ಹೊಸದಾಗಿ ನಿರ್ಮಾಣ ಆಗಿರುವ ಪಟ್ಟಣದ ಪ್ರಮುಖ ರಸ್ತೆಯ ಪುಟ್‌ಪಾತ್ ಗೂಡಂಗಡಿಗಳ ಪಾಲಾಗಿದೆ. ಇಡೀ ಪುಟ್‌ಪಾತ್ ಅನ್ನು ಗೂಡಂಗಡಿಗಳು ಅತಿಕ್ರಮಿಸಿದ್ದರಿಂದ ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ!
ಮಾರುತಿ ಶಿಡ್ಲಾಪೂರ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಹೊಸದಾಗಿ ನಿರ್ಮಾಣ ಆಗಿರುವ ಪಟ್ಟಣದ ಪ್ರಮುಖ ರಸ್ತೆಯ ಪುಟ್‌ಪಾತ್ ಗೂಡಂಗಡಿಗಳ ಪಾಲಾಗಿದೆ. ಇಡೀ ಪುಟ್‌ಪಾತ್ ಅನ್ನು ಗೂಡಂಗಡಿಗಳು ಅತಿಕ್ರಮಿಸಿದ್ದರಿಂದ ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ!
ಪಟ್ಟಣದಲ್ಲಿ ಇರುವ ಮುಖ್ಯ ರಸ್ತೆ ಶಿವಮೊಗ್ಗ, ಹಾವೇರಿ, ಶಿರಸಿ, ಹುಬ್ಬಳ್ಳಿ ಮತ್ತು ಗದಗ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ಈ ರಸ್ತೆ ಅಗಲೀಕರಣಗೊಳ್ಳಬೇಕು ಎಂಬ ಬೇಡಿಕೆ ಹತ್ತಾರು ವರ್ಷಗಳಿಂದ ಈಡೇರಲೇ ಇಲ್ಲ. ಅನಿವಾರ್ಯವಾಗಿ ಕೇಸಿಪ್‌ನವರು ರಸ್ತೆ ನಿರ್ಮಾಣ ಮಾಡಿದರು. ರಸ್ತೆ ವಿಸ್ತಾರವಾಗಲೇ ಇಲ್ಲ. ಇದಾದ ಮೇಲೆ ಫುಟ್‌ಪಾತನ್ನು ಗೂಡಂಗಡಿಗಳು ಅತಿಕ್ರಮಿಸಿದವು.
ಬಸ್ ನಿಲ್ದಾಣದಿಂದ ಎಲ್‌ಐಸಿ ಕಚೇರಿ ರಸ್ತೆವರೆಗೆ, ಮಹಾತ್ಮಾ ಗಾಂಧಿ ಸರ್ಕಲ್‌ನಿಂದ ಸ್ಟೇಟ್‌ಬ್ಯಾಂಕ್ ರಸ್ತೆ, ತಹಸೀಲ್ದಾರ್ ರಸ್ತೆ ಬದಿಯಲ್ಲಿ ಇರುವ ಗೂಡಂಗಡಿಗಳು ಹಾಗೂ ವಿವಿಧ ವಸ್ತು ಮಾರಾಟದ ಅಂಗಡಿಗಳು ಫುಟ್‌ಪಾತ್ ಮಾತ್ರವಲ್ಲ ರಸ್ತೆಯಲ್ಲೂ ಕಾಯಂ ಆಗಿ ನಡೆಯುತ್ತಿವೆ.
ಬಸ್ ನಿಲ್ದಾಣದ ಎದುರಿಗಿನ ಫುಟ್‌ಪಾತ್‌ನ ಒಂದು ಭಾಗವಂತೂ ಕಾಯಂ ಅಂಗಡಿಗಳ ಆವಾಸ ಸ್ಥಾನವಾಗಿದೆ. ಇನ್ನು ಮಹಾತ್ಮಾಗಾಂಧಿ ವೃತ್ತದಲ್ಲಂತೂ ಯಾರೂ ಹೇಳುವವರು, ಕೇಳುವವರೆ ಇಲ್ಲ ಎಂಬಂತೆ ಗೂಡಂಗಡಿಗಳು ಸಂಚರಿಸುವವರಿಗೆ ಅನಾನುಕೂಲ ಮಾಡಿವೆ. ಮಹಾತ್ಮಾಗಾಂಧಿ ವೃತ್ತದಿಂದ ಎಲ್‌ಐಸಿ ಕಚೇರಿ ರಸ್ತೆವರೆಗೆ ಇದೇ ಗೋಳು. ಇದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿದೆ. ಅಂದಾಜು ೨೫೦ಕ್ಕೂ ಅಧಿಕ ಗೂಡಂಗಡಿಗಳು ಇಲ್ಲಿವೆ.
ಒಂದು ವರ್ಷದ ಹಿಂದೆಯೇ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿಯೇ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪೊಲೀಸ್ ಇಲಾಖೆ, ಪುರಸಭೆ ಯೋಚಿಸಿದ್ದವು. ಈ ಸಭೆಯಲ್ಲಿ ಸಾರ್ವಜನಿಕರೂ ಪಾಲ್ಗೊಂಡು ಅಳಲು ತೋಡಿಕೊಂಡಿದ್ದರು. ಆದರೆ ಈ ಸಭೆಯ ಪ್ರತಿಫಲ ಮಾತ್ರ ಶೂನ್ಯವಾಯಿತು.ಈಗಲಾದರೂ ತಹಸೀಲ್ದಾರ್ ಎಸ್.ರೇಣುಕಾ ಅವರು ಮತ್ತೊಮ್ಮೆ ಶೀಘ್ರ ಸಭೆ ಕರೆದು ಪೊಲೀಸ್, ಪುರಸಭೆ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾಗುವರೇ ಎಂದು ಕಾದು ನೋಡಬೇಕಾಗಿದೆ. ಫುಟ್‌ಪಾತ್ ತೆರವಿಗೆ ಯೋಜನೆ ರೂಪಿಸಲಾಗಿದೆ. ಶೀಘ್ರ ಕಾರ್ಯಾಚರಣೆಗೆ ಮುಂದಾಗುತ್ತೇವೆ. ಕಳೆದ ವರ್ಷ ಸಭೆ ನಡೆಸಿ ಯೋಜಿಸಲಾಗಿತ್ತು, ಆದರೆ ಫುಟ್‌ಪಾತ್ ಅಂಗಡಿಯವರು ಕೂಡ ನಮ್ಮನ್ನು ಸಂಪರ್ಕಿಸಿ ತಮ್ಮ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಯುತ್ತದೆ ಎಂದು ಹಾನಗಲ್ಲ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಹೇಳಿದರು.
ಫುಟ್‌ಪಾತ್ ತೆರವಿಗಾಗಿ ಪುರಸಭೆಗೆ ಮನವಿ ಸಲ್ಲಿಸಿದ್ದೇವೆ. ಆದರೆ ಪುರಸಭೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿಯ ಕೆಲಸ. ಆದರೆ ಅದನ್ನು ನಿರ್ವಹಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಈಗ ನ್ಯಾಯಾಲಯಕ್ಕೆ ಮೊರೆ ಹೋಗಲು ಸನ್ನದ್ಧರಾಗಿದ್ದೇವೆ ಹಾನಗಲ್ಲ ನಾಗರಿಕ ಪ್ರಶಾಂತ ಮುಚ್ಚಂಡಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.