ಹಾವೇರಿಯಲ್ಲಿ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ.
ಹಾವೇರಿ: ನೂರಾರು ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೆ, ಗ್ರಾಮದ ಮಾನ್ಯತೆ ಇಲ್ಲದೆ ಬದುಕು ನಡೆಸುತ್ತಿದ್ದ ಕುಟುಂಬಗಳಿಗೆ ನೆಮ್ಮದಿಯ ಬದುಕು ನೀಡಲು ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ, ಭೂ ಗ್ಯಾರಂಟಿ ಮೂಲಕ ಹಕ್ಕುಪತ್ರ ನೀಡುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಮುಂದಿನ ತಲೆಮಾರಿಗೆ ಭೂಗ್ಯಾರಂಟಿ ನೀಡಲಾಗಿದೆ. ಇದರ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಇದು ಬಡವರ ಕೆಲಸ, ಬಡವರಿಗೆ ನೆಮ್ಮದಿ ಸಿಗಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ನೋಂದಣಿ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳು ತಂಡವಾಗಿ ಕೆಲಸ ಮಾಡಿದ್ದಾರೆ. ಇತಿಹಾಸದಲ್ಲಿ ಆಗದ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಹೋಗಿ ದಾಖಲೆ ಸಂಗ್ರಹಿಸಿದ್ದಾರೆ. ಬಡವರ ಪರವಾಗಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ನೆಮ್ಮದಿಯ ಬದುಕಿಗೆ ಭೂ ಗ್ಯಾರಂಟಿ ತರಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು.ಜನಪರ ಕ್ರಾಂತಿ: ಎರಡುವರೆ ವರ್ಷದಲ್ಲಿ 2,490 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಮೃತರಾದ 14.48 ಲಕ್ಷ ಜಮೀನುಗಳ ವಾರಸುದಾರರಿಗೆ ಇ-ಪೋತಿ ಆಂದೋಲನ ಮೂಲಕ ಪೌತಿ ಖಾತೆ ಮಾಡಲಾಗಿದೆ. 1,96,931 ಪೋಡಿ ದುರಸ್ತಿ ಮಾಡಲಾಗಿದೆ, 14.48 ಸರ್ವೇ ನಂಬರ್ ಪೌತಿ ಖಾತೆ ಪೂರ್ಣ ಮಾಡಲಾಗಿದೆ. ಡಿಜಿಟಲೀಕರಣದ ಮೂಲಕ 67 ಕೋಟಿ ದಾಖಲೆಗಳ ಸ್ಕ್ಯಾನಿಂಗ್ ಮಾಡಲಾಗಿದೆ, ಲ್ಯಾಂಡ್ ಬೀಟ್ ಮೂಲಕ 14.30 ಲಕ್ಷ ಸರ್ಕಾರಿ ಆಸ್ತಿ ದಾಖಲೆ ನೋಂದಣಿ ಮಾಡಲಾಗಿದೆ. ಕಾಗದ ರಹಿತ ಆಡಳಿತ ವ್ಯವಸ್ಥೆ ಹಿನ್ನೆಲೆಯಲ್ಲಿ ಇ-ಕಚೇರಿ ಅನುಷ್ಠಾನ ಮಾಡಲಾಗಿದೆ. ಕಾವೇರಿ ತಂತ್ರಾಂಶದ ಅಳವಡಿಕೆ ಮೂಲಕ ಸಂಪೂರ್ಣ ಪಾರದರ್ಶಕ ತರಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಸದ್ದಿಲ್ಲದೆ ಮಾಡಲಾಗಿದ್ದು, ಮೌನವಾಗಿ ನಡೆದ ಜನಪರ ಕ್ರಾಂತಿಯಾಗಿದೆ ಎಂದು ಹೇಳಿದರು.ತಹಸೀಲ್ದಾರ್ ಕೋರ್ಟ್‌ನ ಸಾವಿರ ದಿನಗಳ ಬಾಕಿ ಇದ್ದ 10,774 ಪ್ರಕರಣಗಳಲ್ಲಿ ಈಗ 492 ಬಾಕಿ ಇವೆ, ಡಿ.ಸಿ. ಕೋರ್ಟನ 73,624 ಪ್ರಕರಣಗಳಲ್ಲಿ 11,990 ಬಾಕಿ ಇವೆ, ಎಸಿ ಕೋರ್ಟ್‌ನಲ್ಲಿ ಐದು ವರ್ಷದ ಬಾಕಿ ಪ್ರಕರಣ 32,337ರಲ್ಲಿ 3,715 ಬಾಕಿ ಇವೆ. 2.21 ಕೋಟಿ ಆರ್‌ಟಿಸಿಗೆ ಆಧಾರ್ ನೋಂದಣಿ ಮಾಡಲಾಗಿದೆ. ಸಿವಿಲ್ ಕೋರ್ಟ್‌ನಲ್ಲಿಯ ಅರ್ಧ ಪ್ರಕರಣಗಳು ಭೂ ವ್ಯಾಜ್ಯದ ಪ್ರಕರಣಗಳಾಗಿವೆ. ಜಿಲ್ಲಾ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗಳಲ್ಲಿ ಭೂ ವಾಜ್ಯ ಪ್ರಕರಣಗಳು ನಡೆಯುತ್ತಿವೆ. ಭೂ ವಾಜ್ಯಗಳಿಗೆ ವಿರಾಮ ಹಾಕಲು ಭೂ ಗ್ಯಾರಂಟಿ ತರಲಾಗಿದೆ. ಮುಖ್ಯಮಂತ್ರಿಗಳು ಹಕ್ಕುಪತ್ರ ವಿತರಣೆಯನ್ನು ಆಂದೋಲನೆ ರೀತಿಯಲ್ಲಿ ಮಾಡಲು ಸೂಚಿಸಿದ ಹಿನ್ನೆಲೆಯಲ್ಲಿ ಅವರ ಸೂಚನೆಯನ್ನು ಚಾಚೂ ತಪ್ಪದೇ ಜಾರಿಗೆ ತರಲಾಗಿದೆ ಎಂದರು.ಗ್ರಾಮ ಲೆಕ್ಕಾಧಿಕಾರಿಗಳಿಂದ ಉಪ ವಿಭಾಗಾಧಿಕಾರಿಗಳ ವರೆಗೆ ಎಲ್ಲರ ಪರಿಶ್ರಮದಿಂದ ಜನತೆ ಪರವಾಗಿ ಕೆಲಸಮಾಡಲು ಸಾಧ್ಯವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ₹5 ಕೋಟಿ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಕ್ಕುಪತ್ರ ವಿತರಣೆ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ತಹಸೀಲ್ದಾರಗಳು, ಎಡಿಎಲ್ಆರ್, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಇತರರನ್ನು ಸನ್ಮಾನಿಸಲಾಯಿತು. ಹಕ್ಕುಪತ್ರ ವಿತರಣೆ: ವೇದಿಕೆಯಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರು ಸೇರಿದಂತೆ ಗಣ್ಯರು ಕಂದಾಯ, ಇ-ಪೋತಿ, ದರಖಾಸ್ತ್ ಪೋಡಿ, ಪಿಎಂಜಿಎ, ಬಗರಹುಕುಂ ಹಕ್ಕುಪತ್ರಗಳನ್ನು ಹಾವೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದರು. ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಗೃಹ ಸಚಿವ ಡಾ. ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬೃಹತ್ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ, ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಚಿವರಾದ ಶಿವರಾಜ ತಂಗಡಗಿ, ಡಿ. ಸುಧಾಕರ್, ಸುರೇಶ ಬಿ.ಎಸ್., ಮಂಕಾಳ ವೈದ್ಯ, ಮಧು ಬಂಗಾರಪ್ಪ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಎಸ್. ಖಾದ್ರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಶಾಸಕರಾದ ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ ಅಹ್ಮದಖಾನ್ ಪಠಾಣ, ಶ್ರೀನಿವಾಸ ಮಾನೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿಶಾಲ್ ಆರ್., ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.