ಗದಗ ಜಿಲ್ಲೆಯಲ್ಲಿ ಮಳೆ ಕೊರತೆ, ಒಣಗುತ್ತಿವೆ ಬೆಳೆ

KannadaprabhaNewsNetwork |  
Published : Jun 24, 2026, 03:15 AM IST
ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆಯನ್ನು ಕಾರಂಜಿ ನೀರಾವರಿ ಮೂಲಕ ಉಳಿಸಲು ಪ್ರಯತ್ನಿಸುತ್ತಿರುವ ಗದಗ ತಾಲೂಕಿನ ರೈತರು.  | Kannada Prabha

ಸಾರಾಂಶ

ಜೂನ್ ತಿಂಗಳು ಮುಗಿಯುತ್ತಾ ಬಂದರೂ ಜಿಲ್ಲಾದ್ಯಂತ ನಿರೀಕ್ಷಿತ ಮುಂಗಾರು ಮಳೆ ಸುರಿಯದ ಕಾರಣ ರೈತರು ಆತಂಕಕ್ಕೆ ಸಿಲುಕಿದ್ದಾರೆ.

ಶಿವಕುಮಾರ ಕುಷ್ಟಗಿ

ಗದಗ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯಿಂದಾಗಿ ರೈತರು ಅತೀವ ಸಂಕಷ್ಟ ಎದುರಿಸುತ್ತಿದ್ದಾರೆ. ಇದು ಜಿಲ್ಲೆಯ ಸಮಗ್ರ ಬೆಳವಣಿಗೆಯ ಮೇಲೆ ವಿಷಮ ಪರಿಣಾಮ ಬೀರಲಿದೆ.

ಜೂನ್ ತಿಂಗಳು ಮುಗಿಯುತ್ತಾ ಬಂದರೂ ಜಿಲ್ಲಾದ್ಯಂತ ನಿರೀಕ್ಷಿತ ಮುಂಗಾರು ಮಳೆ ಸುರಿಯದ ಕಾರಣ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ (ಮುಂಗಾರು ಪೂರ್ವ ಮತ್ತು ಪ್ರಾರಂಭದಲ್ಲಿ) ಉತ್ತಮವಾಗಿ ಸುರಿದ ಮಳೆಯನ್ನು ನಂಬಿಕೊಂಡು ಬಿತ್ತನೆ ಮಾಡಿದ್ದ ಕೃಷಿಕರು, ಈಗ ಮಳೆಯಿಲ್ಲದೆ ಒಣಗುತ್ತಿರುವ ಮೊಳಕೆಗಳನ್ನು ಕಂಡು ಕಣ್ಣೀರು ಹಾಕುವಂತಾಗಿದೆ. ಜಿಲ್ಲೆಯ ಒಟ್ಟು 7 ತಾಲೂಕುಗಳಲ್ಲೂ ವಾಡಿಕೆಗಿಂತ ಶೇ. 55ಕ್ಕಿಂತಲೂ ಹೆಚ್ಚಿನ ಪ್ರಮಾಣದ ಮಳೆ ಕೊರತೆ ದಾಖಲಾಗಿದ್ದು, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ.

ವಿವರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 2.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮುಂಗಾರು ಪೂರ್ವ ಮಳೆ ಹಾಗೂ ಜೂನ್ ಮೊದಲ ವಾರದ ತೇವಾಂಶ ನಂಬಿ ಜಿಲ್ಲಾದ್ಯಂತ ಈಗಾಗಲೇ 1.10 ಲಕ್ಷ ಹೆಕ್ಟೇರ್ (ಶೇ. 41ರಷ್ಟು) ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ವ್ಯಾಪಕ ಪ್ರಮಾಣದಲ್ಲಿ ಹೆಸರು, ಶೇಂಗಾ ಬಿತ್ತನೆ ಮಾಡಲಾಗಿದೆ. ಬಿತ್ತನೆಯಾಗಿ 15ರಿಂದ 20 ದಿನಗಳಾಗಿದ್ದು, ಮೊಳಕೆಯೊಡೆದ ಹೆಸರು ಮತ್ತು ಶೇಂಗಾ ಬೆಳೆ ಮಳೆಯಿಲ್ಲದೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ. ತೀವ್ರ ಬಿಸಿಲಿನ ತಾಪಕ್ಕೆ ಸಣ್ಣ ಸಣ್ಣ ಬೆಳೆಗಳು ಒಣಗಿ ಹೋಗುತ್ತಿವೆ.

ಮತ್ತೆ ಬಿತ್ತನೆ ಮಾಡಲು ಆಗಲ್ಲ: ಕೈಗಡ ಸಾಲ ಮಾಡಿ, ದುಬಾರಿ ಬೆಲೆಗೆ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದೆವು. ಈಗ ಮಳೆ ಬಾರದೆ ಹೋದರೆ ಮರುಬಿತ್ತನೆ ಮಾಡುವ ಪರಿಸ್ಥಿತಿ ಬರುತ್ತದೆ. ಅದಕ್ಕೆ ನಮ್ಮ ಹತ್ತಿರ ಹಣವಿಲ್ಲ, ಒಮ್ಮೆ ಬಿತ್ತನೆ ಮಾಡಿಯೇ ಸಂಕಷ್ಟಕ್ಕೆ ಸಿಲುಕಿದ್ದೇವೆ, ಮುಂದಿನ 4-5 ದಿನಗಳಲ್ಲಿ ಉತ್ತಮವಾದ ಮಳೆಯಾದಲ್ಲಿ ಮಾತ್ರ ಬೆಳೆಗಳು ಉಳಿಯುತ್ತವೆ. ಇಲ್ಲವಾದಲ್ಲಿ ಸಂಪೂರ್ಣ ಬೆಳೆ ಒಣಗಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಕ್ಷಣ ವ್ಯಾಪಕ ಮಳೆಯ ಅಗತ್ಯವಿದೆ. ಮಳೆರಾಯ ಕೃಪೆ ತೋರದಿದ್ದರೆ ಜಿಲ್ಲೆಯ ಕೃಷಿ ವಲಯ ಈ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ.

ಮಳೆ ಕೊರತೆ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಜೂನ್ ಆರಂಭದಿಂದ ಇಂದಿನವರೆಗೆ ಸರಾಸರಿ ಶೇ. 55ರಿಂದ 69ರಷ್ಟು ಮಳೆ ಕೊರತೆ ಎದುರಾಗಿದ್ದು, ಮುಂಗಾರು ಆರಂಭದ ಈ ಹಂತದಲ್ಲೇ ಇಷ್ಟೊಂದು ಹಿನ್ನಡೆಯಾಗಿರುವುದು ಕೇವಲ ರೈತಾಪಿ ವರ್ಗ ಮಾತ್ರವಲ್ಲ, ಕೃಷಿಯನ್ನೇ ಆರ್ಥಿಕ ಹಿನ್ನೆಲೆಯನ್ನಾಗಿ ಹೊಂದಿರುವ ಪ್ರತಿಯೊಂದು ವಾಣಿಜ್ಯ ವಹಿವಾಟು ನಡೆಸುವ ವ್ಯಾಪಾರಸ್ಥರಲ್ಲಿಯೂ ತೀವ್ರ ಆತಂಕ ಮೂಡಿಸಿದೆ.

ಮಳೆಯ ಮುನ್ಸೂಚನೆ: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತಲೂ ಭಾರೀ ಪ್ರಮಾಣದ ಮಳೆ ಕೊರತೆ ಎದುರಾಗಿದೆ. ಬಿತ್ತನೆಯಾಗಿರುವ ಎಲ್ಲ ಬೆಳೆಗಳು ಒಣಗುತ್ತಿವೆ. ಹವಾಮಾನ ಇಲಾಖೆ ಸಧ್ಯದಲ್ಲಿಯೇ ಮಳೆಯ ಮುನ್ಸೂಚನೆ ನೀಡಿದೆ. ನಾವು ಕೂಡ ಆಶಾಭಾವನೆಯಲ್ಲಿದ್ದೇವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.

ತಾಲೂಕು ವಾಡಿಕೆ ಮಳೆ(ಮಿಮೀ) ಆಗಿರುವ ಮಳೆ(ಮಿಮೀ) ಮಳೆ ಕೊರತೆ(ಶೇ.)

ಗದಗ 82.5 31.2 62

ರೋಣ 78.4 26.5 66

ಶಿರಹಟ್ಟಿ 88.2 41.0 53

ನರಗುಂದ 71.0 22.1 69

ಮುಂಡರಗಿ 85.1 35.4 58

ಲಕ್ಷ್ಮೇಶ್ವರ 89.0 43.6 51

ಗಜೇಂದ್ರಗಡ 76.8 24.3 68

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಅಭಿನವ ಯಚ್ಚರ ಶ್ರೀಗಳ ಮೌನ ಅನುಷ್ಠಾನ ಮಂಗಲೋತ್ಸವ
ಲಕ್ಷ್ಮೇಶ್ವರದಲ್ಲಿ ಮಳೆಗಾಗಿ ಸೋಮೇಶ್ವರನಿಗೆ ಜಲಾಭಿಷೇಕ