ಪ್ರತ್ಯೇಕ ಬೇಡ, ಬೃಹತ್‌ ಪಾಲಿಕೆಗೆ ನಿರ್ಣಯ!

KannadaprabhaNewsNetwork |  
Published : May 01, 2026, 02:00 AM IST
ಮೇಯರ್‌ ಪೀಠದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಸದಸ್ಯರು. | Kannada Prabha

ಸಾರಾಂಶ

ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸುವ ಬಹುವರ್ಷದ ಬೇಡಿಕೆಗೆ ತಣ್ಣೀರು ಎರಚಿದಂತಾಗಿದೆ. ಮಹಾನಗರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕಿಸುವುದು ಬೇಡ. ಬೃಹತ್‌ ಮಹಾನಗರ ಪಾಲಿಕೆಯಾಗಿ ಮುಂದುವರಿಯಲಿ ಎಂದು ಆಡಳಿತ ಪಕ್ಷ ಅಭಿಪ್ರಾಯಪಟ್ಟಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜಿಸುವ ಪ್ರಸ್ತಾಪ ಕೈ ಬಿಟ್ಟು, ಹುಬ್ಬಳ್ಳಿ-ಧಾರವಾಡ ಬೃಹತ್‌ ಮಹಾನಗರ ಪಾಲಿಕೆಯನ್ನಾಗಿ ರೂಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ. ಯಾವುದೇ ಚರ್ಚೆ ಇಲ್ಲದೇ ತರಾತುರಿಯಲ್ಲಿ ಠರಾವು ಪಾಸ್‌ ಮಾಡಲಾಯಿತು. ಇದಕ್ಕೆ ತೀವ್ರ ಆಕ್ಷೇಪಿಸಿದ ಕಾಂಗ್ರೆಸ್‌, ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಧಾರವಾಡದ ಅಭಿವೃದ್ಧಿ ಬಿಜೆಪಿಗೆ ಬೇಕಾಗಿಲ್ಲ ಎಂದು ಧರಣಿ ನಡೆಸಿತು. ಅಲ್ಲದೇ ನಿರ್ಣಯದ ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿತು.

ಈ ಎಲ್ಲದರ ನಡುವೆ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಿಸುವ ಬಹುವರ್ಷದ ಬೇಡಿಕೆಗೆ ತಣ್ಣೀರು ಎರಚಿದಂತಾಗಿದೆ. ಮಹಾನಗರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕಿಸುವುದು ಬೇಡ. ಬೃಹತ್‌ ಮಹಾನಗರ ಪಾಲಿಕೆಯಾಗಿ ಮುಂದುವರಿಯಲಿ ಎಂದು ಆಡಳಿತ ಪಕ್ಷ ಅಭಿಪ್ರಾಯಪಟ್ಟಿದೆ.

ತರಾತುರಿ ನಿರ್ಣಯ:

ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಪರಿಷತ್‌ ಕಾರ್ಯದರ್ಶಿಗಳು ವಿಷಯ ಪಟ್ಟಿ ಓದಿದರು. ಅವರು ಓದಿ ಮುಗಿಸುತ್ತಿದ್ದಂತೆ ಸಭಾನಾಯಕ ಈರೇಶ ಅಂಚಟಗೇರಿ, ಈ ವಿಷಯವನ್ನು ಪಾಸ್‌ ಮಾಡಿ ಎಂದರು. ಅದಕ್ಕೆ ಮೇಯರ್‌, ಪ್ರತ್ಯೇಕ ಪಾಲಿಕೆ ಪ್ರಸ್ತಾವ ಕೈ ಬಿಟ್ಟು, ಹುಬ್ಬಳ್ಳಿ-ಧಾರವಾಡ ಎರಡನ್ನೂ ಸೇರಿಸಿ ಬೃಹತ್‌ ಮಹಾನಗರ ಪಾಲಿಕೆಯನ್ನಾಗಿ ಘೋಷಿಸಬೇಕು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ಹೇಳಿ ಠರಾವು ಪಾಸ್‌ ಮಾಡಿದರು. ಚರ್ಚೆಗೆ ಅವಕಾಶವೇ ಇಲ್ಲ:

ಮೇಯರ್‌ ರೂಲಿಂಗ್‌ ನೀಡುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಲು ಮೇಯರ್‌ ಪೀಠದ ಎದುರು ತೆರಳಿದರು. ಆಗ ಮೇಯರ್‌ ಸಭೆ ಮುಂದೂಡಿ ಅಲ್ಲಿಂದ ತೆರಳಿದರು. ನಿರ್ಣಯದ ಪ್ರತಿ ಹರಿದು ಬಿಜೆಪಿ ವಿರುದ್ಧ ಸದಸ್ಯರು ಘೋಷಣೆ ಕೂಗಿದರು.

ಕಾಂಗ್ರೆಸ್‌ ಆಕ್ರೋಶ:

ಧಾರವಾಡ ಪ್ರತ್ಯೇಕ ಪಾಲಿಕೆ ಮಾಡಬೇಕೆಂಬ ಬೇಡಿಕೆ ಬರೀ ನಮ್ಮದಷ್ಟೇ ಇರಲಿಲ್ಲ. ಅಲ್ಲಿನ ಜನತೆಯೂ ಮಾಡುತ್ತಿತ್ತು. ಜತೆಗೆ ಬಿಜೆಪಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಈ ಸಂಬಂಧ ಹಿಂದೆ ಠರಾವು ಪಾಸ್‌ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಸರ್ಕಾರ ಕೂಡ ಇದಕ್ಕೆ ಅನುಮೋದನೆ ನೀಡಿ, ರಾಜ್ಯಪಾಲರಿಗೆ ಕಳುಹಿಸಿದೆ. ಆದರೆ, ಈಗ ನೋಡಿದರೆ ಪ್ರತ್ಯೇಕಿಸುವುದು ಬೇಡ ಎಂದು ತರಾತುರಿಯಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ತಮ್ಮ ವಿರೋಧವಿದೆ ಎಂದು ಕಾಂಗ್ರೆಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಧಾರವಾಡ ಅಭಿವೃದ್ಧಿಪಡಿಸುವುದು ಬೇಕಿಲ್ಲ. ಅದಕ್ಕಾಗಿಯೇ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತ್ಯೇಕ ಮಾಡುವುದರಿಂದ ಅನುದಾನಕ್ಕೇನು ಕಡಿಮೆಯಾಗಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಈಗ ಪ್ರತ್ಯೇಕ ಪಾಲಿಕೆಯಾದರೆ ಕಾಂಗ್ರೆಸ್‌ಗೆ ಕ್ರೆಡಿಟ್‌ ಹೋಗುತ್ತದೆ ಎಂದು ತರಾತುರಿಯಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎಂದು ವಿರೋಧಿಸಿದರು. ಈ ವೇಳೆ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಮೇಯರ್‌ ಇಲ್ಲದ ಪೀಠದ ಎದುರಿಗೆ ಕೆಲಕಾಲ ಧರಣಿ ನಡೆಸಿ ಅಲ್ಲಿಂದ ತೆರಳಿದರು.

--------

ಶೀಘ್ರ ಸರ್ಕಾರಕ್ಕೆ ಹೊಸ ಪ್ರಸ್ತಾಪ

ಧಾರವಾಡ ಪ್ರತ್ಯೇಕ ಪಾಲಿಕೆಯಾಗಬೇಕೆನ್ನುವುದು ಬಹುವರ್ಷಗಳ ಬೇಡಿಕೆ. ಇದಕ್ಕಾಗಿ ಸಾಕಷ್ಟು ಹೋರಾಟ ನಡೆದಿವೆ. ಬಿಜೆಪಿ-ಕಾಂಗ್ರೆಸ್‌ ಶಾಸಕರೂ ಇದಕ್ಕೆ ಬೆಂಬಲಿಸಿದ್ದರು. ಈ ಹಿಂದೆ ಈ ಸಂಬಂಧ ಪಾಲಿಕೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದರೂ ಅಂಕಿತ ಬಿದ್ದಿಲ್ಲ ಅಷ್ಟೇ. ಈ ಪ್ರಸ್ತಾವ ಕೈ ಬಿಟ್ಟು ಬೃಹತ್‌ ಪಾಲಿಕೆಯಾಗಲಿ ಎಂಬುದು ಬಿಜೆಪಿ ವಾದ, ಪಾಲಿಕೆ ನಿರ್ಣಯ. ಶೀಘ್ರದಲ್ಲೇ ಈ ಹೊಸ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೇಯರ್‌ ತಿಳಿಸಿದ್ದಾರೆ.

ಪ್ರತ್ಯೇಕ ಪಾಲಿಕೆ ಏಕೆ ಬೇಡ?

16ನೇ ಹಣಕಾಸು ಆಯೋಗವು 10ರಿಂದ 40ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಿಗೆ ಭಾರೀ ಪ್ರಮಾಣದ ಅನುದಾನ ನೀಡುತ್ತಿದೆ. ಒಂದು ವೇಳೆ ಈಗಿರುವ ಮಹಾನಗರ ಪಾಲಿಕೆ ವಿಭಜಿಸಿದರೆ, ಎರಡೂ ನಗರಗಳು ಕಡಿಮೆ ಜನಸಂಖ್ಯೆಯ ವರ್ಗಕ್ಕೆ ಸೇರ್ಪಡೆಯಾಗುತ್ತವೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರಬೇಕಾದ ನೂರಾರು ಕೋಟಿ ಅಭಿವೃದ್ಧಿ ಅನುದಾನ ಕೈತಪ್ಪುವ ಮತ್ತು ಪ್ರಗತಿ ಕುಂಠಿತವಾಗುವ ಅಪಾಯವಿದೆ. ಆದಕಾರಣ ಪಾಲಿಕೆಯನ್ನು ವಿಭಜಿಸಿ ಧಾರವಾಡವನ್ನು ಪ್ರತ್ಯೇಕಿಸುವುದು ಬೇಡ. ಬದಲಿಗೆ ಬೃಹತ್‌ ಮಹಾನಗರ ಪಾಲಿಕೆಯನ್ನಾಗಿ ಮಾಡಲಿ ಎಂಬ ಬೇಡಿಕೆ ಬಿಜೆಪಿ ಶಾಸಕರ, ಪಾಲಿಕೆ ಸದಸ್ಯರ ಅಭಿಪ್ರಾಯ. ಈ ಕುರಿತು ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್‌ ಅವರು ರಾಜ್ಯಪಾಲರು, ಸರ್ಕಾರ ಹಾಗೂ ಮೇಯರ್‌ಗೆ ಪತ್ರ ಬರೆದಿದ್ದರು.

ಅನುದಾನವೇನೂ ಕಡಿಮೆ ಬರಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರವಿರುವುದರಿಂದ ಪ್ರತ್ಯೇಕ ಪಾಲಿಕೆ ಮಾಡಿದ ಶ್ರೇಯಸ್ಸು ಕಾಂಗ್ರೆಸ್‌ಗೆ ಹೋಗುತ್ತದೆ ಎಂದುಕೊಂಡು ಬಿಜೆಪಿ ಈ ರೀತಿ ತರಾತುರಿ ನಿರ್ಣಯ ಕೈಗೊಂಡಿದೆ. ಧಾರವಾಡ ಅಭಿವೃದ್ಧಿ ಪಡಿಸುವುದು ಅದಕ್ಕೆ ಬೇಕಾಗಿಲ್ಲ.

ಇಮ್ರಾನ್‌ ಎಲಿಗಾರ, ಪಾಲಿಕೆ ಪ್ರತಿಪಕ್ಷದ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಶಿರಹಟ್ಟಿಯ ಫಕೀರೇಶ್ವರ ರಥೋತ್ಸವ
ಎಚ್ಐವಿಗೆ ಸೂಕ್ತ ಚಿಕಿತ್ಸೆ ಪಡೆಯಲಿ: ಡಿ.ಎನ್. ಚಂದ್ರಶೇಖರ