ಚನ್ನಗಿರಿ ಪುರಸಭೆ ನೂತನ ಅಧ್ಯಕ್ಷರಾಗಿ ಲಕ್ಷ್ಮೀದೇವಮ್ಮ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ಪಟ್ಟಣದ ಪುರಸಭೆಗೆ ಶುಕ್ರವಾರ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷರಾಗಿ ಎರಡನೇ ಅವಧಿಗೂ ಬಿಜೆಪಿ ಸದಸ್ಯೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗಿದ್ದು, ಸದಸ್ಯೆ ಸರ್ವಮಂಗಳಮ್ಮ ಆಯ್ಕೆಯಾಗಿದ್ದಾರೆ.

- 2ನೇ ಅವಧಿಗೂ ಪ.ಜಾ ಮಹಿಳೆಗೇ ಮೀಸಲಾತಿ; ಅಧ್ಯಕ್ಷರಾಗಿ ಮರುಆಯ್ಕೆ । ಉಪಾಧ್ಯಕ್ಷಗಿರಿ ಕಾಂಗ್ರೆಸ್‌ ಪಾಲು, ಸರ್ವಮಂಗಳಮ್ಮ ಆಯ್ಕೆ - - - ಕನ್ನಡಪ್ರಭವಾರ್ತೆ, ಚನ್ನಗಿರಿ

ಪಟ್ಟಣದ ಪುರಸಭೆಗೆ ಶುಕ್ರವಾರ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮೀಸಲಾತಿ ಆಧಾರದ ಮೇಲೆ ಅಧ್ಯಕ್ಷರಾಗಿ ಎರಡನೇ ಅವಧಿಗೂ ಬಿಜೆಪಿ ಸದಸ್ಯೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗಿದ್ದು, ಸದಸ್ಯೆ ಸರ್ವಮಂಗಳಮ್ಮ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಸವಿತಾ ರಾಘವೇಂದ್ರ 10 ಮತಗಳನ್ನು ಪಡೆದು ಪರಾಭವಗೊಂಡರು. 14 ಮತಗಳನ್ನು ಪಡೆದ ಸರ್ವಮಂಗಳಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.

23 ಸದಸ್ಯ ಬಲದ ಪುರಸಭೆಯಲ್ಲಿ 10 ಬಿಜೆಪಿ, 10 ಕಾಂಗ್ರೇಸ್, 3 ಜೆಡಿಎಸ್ ಸದಸ್ಯರು ಇದ್ದಾರೆ. ಜೆಡಿಎಸ್‌ನ ಮೂವರು ಸದಸ್ಯರಲ್ಲಿ ಒಬ್ಬ ಸದಸ್ಯರು ಗೈರಾಗಿದ್ದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಸವರಾಜ ವಿ. ಶಿವಗಂಗಾ ಅವರು ಭಾಗವಹಿಸಿ, ಉಪಾಧ್ಯಕ್ಷ ಸ್ಥಾನ ಅಭ್ಯರ್ಥಿಗೆ ಕಾಂಗ್ರೆಸ್ ಸದಸ್ಯರು ಜೊತೆ ಶಾಸಕ ಮತ್ತು ಸಂಸದರು ಕೈ ಎತ್ತಿ ಬೆಂಬಲ ಸೂಚಿಸಿದರು.

ಮೂವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ಬಂದಿದ್ದ ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ನಡೆಸಿಕೊಟ್ಟರು.

ಈ ಸಂದರ್ಭ ಉಪವಿಭಾಗಾಧಿಕಾರಿ ಅಭಿಷೇಕ್, ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ಕಚೇರಿ ವ್ಯವಸ್ಥಾಪಕ ಆರಾಧ್ಯ, ಕಂಯ ಅಧಿಕಾರಿ ಮಂಜುನಾಥ್ ಹಾಜರಿದ್ದರು.

- - - ಬಾಕ್ಸ್

* ಮೀಸಲು ಬದಲಿಸ ಕೋರ್ಟ್‌

ಚನ್ನಗಿರಿ ಪುರಸಭೆಗೆ 2018ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದು 7 ವರ್ಷಗಳು ಕಳೆಯುತ್ತಿದ್ದು, ಪ್ರಥಮ ಅವಧಿಯಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಅದರಂತೆ 23 ಜನ ಚುನಾಯಿತ ಸದಸ್ಯರಲ್ಲಿ ಬಿಜೆಪಿಯಿಂದ 23ನೇ ವಾರ್ಡ್‌ನಿಂದ ಸ್ಪರ್ಧಿಸಿ ಜಯ ಗಳಿಸಿದ್ದ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಪ್ರಥಮ ಅವಧಿಯಲ್ಲಿ ಅಧ್ಯಕ್ಷರಾಗಿ ಆಧಿಕಾರ ನಡೆಸಿದ್ದರು.

ನಂತರ ಪುರಸಭೆ ಮೊದಲನೆ ಅವಧಿ ಅಧ್ಯಕ್ಷರ ಅವಧಿ ಮುಗಿದು, ಎರಡನೇ ಅವಧಿಗೂ ಪರಿಶಿಷ್ಟ ಜಾತಿಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಗೊಂಡಿತು. ಇದು ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಮೊದಲನೇ ಅವಧಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ ಸ್ಥಾನ ಮೀಸಲಾತಿ ಲಾಭ ಪಡೆದು ಅಧಿಕಾರ ನಡೆಸಿದ್ದಾರೆ. ಈಗ ಎರಡನೇ ಅವಧಿಗೂ ಪರಿಶಿಷ್ಟ ಜಾತಿಯ ಮಹಿಳೆಗೇ ಮತ್ತೆ ಮೀಸಲಾತಿ ನಿಗದಿ ಪ್ರಶ್ನಿಸಿದ ನ್ಯಾಯಾಲಯ ಮೊರೆಹೋಗಿದ್ದರು.

ನ್ಯಾಯಲಯದಲ್ಲಿ ಈ ಮೀಸಲು ವಿರುದ್ಧ ತಡೆಯಾಜ್ಞೆ ಸಿಗಲಿಲ್ಲ. ಆದಕಾರಣ ಮೊದಲೇ ನಿಗದಿಯಾದ ಮೀಸಲಾತಿಯಂತೆ ಎರಡನೇ ಅವಧಿಗೂ ಅಧ್ಯಕ್ಷರಾಗಿ ಬಿಜೆಪಿ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ ಅಧ್ಯಕ್ಷರಾಗಿದ್ದಾರೆ. ಪುರಸಭೆಯಲ್ಲಿ ಮೀಸಲಾತಿ ಆಧಾರದಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಇತಿಹಾಸವನ್ನು ಲಕ್ಷ್ಮೀದೇವಮ್ಮ ಬರೆದಿರುವುದು ವಿಶೇಷ.

- - -

-28ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ಪುರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಲಕ್ಷ್ಮೀದೇವಮ್ಮ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯೆ ಸರ್ವಮಂಗಳಮ್ಮ ಆಯ್ಕೆಯಾಗಿದ್ದು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಸವರಾಜ ವಿ. ಶಿವಗಂಗಾ, ಪುರಸಭೆ ಸದಸ್ಯರು ಅಭಿನಂದಿಸಿದರು.

Share this article