಾಳ ಪಟ್ಟಣದಿಂದ ದಾಂಡೇಲಿ, ಕಾರವಾರ, ಯಲ್ಲಾಪುರ ಹೋಗುವರು, ಹಾಗೂ ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಬೆಳಗಾವಿ ಹೋಗಲು ಇರುವ ಒಂದೇ ಮಾರ್ಗ ಅದೇ ಏಕೈಕ ರಾಜ್ಯ ಹೆದ್ದಾರಿ ಇರುವುದರಿಂದ ಈ ರಸ್ತೆಯಲ್ಲಿ ಯಾವತ್ತೂ ವಾಹನಗಳ ಸಂಚಾರ ಅತಿಯಾಗಿರುತ್ತದೆ. ಹೀಗಿರುವಾಗ ಸಕ್ಕರೆ ಕಾರ್ಖಾನೆಗೆ ಬಂದ ಕಬ್ಬಿನ ಲಾರಿಗಳ ಸಾಲು ಮಾರ್ಗದುದ್ದಕ್ಕೂ ನಿಂತಿರುವುದರಿಂದ ಹಳಿಯಾಳ ಪಟ್ಟಣ ದಾಟುವ ವಾಹನ ಸವಾರರಾಗಲಿ, ಸಾರಿಗೆ ಸಂಸ್ಥೆಯ ಬಸ್‌ಗಳು, ಮನೆಗೆ ತೆರಳುವ ನಿವಾಸಿಗಳು ಪರದಾಡಿದ್ದಾರೆ. ಕಾರ್ಖಾನೆಯ ಕ್ರಾಸ್, ಯಲ್ಲಾಪುರ ನಾಕಾ ಕ್ರಾಸ್, ಕಿತ್ತೂರ ಕಾಂಪ್ಲೆಕ್ ಕ್ರಾಸ್, ಮೀನು ಮಾರುಕಟ್ಟೆ ಕ್ರಾಸ್ ಬಳಿ ವಾಹನಗಳಿಗೆ ಮುಂದೇ ಸಾಗಲು ಸಾಕಷ್ಟು ಸಮಯ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಪರಿಸ್ಥಿತಿ ನಿರ್ಮಾಣವಾದ ಪರಿಣಾಮ ಬಾರಿ ಸಮಸ್ಯೆ ಉಂಟಾಯಿತು.ಮಾತು ಕೊಟ್ಟು ಮರೆತರು:
ಕಳೆದ ತಿಂಗಳ ಅಂತ್ಯದಲ್ಲಿ ಹಳಿಯಾಳದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯಿಂದ ಪ್ರತಿವರ್ಷ ಉಂಟಾಗುವ ಟ್ರಾಪಿಕ್ ಸಮಸ್ಯೆ ಪ್ರಸ್ತಾಪವಾಗಿತ್ತು. ಕಾರ್ಖಾನೆಯವರು ಹಾಗೂ ಪೊಲೀಸ್ ಇಲಾಖೆಯವರು ಜಂಟಿಯಾಗಿ ಈ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಆಗ್ರಹಿಸಲಾಗಿತ್ತು. ಅದಕ್ಕೆ ಸಭೆಯಲ್ಲಿದ್ದ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಕಾರ್ಖಾನೆಯವರು ಟ್ರಾಫಿಕ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದರು. ಆದರೆ ಭಾನುವಾರ ಸಮಸ್ಯೆ ಉದ್ಭವವಾದರೂ ಅಂದೂ ಸಭೆಯಲ್ಲಿ ಭರವಸೆ ನೀಡಿದ ಪೊಲೀಸ್ ಇಲಾಖೆಯಾಗಲಿ, ಕಾರ್ಖಾನೆಯವರಾಗಲಿ ಸಮಸ್ಯೆ ಬಗೆಹರಿಸಲು ಮುಂದಾಗದಿರುವುದನ್ನು ಕಂಡು ಸಾರ್ವಜನಿಕರೇ ಪೊಲೀಸರಿಗೆ ಕರೆ ಮಾಡಿ ಸಮಸ್ಯೆ ಮನವರಿಕೆ ಮಾಡಿದ್ದಾರೆ. ತದನಂತರ ಟ್ರಾಫಿಕ್ ದಟ್ಟಣೆ ತಿಳಿಯಾಗಿದೆ.ಕಿಂಚಿತ್ತೂ ಕಾಳಜಿಯಿಲ್ಲವೇ:ಹಳಿಯಾಳದಲ್ಲಿ ಕಾರ್ಖಾನೆ ಪ್ರಾರಂಭಿಸಲು ಅತೀ ಕಡಿಮೆ ದರಕ್ಕೆ ಅಂದೂ ಜಮೀನು ನೀಡುವುದರೊಂದಿಗೆ ಮುಂದಿನ ಕೆಲವು ವರ್ಷಗಳಲ್ಲಿ ಕಾರ್ಖಾನೆ ವಿಸ್ತಣರಣೆಗೂ ಅನುವು ಮಾಡಿಕೊಟ್ಟ ಪಟ್ಟಣವಾಸಿಗಳ ಹಿತರಕ್ಷಣೆಯ ಬಗ್ಗೆ ಕಾರ್ಖಾನೆ ತಾಳಿರುವ ಅಸಡ್ಡೆ ಮನೋಭಾವನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಕಾರ್ಖಾನೆ ಪ್ರಾರಂಭವಾಗಿ ಎರಡೂ ದಶಕಗಳಾಗುತ್ತ ಬಂದರೂ ಕಾರ್ಖಾನೆಯರಾಗಲಿ ಸ್ಥಳೀಯ ಪ್ರಭಾವಿ ಶಾಸಕರಾಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲಿ ಟ್ರಾಪಿಕ್ ಸಮಸ್ಯೆಗೆ ಪರಿಹಾರವಾಗಿ ಕಾರ್ಖಾನೆಗೆ ಕಬ್ಬು ಪೂರೈಸಲು ಪರ್ಯಾಯ ಮಾರ್ಗ (ಬೈಪಾಸ್ ರಸ್ತೆ ) ನಿರ್ಮಾಣದ ಬಗ್ಗೆ ಯೋಚಿಸದಿರುವುದು ಈಗ ಚರ್ಚೆಗೆ ಗ್ರಾಸವಾಗಲಾರಂಭಿಸಿದೆ.