ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ಸಹಿ ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಠಿಸಿ ಜಮೀನನ್ನು ನೋಂದಣಿ ಮಾಡಿಸಿಕೊಂಡಿದ್ದು, ವಂಚಕರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ನಮ್ಮ ಜಮೀನನ್ನು ಮತ್ತೆ ನಮ್ಮ ಹೆಸರುಗಳಿಗೆ ಖಾತೆ ಮಾಡಿಕೊಡಬೇಕೆಂದು ವಂಚನೆಗೊಳಗಾದ ರತಿ ವಿಶ್ವನಾಥ್ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹಾಸನ ತಾಲೂಕು ದೊಡ್ಡಗೇಣಿಗೆರೆ ಅಂಚೆ, ಶಾಂತಿಗ್ರಾಮ ಹೋಬಳಿಯ ತ್ಯಾವೀಹಳ್ಳಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ನನ್ನ ಪತಿಯಾದ ವಿಶ್ವನಾಥ್, ಗ್ರಾಮದ ಸರ್ವೆ ನಂ ೧೮/೪ರಲ್ಲಿ ೭ ಗುಂಟೆ ಜಮೀನಿನ ಪೈಕಿ ೧ ಗುಂಟೆ ಖರಾಬು ಇದ್ದು, ಇನ್ನುಳಿದ ೬ ಗುಂಟೆ ಜಮೀನು ಒಟ್ಟು ಕುಟುಂಬದ ಜಂಟಿ ಖಾತೆಯಾಗಿರುತ್ತದೆ. ಈ ಜಮೀನನ್ನು ಮಾರಾಟ ಮಾಡಲು ತ್ಯಾವೀಹಳ್ಳಿ ಗ್ರಾಮದ ಚಂದ್ರೇಗೌಡರ ಮಗನಾದ ಟಿ.ಸಿ. ಮಧುಸೂಧನ್ ಮಾರಾಟಕ್ಕೆ ಕೊಡುತ್ತೀರಾ ಎಂದು ಕೇಳಿದ್ದರು. ನಂತರ ೨೦೨೧ ಜುಲೈ ೫ರಂದು ಈ ಜಮೀನಿಗೆ ಗುಂಟೆ ಒಂದಕ್ಕೆ ರು. ೩,೧೫,೦೦೦ ಗಳಂತೆ ಮಾತುಕತೆ ನಡೆಸಿ ಕ್ರಯ ಒಪ್ಪಂದದ ಕರಾರು ಮಾಡಿಕೊಂಡಿದ್ದೆವು. ಆದರೆ ಮಧುಸೂದನ್‌ರವರು ನಮಗೆ ಗೊತ್ತಿಲ್ಲದಂತೆ ಬೇರೆ ಯಾವುದೋ ವ್ಯಕ್ತಿಯನ್ನು ಕರೆತಂದು ನಮಗೆ ತಿಳಿಸದೆ ರು. ೫ ಲಕ್ಷದಿಂದ ೬ ಲಕ್ಷದವರೆಗೂ ಮಾರಾಟ ಮಾಡಿಕೊಂಡು ನನ್ನ ಹೆಸರಿನಲ್ಲಿರುವ ಆಧಾರ್ ಕಾರ್ಡ್‌ನ್ನು ದುರುಪಯೋಗ ಮಾಡಿಕೊಂಡು ಯಾವುದೋ ೩ನೇ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ನೋಂದಣಿ ಕಚೇರಿಯಲ್ಲಿ ಪೋಟೋ ತೆಗೆಸಿ ೧೬-೦೫-೨೦೨೪ರಂದು ನೋಂದಣಿ ಮಾಡಿಸಿಕೊಂಡಿರುತ್ತಾರೆ ಎಂದು ಆರೋಪಿಸಿದರು.
ಚಂದ್ರೇಗೌಡರ ಮಗನಾದ ಮಧುಸೂಧನ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಸತ್ಯಾಂಶ ತಿಳಿದು ನಮ್ಮ ಜಮೀನನ್ನು ಮತ್ತೆ ನಮ್ಮ ಹೆಸರುಗಳಿಗೆ ಖಾತೆ ಮಾಡಿಕೊಡಬೇಕೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ರತಿಯ ಪತಿ ವಿಶ್ವನಾಥ್ ಇದ್ದರು.