ಹಲವಾರು ಶತಮಾನಗಳ ಐತಿಹ್ಯವನ್ನು ಶಿರೋಳದ ಯಚ್ಚರೇಶ್ವರ ಮಠ ಹೊಂದಿದೆ. ಶ್ರೀಮಠದ ಅಭಿನವ ಯಚ್ಚರೇಶ್ವರ ಶ್ರೀಗಳು ಕಳೆದ ಒಂದು ದಶಕದಿಂದ ಮಠದ ಸಾರಥ್ಯ ವಹಿಸಿಕೊಂಡಿದ್ದಾರೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ಯಚ್ಚರ ಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು 21 ದಿನಗಳ ಪರ್ಯಂತ ಲೋಕ ಕಲ್ಯಾಣಾರ್ಥವಾಗಿ ಜಾಗೃತ ಭೂಮಿ ಹೊಳೆಆಲೂರಿನ ಸುಕ್ಷೇತ್ರ ಯಚ್ಚರಸ್ವಾಮಿಗಳ ಮಠದಲ್ಲಿ ಕೈಗೊಂಡಿದ್ದ 4ನೇ ವರ್ಷದ ಮೌನ ಅನುಷ್ಠಾನದ ಮಹಾಮಂಗಲೋತ್ಸವ ಬುಧವಾರ (ಜೂ. 24) ಬೆಳಗ್ಗೆ 11 ಗಂಟೆಗೆ ಜರುಗಲಿದೆ.ಸಮಾರಂಭದಲ್ಲಿ ಮುರನಾಳದ ಮಳೇರಾಜೇಂದ್ರಸ್ವಾಮಿಮಠದ ಜಗನ್ನಾಥ ಶ್ರೀಗಳು, ತೆಲಂಗಾಣ ಬೆನಹಾಳದ ಸಂಗಮೇಶ್ವರ ಮಠದ ಸದಾಶಿವ ಮಹಾಂತ ಶಿವಾಚಾರ್ಯ ಶ್ರೀಗಳು, ಹೊಳೆಆಲೂರಿನ ಉಳವೇಂದ್ರಸ್ವಾಮಿ ಮಠದ ಅಲಮಯ್ಯ ಶ್ರೀಗಳು, ಲಿಂಗನಬಂಡಿ ಮೌನೇಶ್ವರ ಮಠದ ಉಳವೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು.ಹಿನ್ನೆಲೆ: ಹಲವಾರು ಶತಮಾನಗಳ ಐತಿಹ್ಯವನ್ನು ಶಿರೋಳದ ಯಚ್ಚರೇಶ್ವರ ಮಠ ಹೊಂದಿದೆ. ಶ್ರೀಮಠದ ಅಭಿನವ ಯಚ್ಚರೇಶ್ವರ ಶ್ರೀಗಳು ಕಳೆದ ಒಂದು ದಶಕದಿಂದ ಮಠದ ಸಾರಥ್ಯ ವಹಿಸಿಕೊಂಡಿದ್ದು, ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಶ್ರೀಗಳು ಕಳೆದ ನಾಲ್ಕು ವರ್ಷಗಳಿಂದ ಲೋಕ ಕಲ್ಯಾಣಾರ್ಥವಾಗಿ ಮೌನ ಅನುಷ್ಠಾನ ಕೈಗೊಳ್ಳುತ್ತಿದ್ದಾರೆ. ನಾಲ್ಕನೇ ವರ್ಷದ ಮೌನ ಅನುಷ್ಠಾನ ಜೂ. 24ರಂದು ಮಂಗಲೋತ್ಸವವಾಗಲಿದೆ.
22ನೇ ವಯಸ್ಸಿಗೆ ಜವಾಬ್ದಾರಿ: 22ನೇ ವಯಸ್ಸಿನಲ್ಲಿಯೇ ಅಭಿನವ ಯಚ್ಚರ ಶ್ರೀಗಳು ಶ್ರೀಮಠದ ಜವಾಬ್ದಾರಿ ವಹಿಸಿಕೊಂಡರು. ನಿತ್ಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಅಧ್ಯಾತ್ಮಕ್ಕೆ ಮೀಸಲಾಗಿರದೇ ಸಾಮಾಜಿಕ, ಶೈಕ್ಷಣಿಕ ಹಾಗೂ ಪರಿಸರ ರಕ್ಷಣೆ, ರೈತರಿಗೆ ಹಾಗೂ ಸೈನಿಕರಿಗೆ ಪಾದಪೂಜೆ, ವಿದ್ಯಾರ್ಥಿಗಳಿಗೆ ಪುರಸ್ಕಾರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಉಚಿತ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ, ಪರೀಕ್ಷಾ ಉಚಿತ ಕಾರ್ಯಾಗಾರ, ಸ್ವಚ್ಛತಾ ಕಾರ್ಯರ್ಕ್ರಮ, ಆರೋಗ್ಯ ಶಿಬಿರಗಳ ಮೂಲಕ ದೇಶಭಕ್ತಿ ವಿಚಾರಸಂಕಿರಣಗಳ ಮೂಲಕ ಗಮನ ಸೆಳೆದಿದ್ದಾರೆ.
ಜಾತ್ರಾ ವಿಶೇಷ: ಕೇವಲ ರಥೋತ್ಸವಕ್ಕೆ ಮೀಸಲಾಗಿದ್ದ ಯಚ್ಚರೇಶ್ವರ ಜಾತ್ರೆ ಇವರು ಅಧಿಕಾರ ವಹಿಸಿಕೊಂಡಾಗಿನಿಂದ ಜಾತ್ರೆಯ ರೂಪವೇ ಬದಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಮೊದಲ ಆದ್ಯತೆ ರೈತರು ಹಾಗೂ ಸೈನಿಕರಿಗಿದೆ. ಕೃಷಿ ಗೋಷ್ಠಿ, ಪರಿಸರ ಗೋಷ್ಠಿ, ರಾಜ್ಯ, ರಾಷ್ಟ್ರ ಮಟ್ಟದ ಕೃಷಿ ತಜ್ಞರನ್ನು, ಸಾಹಿತಿಗಳನ್ನು, ಸಮಾಜ ಸೇವಕರನ್ನು, ಪದ್ಮಶ್ರೀ ಪುರಸ್ಕೃತರನ್ನು ಕರೆಸಿ ಚಿಂತನಗೋಷ್ಠಿ ನಡೆಸಿದ್ದಾರೆ. ಪ್ರತಿ ತಿಂಗಳು ಹುಣ್ಣಿಮೆ ದಿನ ಶಿವಾನುಭವಗೋಷ್ಠಿ ಆಯೋಜಿಸುತ್ತಾರೆ.ಶಿಕ್ಷಣ ಸೇವೆಗೆ ಸಜ್ಜು: ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಶ್ರೀಮಠದ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯ, ಶಾಲೆ, ಕಾಲೇಜು ಸ್ಥಾಪನೆ ಮಾಡಿದ್ದಾರೆ. ಅದೇ ರೀತಿ ಸಂಸ್ಕೃತ ಪಾಠ ಶಾಲೆ ಹಾಗೂ ಗೋಶಾಲೆಯನ್ನು ಸ್ಥಾಪಿಸಲಾಗಿದೆ. ಶಿರೋಳದಲ್ಲಿ ಯಚ್ಚರೇಶ್ವರ ಸ್ವಾಮಿಗಳ ನೂತನ ಮಠ ಸ್ಥಾಪಿಸಲು ₹1.5 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಗೊಂಡಿದೆ. ಶೃಂಗೇರಿ ಶಾರದಾ ಪೀಠದ ಶ್ರೀಗಳ ಅಮೃತ ಹಸ್ತದಿಂದ ಈ ವರ್ಷ ಉದ್ಘಾಟನೆ ಕಾರ್ಯ ನಡೆಸುವ ಸಂಕಲ್ಪವನ್ನು ಶ್ರೀಗಳು ಹೊಂದಿದ್ದಾರೆ.
ಸಾಹಿತ್ಯಪ್ರೇಮಿಗಳು: ಪೂಜ್ಯರು ಸಾಹಿತ್ಯಪ್ರೇಮಿಗಳೂ ಆಗಿದ್ದು, ಸದ್ಯ ಪೂಜ್ಯರ ಅಂತರಂಗ ಎನ್ನುವ 350ಕ್ಕೂ ಹೆಚ್ಚು ನಾಣ್ಣುಡಿಗಳನ್ನು ಬರೆದಿದ್ದು, ಅವುಗಳನ್ನು ಒಟ್ಟುಗೂಡಿಸಿ ಅಂತರಂಗದ ಮಾತು ಎಂಬ ಪುಸ್ತಕವನ್ನು ಹೊರತರುವ ಉದ್ದೇಶ ಹೊಂದಿದ್ದು, ಜಾತ್ರೆಯ ಸಂದರ್ಭದಲ್ಲಿ ಈ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.ಹಲವಾರು ಪವಾಡ: ನಾಡಿನಲ್ಲಿ ನೂರಾರು ವರ್ಷಗಳ ಹಿಂದೆ ಜಗದ್ಗುರು ಯಚ್ಚರ ಸ್ವಾಮಿಗಳು ಹಲವಾರು ಪವಾಡಗಳನ್ನು ಮಾಡಿದ್ದಾರೆ. ಮೇಲಾಗಿ ರಾಜ್ಯದಲ್ಲಿ ಎಲ್ಲೆಲ್ಲಿ ಗವಿಮಠ ಇದೆಯೋ ಅಲ್ಲಿ ಶ್ರೀಗಳ ಗದ್ದುಗೆಗಳಿವೆ. ಯಚ್ಚರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮಠಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಅಭಿನವ ಯಚ್ಚರ ಶ್ರೀಗಳು ತಿಳಿಸಿದರು.