ಭೂಮಾಪಕರ ಅನಿರ್ದಿಷ್ಟ ಅವಧಿ ಮುಷ್ಕರ: 3 ಸಾವಿರ ಪ್ರಕರಣ ಬಾಕಿ

KannadaprabhaNewsNetwork |  
Published : Mar 31, 2026, 02:30 AM IST
ಮುಷ್ಕರನಿರತ ಭೂಮಾಪಕರು | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನ ಭೂಮಾಪನ ಇಲಾಖೆಯ ೫೦ಕ್ಕೂ ಅಧಿಕ ಪರವಾನಗಿ ಸಹಿತ ಭೂಮಾಪಕರು ಒಂದು ತಿಂಗಳಿಂದ ಮುಷ್ಕರ ನಡೆಸುತ್ತಿದ್ದು, ತಾಲೂಕಿನಲ್ಲಿ ೩ ಸಾವಿರ ಭೂಮಾಪನ ಪ್ರಕರಣಗಳು ಬಾಕಿ ಉಳಿದಿದ್ದಲ್ಲದೆ, ಸೇವಾ ಭದ್ರತೆ ಸಿಗುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಮಹಮದ್‌ರಫಿಕ್ ಮಾಳಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಹಾನಗಲ್ಲ: ತಾಲೂಕಿನ ಭೂಮಾಪನ ಇಲಾಖೆಯ ೫೦ಕ್ಕೂ ಅಧಿಕ ಪರವಾನಗಿ ಸಹಿತ ಭೂಮಾಪಕರು ಒಂದು ತಿಂಗಳಿಂದ ಮುಷ್ಕರ ನಡೆಸುತ್ತಿದ್ದು, ತಾಲೂಕಿನಲ್ಲಿ ೩ ಸಾವಿರ ಭೂಮಾಪನ ಪ್ರಕರಣಗಳು ಬಾಕಿ ಉಳಿದಿದ್ದಲ್ಲದೆ, ಸೇವಾ ಭದ್ರತೆ ಸಿಗುವವರೆಗೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಮಹಮದ್‌ರಫಿಕ್ ಮಾಳಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದ ೬ ಸಾವಿರ ಇಂತಹ ಭೂಮಾಪಕರ ೨೦ ವರ್ಷಗಳ ಸಮಸ್ಯೆ ಇದಾಗಿದ್ದು, ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಸಮಸ್ಯೆ ಪರಿಹರಿಸುತ್ತಿಲ್ಲ. ಹಾನಗಲ್ಲ ತಾಲೂಕಿನಲ್ಲಿ ೨೦೦೨ರಿಂದ ಪರವಾನಗಿ ಸಹಿತ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ನಮಗೆ ಸರಿಯಾದ ವೇತನವಿಲ್ಲ. ಸರ್ವೇ ಮಾಡಿದ ಸಂಭಾವನೆಯೂ ಸಿಗುತ್ತಿಲ್ಲ. ಒಂದು ಸರ್ವೇ ಪ್ರಕರಣಕ್ಕೆ ೧೨೦೦ ರು. ನಿಗದಿ ಮಾಡಿದ್ದಾರೆ. ಅದೂ ಕೂಡ ಶೇ.೯೦ರಷ್ಟು ಬಾಕಿ ಇದೆ. ಹಾನಗಲ್ಲ ತಾಲೂಕಿನಲ್ಲಿ ಇದ್ದ ೬೦ ಸಾವಿರ ಭೂಮಾಪನ ಪ್ರಕರಣಗಳನ್ನು ಪೂರ್ಣಗೊಳಿಸಿದ್ದೇವೆ. ಈಗ ನಾವು ಒಂದು ತಿಂಗಳ ಮುಷ್ಕರದಿಂದಾಗಿ ಹಾನಗಲ್ಲ ತಾಲೂಕಿನಲ್ಲಿ ಮತ್ತೆ ೩ ಸಾವಿರ ಪ್ರಕರಣಗಳು ಬಾಕಿ ಉಳಿದಿವೆ ಎಂದರು.

ತಾಲೂಕಿನ ಭೂಮಾಪನ ಇಲಾಖೆಯಲ್ಲಿ ೭ ಜನ ಸರ್ಕಾರಿ ಭೂಮಾಪಕರಿದ್ದರೂ ಕೂಡ ಕ್ಷೇತ್ರಗಳಿಗೆ ತೆರಳಿ ಭೂಮಾನ ಮಾಡುವವರು ಕೇವಲ ಇಬ್ಬರು ಮಾತ್ರ. ಇಷ್ಟಾಗಿ ನಾವು ೫೦ ಜನ ವಿಳಂಬವಿಲ್ಲದೆ ಸೇವೆ ಸಲ್ಲಿಸಿದರೂ ಕೂಡ ನಮಗೆ ಸಿಗಬೇಕಾದ ಸೌಲಭ್ಯ, ಸೇವಾ ಭದ್ರತೆ ಇಲ್ಲ. ಕಂದಾಯ ಗ್ರಾಮ, ಪೋಡಿ ಮುಕ್ತಿ, ಕರೆ ಅಳತೆ, ಸ್ವಾಮ್ಯತ್ವ, ಬರಕಾಸ್ತ ಪೋಡಿ, ಕೋರ್ಟ್‌ ಪ್ರಕರಣಗಳು, ವ್ಯಾಜ್ಯ ಪ್ರಕರಣಗಳು, ಆಕಾರಂಬಂದ ಸಹಿತ ಎಲ್ಲವನ್ನೂ ನಾವೇ ಅಳತೆ ಮಾಡಿದ್ದೇವೆ. ನಿಯಮದಲ್ಲಿ ಇವೆಲ್ಲವನ್ನೂ ನಾವೇ ಮಾಡಬೇಕಾಗಿರಲಿಲ್ಲ. ಆದರೆ ನಾವು ಕರ್ತವ್ಯ ಲೋಪಕ್ಕೆ ಒಳಗಾಗಬಾರದು ಎಂದು ಈ ಎಲ್ಲ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೂ ಕೂಡ ನಮಗೆ ವೇತನವಿಲ್ಲ ಎಂದರು.

ಮನೆ ಹಕ್ಕುಪತ್ರ: ಹಾನಗಲ್ಲ ತಾಲೂಕಿನಲ್ಲಿ ಮನೆಗಳ ಹಕ್ಕು ಪತ್ರ ವಿತರಣೆಗೆ ಬೇಕಾಗುವ ಸರ್ವೇ ಕಾರ್ಯವನ್ನು ಹಗಲಿರುಳೆನ್ನದೆ ಮಾಡಿ ಮುಗಿಸಿದ್ದೇವೆ. ತಾಲೂಕು ಹಕ್ಕು ಪತ್ರ ನೀಡುವಲ್ಲಿ ಮೊದಲ ಸ್ಥಾನಕ್ಕೆ ಬರುವಲ್ಲಿ ನಮ್ಮದೂ ದೊಡ್ಡ ಪಾತ್ರವಿದೆ. ಆದರೆ ನಮ್ಮ ಸೇವೆಗೆ ಯಾವುದೇ ಮನ್ನಣೆ ಇಲ್ಲದಿರುವುದು ದುಃಖದ ಸಂಗತಿ ಎಂದರು.

ರಾಜ್ಯದ ದೂರದ ಜಿಲ್ಲೆಗಳಿಂದ ಬಂದು ಇಲ್ಲಿ ಆಶಾ ಭಾವನೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ. ರೈತರ ಜಮೀನಿನಲ್ಲಿ, ಕರೆಗಳಲ್ಲಿ, ಕಾಡಿನಲ್ಲಿ ಜೀವದ ಹಂಗು ತೊರೆದು ಸರ್ವೇ ಮಾಡಬೇಕಾಗುತ್ತದೆ. ಆದರೆ ಇಲಾಖೆಯಿಂದ ಸೇವಾ ಭದ್ರತೆ ಹಾಗೂ ಜೀವ ರಕ್ಷಣೆಗೆ ಯಾವುದೇ ಕ್ರಮಗಳಿಲ್ಲ. ಜೀವ ವಿಮೆ ಕೂಡ ಇಲ್ಲ. ಸರ್ಕಾರ ದುಡಿಸಿಕೊಳ್ಳುತ್ತದೆ. ಆದರೆ ನಮ್ಮ ಸೇವೆಗೆ ಬೆಲೆ ಕಟ್ಟುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಅಣ್ಣಾರಾಯ, ಸರ್ವೇಯರಗಳಾದ ಮಂಜುನಾಥ ದೇವಿಹೊಸೂರ, ವಿನಾಯಕ ಅಂಬಲಿ, ನವೀನ ಕಮ್ಮಾರ, ಸುನೀಲ ಆಡೂರ, ಚನ್ನಬಸಪ್ಪ ಹರವಿಮಠ, ಶಶಿಧರ ಎಸ್.ಆರ್., ರೇವಣಸಿದ್ದಪ್ಪ ಲಮಾಣಿ, ಗುಡ್ಡಪ್ಪ ಮಲ್ಲಾಪುರ ಮೊದಲಾದವರು ಇದ್ದರು.

ಭೂಮಾಪಕರ ಮುಷ್ಕರದಿಂದ ರೈತರು ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರ ಇಂತಹ ಪ್ರಕರಣಗಳನ್ನು ಕೂಡಲೇ ಬಗೆಹರಿಸಬೇಕು. ಅನಿವಾರ್ಯವಾದರೆ ನಾವು ಪರವಾನಗಿ ಭೂಮಾಪಕರ ಮುಷ್ಕರ ಬೆಂಬಲಿಸಿ ಸರ್ವೇ ಇಲಾಖೆಗೆ ಬೀಗ ಹಾಕಿ ಬೆಂಬಲಿಸಲು ಯೋಚಿಸುತ್ತಿದ್ದೇವೆ ಎಂದು ಹಾನಗಲ್ಲ ತಾಲೂಕು ರೈತಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವದಂತಿ ನಂಬಬೇಡಿ, ಆರೋಗ್ಯವಾಗಿದ್ದೇನೆ- ಶಾಸಕ ಶಿವಣ್ಣನವರ
ಭಗವಾನ್ ಮಹಾವೀರರು ತತ್ವಗಳು ಜೀವನ ಉನ್ನತೀಗೇರಿಸುವ ಮಾರ್ಗಗಳು