ಕನ್ನಡಪ್ರಭ ವಾರ್ತೆ ಬೀದರ್
ಸತತ ಮಳೆಯಿಂದಾಗಿ ಬಸವಕಲ್ಯಾಣದ ಕೋಹಿನೂರ್ ಹೋಬಳಿ ಭಾಗದಲ್ಲಿ ಭಾರಿ ಹಾನಿಯಾಗಿದ್ದು, ಕೆರೆ ಒಡೆದು 662 ರೈತರ 886 ಎಕರೆ ಜಮೀನು ಸಂಪೂರ್ಣ ನಾಶವಾಗಿರುವ ಪ್ರಾಥಮಿಕ ವರದಿಯಂತೆ ತಕ್ಷಣವೇ ರೈತರಿಗೆ ಪರಿಹಾರ ಒದಗಿಸಬೇಕು, ಇನ್ನು ಕೆರೆಯ ಹೂಳಿನಿಂದ 85ಕ್ಕೂ ಹೆಚ್ಚು ಬಾವಿಗಳು ತುಂಬಿದ್ದು ಅವುಗಳ ಪುನರುಜ್ಜೀವನಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ತಲಾ 1.5ಲಕ್ಷ ರು. ಕಾಮಗಾರಿಗೆ ಕಾರ್ಯಾದೇಶ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡಿ, ಪರಿಹಾರ ಕಾರ್ಯಗಳು ತಕ್ಷಣವೇ ಆರಂಭವಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಮಾತನಾಡಿ, ಬಸವಕಲ್ಯಾಣದಲ್ಲಿ 244 ಮಿ.ಮೀ. ಮಳೆಯಾಗಿದೆ. ಅಷ್ಟಕ್ಕೂ ಕೋಹಿನೂರ್ ಹೋಬಳಿ ಒಂದರಲ್ಲೇ 100 ಮಿ.ಮೀ. ಮಳೆ ದಾಖಲಾಗಿ ಕೆರೆ ಒಡೆದು ಸಾವಿರಾರು ಎಕರೆ ಜಮೀನು ಹಾಳಾಗಿದೆ. ನೂರಕ್ಕೂ ಹೆಚ್ಚು ಬಾವಿಗಳು ಕೆರೆ ಮಣ್ಣಿನಿಂದ ತುಂಬಿ ಹೋಗಿವೆ. 15ಕ್ಕೂ ಹೆಚ್ಚು ಸೇತುವೆಗಳು ಹಾನಿಗೊಳಗಾಗಿವೆ ಎಂದರು ತಿಳಿಸಿದರು.ರೈತರ ಜಮೀನುಗಳು ಒಂದು ದಶಕ ಕಳೆದರೂ ಸರಿಹೋಗದ ಪರಿಸ್ಥಿತಿಗೆ ಬಂದಿವೆ ಅವರಿಗೆ ಎಕರೆ 25ಸಾವಿರ ರುಪಾಯಿ ಪರಿಹಾರ ಕಲ್ಪಿಸಿ, ಬಾವಿಗಳ ಪುನರುಜ್ಜೀವನಗೊಳಿಸಿಕೊಡಲು 3ಲಕ್ಷ ರು. ಪರಿಹಾರ ಕೊಡಿ ಎಂದು ಆಗ್ರಹಿಸಿದರಲ್ಲದೆ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಉಡಬಾಳ ಸೇತುವೆಯ ನಾಲಾ ನೀರು ತುಂಬಿ ಹರಿದು ಅಕ್ಕಪಕ್ಕದ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ ಅವುಗಳಿಗೂ ಕನಿಷ್ಟ ತಲಾ 50ಸಾವಿರ ರು. ಪರಿಹಾರ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ, ನಿಯಮಾನುಸಾರ ರೈತರಿಗೆ ಪರಿಹಾರ ಧನ ಹಾಗೂ ಬಾವಿಗಳ ಪುನರುಜ್ಜೀವನಕ್ಕೆ ತಕ್ಷಣವೇ ಜಿಲ್ಲಾಡಳಿತ ಹಾಗೂ ಜಿಪಂ ಮುಂದಾಗಬೇಕು. ಬಿತ್ತನೆ ಬೀಜದ ಕೊರತೆಯಾಗದಂತೆ ಮತ್ತು ಕಾಳಸಂತೆಯಲ್ಲಿ ಬೀಜ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಬೇಕು ತಪ್ಪಿದಲ್ಲಿ ಕೃಷಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೂಗೂರ ಮಾತನಾಡಿ, ಈಗಾಗಲೇ ಶೇ. 60ರಷ್ಟು ಬಿತ್ತನೆ ಬೀಜ ವಿತರಣೆಯಾಗಿದ್ದು, ತೊಗರಿ 2.16ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದರೆ ಸೋಯಾ ಬೀಜಕ್ಕೆ ಈ ಬಾರಿ ಬೇಡಿಕೆ ಕಡಿಮೆಯಾಗಿದೆ. 12ಸಾವಿರ ಕ್ವಿಂಟಲ್ ಸೋಯಾ ದಾಸ್ತಾನು ಉಳಿದಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇನ್ನು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಕಳೆದ ವರ್ಷ ಕಳಪೆ ಬಿತ್ತನೆ ಬೀಜ ಪೂರೈಸಿದ 17 ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಆದರೂ ಅವುಗಳಿಗೆ ಕೃಷಿ ಬಿತ್ತನೆ ಬೀಜ, ರಸಗೊಬ್ಬರ ಮತ್ತಿತರರಗಳನ್ನು ಪೂರೈಸಲು ಮತ್ತೆ ಸರ್ಕಾರ ಟೆಂಡರ್ ನೀಡಿದೆ ಎಂದು ಆರೋಪಿಸಿದಾಗ ಈ ಕುರಿತಂತೆ ವರದಿ ಸಲ್ಲಿಸಿ ಅಂಥ ಕಂಪನಿಗಳಿದ್ದರೆ ಅವುಗಳ ಟೆಂಡರ್ ರದ್ದುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ನೂತನ ಸಂಸದರಾಗಿ ಆಯ್ಕೆಯಾಗಿರುವ ಸಾಗರ ಖಂಡ್ರೆ, ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್, ವಿಧಾನ ಪರಿಷತ್‌ಗೆ ಮರು ಆಯ್ಕೆಯಾಗಿರುವ ಡಾ. ಚಂದ್ರಶೇಖರ ಪಾಟೀಲ್, ಮಾಲಾ ಬಿ. ನಾರಾಯಣರಾವ್, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷರಾದ ಮಹ್ಮದ್ ಗೌಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ರಣದೀಪ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಡಾ. ಗಿರೀಶ ಬಡೋಲೆ, ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.