ಕೆಲಸದ ಸ್ಥಳದಲ್ಲಿ ಮಹಿಳೆಯರು ಜಾಗೃತರಾಗಿರಬೇಕು. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಬಡ್ತಿ ಅಥವಾ ಇತರ ಆಮಿಷಗಳನ್ನು ಒಡ್ಡಿ ಅವರನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧ.
ಗದಗ: ಲಿಂಗ ತಾರತಮ್ಯ ಹಾಗೂ ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣ ಆಗಲು ನಾವೆಲ್ಲರೂ ಕೈಜೋಡಿಸಬೇಕು ಎಂದು ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡರ ತಿಳಿಸಿದರು.
ಗುರುವಾರ ನಗರದ ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜರುಗಿದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013ರ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆ 1961, ವಧು- ವರದಕ್ಷಿಣೆ ನಿಷೇಧ ತಡೆಗಟ್ಟುವ ಕರ್ನಾಟಕ ನಿಯಮಗಳು 2004ರ ಹಿನ್ನೆಲೆ ವರದಕ್ಷಿಣೆ ಪದ್ಧತಿಯನ್ನು ತಡೆಗಟ್ಟುವ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕೆಲಸದ ಸ್ಥಳದಲ್ಲಿ ಮಹಿಳೆಯರು ಜಾಗೃತರಾಗಿರಬೇಕು. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಬಡ್ತಿ ಅಥವಾ ಇತರ ಆಮಿಷಗಳನ್ನು ಒಡ್ಡಿ ಅವರನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧ ಎಂದು ಎಚ್ಚರಿಸಿದರು. ಯಾವುದೇ ತಪ್ಪು ಮಾಡದಿದ್ದಲ್ಲಿ ಮಹಿಳೆಯರು ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.ಕಚೇರಿಯಲ್ಲಿ ಮಹಿಳೆಯರ ಮೇಲೆ ಅಧಿಕಾರಿಗಳು ಕೆಲಸ ಕೊಡಿಸುವ ನಿಟ್ಟಿನಲ್ಲಿ ಅಸಭ್ಯ ವರ್ತನೆಯಿಂದ ನಡೆದುಕೊಳ್ಳಬಾರದು. ಕಚೇರಿಯ ಕೆಲಸಗಳು ಶಿಸ್ತಿನಿಂದ ನಡೆಯಲು ಹಿರಿಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ದೌರ್ಜನ್ಯ ಎಂದು ತಪ್ಪಾಗಿ ಅರ್ಥೈಸಬಾರದು. ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವುದು ನಮ್ಮ ಕರ್ತವ್ಯವಾಗಿದೆ. ವರದಕ್ಷಿಣೆ ನೀಡುವುದು ಮತ್ತು ಪಡೆಯುವುದು ಎರಡೂ ಅಪರಾಧ ಸಮಾಜದ ವಿವಿಧ ಹಂತಗಳಲ್ಲಿ ಇಂದಿಗೂ ಈ ಪದ್ಧತಿ ಜೀವಂತವಾಗಿದ್ದು, ಇದನ್ನು ಬೇರುಸಹಿತ ಕಿತ್ತೆಸೆಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಾರ್ವಜನಿಕ ಸಂಪರ್ಕದಲ್ಲಿರುವ ಇಲಾಖೆಯ ಸಿಬ್ಬಂದಿ ಜನಸಾಮಾನ್ಯರಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 839 ಸಮಿತಿಗಳನ್ನು ರಚಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ 731 ಸಮಿತಿಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ. ಬಾಕಿ ಉಳಿದಿರುವ ಸಮಿತಿಗಳನ್ನು ಶೀಘ್ರದಲ್ಲೇ ರಚಿಸಿ, ಎಲ್ಲ ಸಮಿತಿಗಳು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲಾಗುವುದು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಾಧಾ ಮಣ್ಣೂರು ಪ್ರಾಸ್ತವಿಕವಾಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಜಯಶ್ರೀ ಆರ್. ಸ್ವಾಗತಿಸಿದರು. ವಿಜಯಲಕ್ಷ್ಮಿ ಗುರುಬಸವನಗೌಡರ ನಿರೂಪಿಸಿ, ಪ್ರಸ್ತಾವನೆ ಬೋಧಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮಹಾಂತೇಶ ಸಜ್ಜನ, ಯುನಿಸೆಫ್ ಮಕ್ಕಳ ಸಂರಕ್ಷಣಾ ಘಟಕದ ಪ್ರಾದೇಶಿಕ ಸಂಯೋಜಕ ಹರೀಶ್ ಜೋಗಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿಕ್ಷಕ ಮಂಜುಳಾ ಸ್ವಾಮಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಪೊಲೀಸ್ ಇಲಾಖೆಯ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.