ಮಳೆಗೆ ಭೂ ಕುಸಿತ : ಚಿಕ್ಕಮಗಳೂರು ಜಿಲ್ಲೆಗೆ ಕೇಂದ್ರದ ಭೂ ವಿಜ್ಞಾನಿಗಳ ತಂಡ ಭೇಟಿ- ಪರಿಶೀಲನೆ

KannadaprabhaNewsNetwork | Updated : Aug 11 2024, 12:24 PM IST

ಸಾರಾಂಶ

ಚಿಕ್ಕಮಗಳೂರು, ಕಾಫಿ ನಾಡಿನಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಹಲವೆಡೆ ಉಂಟಾಗಿದ್ದ ಭೂ ಕುಸಿತದ ಸ್ಥಳಗಳಿಗೆ ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡ ಶನಿವಾರ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿತು.

 ಚಿಕ್ಕಮಗಳೂರು :  ಕಾಫಿ ನಾಡಿನಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಹಲವೆಡೆ ಉಂಟಾಗಿದ್ದ ಭೂ ಕುಸಿತದ ಸ್ಥಳಗಳಿಗೆ ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡ ಶನಿವಾರ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿತು.

ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಹಿರಿಯ ಭೂ ವಿಜ್ಞಾನಿ ಸಿಂಥಿಲ್‌ ಕುಮಾರ್‌ ನೇತೃತ್ವದ ತಂಡ ಮೂರು ದಿನಗಳ ಕಾಲ ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಲು ಉದ್ದೇಶಿಸಿದೆ. ಈ ಬಾರಿ ಮಳೆಯಿಂದಾಗಿ ಜಿಲ್ಲೆಯ15 ಕಡೆಗಳಲ್ಲಿ ದೊಡ್ಡಮಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ಈ ಪಟ್ಟಿಯನ್ನು ಭೂ ವಿಜ್ಞಾನಿಗಳಿಗೆ ಜಿಲ್ಲಾಡಳಿತ ಸಲ್ಲಿಸಿದೆ.

ಮೊದಲ ದಿನವಾದ ಶನಿವಾರದಂದು ಮುಳ್ಳಯ್ಯನಗಿರಿ ಹಾಗೂ ಕವಿಕಲ್‌ ಗಂಡಿ ಸೇರಿದಂತೆ ಬಾಬಾಬುಡನ್‌ ಗಿರಿ ರಸ್ತೆಯ 5 ಕಡೆಗಳಲ್ಲಿ ಪರಿಶೀಲನೆ ನಡೆಸಿತು.

ಭಾನುವಾರ ಹಾಗೂ ಸೋಮವಾರದಂದು ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಿಗೆ ಈ ತಂಡ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಸಿ. ದೀಕ್ಷಿತ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

ಕೇಂದ್ರ ತಂಡ ಭೇಟಿ:

2019ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ ಸೇರಿದಂತೆ ಹಲವೆಡೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಹಲವು ಜನ ಮೃತಪಟ್ಟಿದ್ದರು, ಮನೆ, ತೋಟ, ಜಮೀನುಗಳನ್ನು ಕಳೆದುಕೊಂಡಿದ್ದರು. ಆಗ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಕರ್ನಾಟಕ ವಲಯದ ಹಿರಿಯ ಭೂ ವಿಜ್ಞಾನಿ ರಮೇಶ್‌ ದಿಕ್ಪಾಲ್‌ ನೇತೃತ್ವದ ತಂಡ ಸ್ಥಳೀಯ ಗಣಿ ಮತ್ತು ಹಿರಿಯ ಭೂ ವಿಜ್ಞಾನಿಗಳ ತಂಡ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿತ್ತು. ಭೂ ಕುಸಿತಕ್ಕೆ ಕಾರಣದ ಜತೆಗೆ ಎಲ್ಲೆಲ್ಲಿ ಡೇಂಜರ್‌ ಝೋನ್‌ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು.

ಆದರೆ, ಈಗ ನೆರೆಯ ಕೇರಳದ ವಯನಾಡಿನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಜನ ಮೃತಪಟ್ಟ ಹಿನ್ನಲೆಯಲ್ಲಿ ಈ ಬಾರಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಮೇರೆಗೆ ಚಿಕ್ಕಮಗಳೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 15 ದಿನಗಳಿಂದ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಭೂ ವಿಜ್ಞಾನಿಗಳು ಕನ್ನಡಪ್ರಭಕ್ಕೆ ತಿಳಿಸಿದ್ದು, ಒಂದು ತಂಡ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದೆ ಎಂದು ಹೇಳಿದ್ದಾರೆ.ಪೋಟೋ ಪೈಲ್‌ ನೇಮ್‌ 10 ಕೆಸಿಕೆಎಂ 7ಚಿಕ್ಕಮಗಳೂರಿನ ಕವಿಕಲ್‌ ಗಂಡಿ ಬಳಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಹಿರಿಯ ಭೂ ವಿಜ್ಞಾನಿ ಸಿಂಥಿಲ್‌ಕುಮಾರ್‌ ನೇತೃತ್ವದ ತಂಡ ಭೂ ಕುಸಿತವನ್ನು ಪರಿಶೀಲಿಸಿತು.

Share this article