ಆಜಾದ್ ಶಾಲೆಗೆ ಜಾಗ ಮಂಜೂರು-ವಾಗ್ವಾದ

KannadaprabhaNewsNetwork |  
Published : May 01, 2026, 02:00 AM IST
ಮಹಾನಗರ ಪಾಲಿಕೆ | Kannada Prabha

ಸಾರಾಂಶ

ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಮೌಲಾನಾ ಆಜಾದ್ ಶಾಲೆಗೆ ಪಾಲಿಕೆಯ ಜಾಗವನ್ನು ಮಂಜೂರು ಮಾಡುವ ವಿಷಯವಾಗಿ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

ಹುಬ್ಬಳ್ಳಿ:

ನಗರದ ಪಾಲಿಕೆ ಸಭಾ ಭವನದಲ್ಲಿ ಗುರುವಾರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯು ಮೌಲಾನಾ ಆಜಾದ್ ಮಾದರಿ ಶಾಲೆಗೆ ಜಾಗ ನೀಡುವ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವಿನ ತೀವ್ರ ಸಂಘರ್ಷ ಹಾಗೂ ಗದ್ದಲಕ್ಕೆ ಸಾಕ್ಷಿಯಾಯಿತು.

ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ಮೌಲಾನಾ ಆಜಾದ್ ಶಾಲೆಗೆ ಪಾಲಿಕೆಯ ಜಾಗವನ್ನು ಮಂಜೂರು ಮಾಡುವ ವಿಷಯವಾಗಿ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು. ಸರ್ಕಾರದ ಆದೇಶವಿದ್ದರೂ ಶಾಲೆಗೆ ಜಾಗ ನೀಡಲು ಆಡಳಿತ ಮಂಡಳಿ ಅನಗತ್ಯ ವಿಳಂಬ ಮಾಡುತ್ತಿದೆ ಮತ್ತು ತಾರತಮ್ಯ ಧೋರಣೆ ಅನುಸರಿಸುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಕಿಡಿಕಾರಿದರು.

ಈ ಕುರಿತು ತಕ್ಷಣವೇ ಠರಾವು ಪಾಸ್ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗುತ್ತಾ ಭಾರಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸದಸ್ಯರ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಯಾವುದೇ ಜಾಗ ನೀಡುವ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆ ಹಾಗೂ ತಾಂತ್ರಿಕ ಅಂಶಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ನಂತರವಷ್ಟೇ ಕ್ರಮಕೈಗೊಳ್ಳುವುದು ಸೂಕ್ತ ಎಂದು ವಾದಿಸಿದರು. ಈ ವಿಚಾರವಾಗಿ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆಯಿತು. ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸಭೆಯನ್ನು ಕೆಲಕಾಲ ಮುಂದೂಡಲಾಯಿತು. ಕೊನೆಗೆ ಆಯುಕ್ತರು ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.

ತೆರಿಗೆ ಅವಧಿ ವಿಸ್ತರಣೆ...

ತೆರಿಗೆ ಪಾವತಿಗೆ ಶೇ.5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಏಪ್ರಿಲ್‌ 30ರಿಂದ ಮೇ 30ರ ವರೆಗೆ ವಿಸ್ತರಿಸಲು ಪಾಲಿಕೆ ನಿರ್ಣಯಿಸಲಾಯಿತು. ಈ ಸಂಬಂಧ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಈರೇಶ ಅಂಚಟಗೇರಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದ ಕಾರಣ ಸಮಯವನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಧ್ವನಿಗೂಡಿಸಿದರು. ಆಗ ಮೇಯರ್‌, ಮೇ 30ರ ವರೆಗೆ ವಿಸ್ತರಿಸಿ ರೂಲಿಂಗ್‌ ನೀಡಿದರು. ಇದಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ಖ್ಯಾತ ಗಾಯಕಿ ಆಶಾ ಬೋಸ್ಲೆ, ಛಾಯಾಗ್ರಾಹಕ ವಾಮನ ಬಾಂಢಗೆ ಸೇರಿದಂತೆ ಹಲವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಶಿರಹಟ್ಟಿಯ ಫಕೀರೇಶ್ವರ ರಥೋತ್ಸವ
ಎಚ್ಐವಿಗೆ ಸೂಕ್ತ ಚಿಕಿತ್ಸೆ ಪಡೆಯಲಿ: ಡಿ.ಎನ್. ಚಂದ್ರಶೇಖರ