ಲಕ್ಷ್ಮೀ ನರಸಿಂಹಸ್ವಾಮಿ ಜಲಧಿ ಮಹೋತ್ಸವ ಯಶಸ್ವಿ

KannadaprabhaNewsNetwork | Published : May 1, 2024 1:19 AM

ಸಾರಾಂಶ

ಕರಿಕಂಬಳಿ ಗದ್ದುಗೆ ಮೇಲೆ ದೇವರನ್ನು ಅಲಂಕರಿಸಿ ಪಟ್ಟಕ್ಕೆ ಕೂರಿಸಿದರು. ಪಟ್ಟದ ಪೂಜಾರಿ ನಾರಾಯಣಪ್ಪ ತಣ್ಣೀರು ತಣಿ ಬಟ್ಟೆಯಲ್ಲಿ ಗೋವು ಮತ್ತು ಬೇವು ಕಚ್ಚಿದ ನಂತರ ಸುತ್ತೇಳು ಜನಪದ ದೈವಗಳಿಗೆ ಕೈಮುಗಿದರು. ಗೋವು ಸಿಂಪಡಿಸಿದರು. ಮಡಿವಾಳರು ಪಂಜಿನ ಸೇವೆ ಸಲ್ಲಿಸಿದರು. ಪಟ್ಟದ ಬಸವಪ್ಪಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ಕೆಂಪಸಾಗರ ಕೆರೆಯಂಗಳದಲ್ಲಿ ಶ್ರೀಪತಿಹಳ್ಳಿ ದಾಖಲೆ ಕಾಡುಗೊಲ್ಲರ ದೇವರಹಟ್ಟಿ ಲಕ್ಷ್ಮೀನರಸಿಂಹಸ್ವಾಮಿ ಜಲಧಿ ಮಹೋತ್ಸವ ಮತ್ತು ರಂಗಪ್ಪಸ್ವಾಮಿ ಹೊಳೆ ಉತ್ಸವ ಭರಣಿ ಮಳೆ ಆರಂಭದ ದಿನ ಶ್ರದ್ಧಾಭಕ್ತಿಯಿಂದ ನಡೆಯಿತು.

ಪಟ್ಟದ ನಾರಾಯಣಪ್ಪ ನೇತೃತ್ವದ ಪೂಜಾರಿಗಳು ಕೆಂಪೇಗೌಡರ ತಾಯಿ ಕೆಂಪಣ್ಣ ಅವರ ಸ್ಮರಣಾರ್ಥ ಮುಮ್ಮಡಿ ಕೆಂಪೇಗೌಡರು ಕಟ್ಟಿಸಿರುವ ಕೆಂಪಸಾಗರದ ಕೆರೆಯಂಗಳದಲ್ಲಿ ಚಿಲುಮೆ ತೆಗೆದರು. ಕರಿಕಂಬಳಿ ಗದ್ದುಗೆ ಮೇಲೆ ದೇವರನ್ನು ಅಲಂಕರಿಸಿ ಪಟ್ಟಕ್ಕೆ ಕೂರಿಸಿದರು. ಪಟ್ಟದ ಪೂಜಾರಿ ನಾರಾಯಣಪ್ಪ ತಣ್ಣೀರು ತಣಿ ಬಟ್ಟೆಯಲ್ಲಿ ಗೋವು ಮತ್ತು ಬೇವು ಕಚ್ಚಿದ ನಂತರ ಸುತ್ತೇಳು ಜನಪದ ದೈವಗಳಿಗೆ ಕೈಮುಗಿದರು. ಗೋವು ಸಿಂಪಡಿಸಿದರು. ಮಡಿವಾಳರು ಪಂಜಿನ ಸೇವೆ ಸಲ್ಲಿಸಿದರು. ಪಟ್ಟದ ಬಸವಪ್ಪಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಲೋಕಲ್ಯಾಣಕ್ಕಾಗಿ ಹರಕೆ ಹೊತ್ತಿದ್ದ ಬಾಳೇನಹಳ್ಳಿ ಕುಮಾರ್.ಬಿ.ಆರ್.ಅವರ ಪತ್ನಿ ಮಂಜುಳಾ ಕೆ.ಮೊದಲ ಪೂಜೆ ಸಲ್ಲಿಸಿದರು. ಕಳಸ ಕನ್ನಡಿಯೊಂದಿಗೆ ಚಿಲುಮೆಯ ಬಳಿ ಲಕ್ಷ್ಮೀನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಜಲಧಿಮಹೋತ್ಸವ ಮತ್ತು ರಂಗಪ್ಪಸ್ವಾಮಿ ಹೊಳೆ ಉತ್ಸವದ ಅಂಗವಾಗಿ ಚಿಲುಮೆಯ ಒರತೆ ನೀರಿಗೆ ಪೂಜಾರಿಗಳಾದ ಪುಟ್ಟಸ್ವಾಮಯ್ಯ, ಸುರೇಶ್, ಅನಂತಸ್ವಾಮಿ, ಯಧುಕುಮಾರ್, ಗೋಪಾಲ್,ಕಾಂತರಾಜು ಕಾಡುಗೊಲ್ಲರ ಜನಪದ ಪರಂಪರೆಯಂತೆ ದೈವಗಳಿಗೆ ಪೂಜೆ ಸಲ್ಲಿಸಿದರು. ಗರುಡಗಂಬದ ಪೂಜೆ ನಂತರ ಜಾಗಟೆ ಬಡಿದು, ಶಂಖನಾದ ಮೊಳಗಿಸಿದರು. ಲೋಕ ಕಲ್ಯಾಣವಾಗಲಿ, ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಗಂಗಾದೇವಿಗೆ ಆರತಿ ಬೆಳಗಿದರು. ದೇವರಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ವಿತರಿಸಲಾಯಿತು. ಜನಪದ ಕಲಾವಿದ ಶಿವಲಿಂಗಯ್ಯ ಮತ್ತು ತಂಡದವರು ಜನಪದ ಹಾಡಿದರು. ದೇವರ ಮೆರವಣಿಗೆಯ ಮೂಲಕ ವಳಗೆರೆಪಾಳ್ಯದ ಹೊಲಮಾಳದಲ್ಲಿ ಬರಿಗಾಲಿನಲ್ಲಿ ನಡೆದು, ಶ್ರೀಪತಿಹಳ್ಳಿ ಹೊರವಲಯದ ಮೂಲಕ ದೇವರ ಹಟ್ಟಿ ತಲುಪಿದರು. ದೈವ ಕುಣಿತದ ನಂತರ ಸಾಮೂಹಿಕ ಅನ್ನದಾನ ನಡೆಯಿತು. ಶ್ರೀಪತಿಹಳ್ಳಿ,ದೇವರ ಹಟ್ಟಿ, ಬಾಳೇನಹಳ್ಳಿ ಗ್ರಾಮಗಳ ಸಮಸ್ತ ಭಕ್ತರು ಭಾಗವಹಿಸಿದ್ದರು.

Share this article