ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಭಾಷಣಗಾರರಾಗಿ ಗೌಡ ಸಾಂಸ್ಕೃತಿಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ತುಂತಜೆ ವೆಂಕಟೇಶ (ಗಣೇಶ್) ಮಾತನಾಡಿ, ಮಾತೃ ಭಾಷೆ ಉಳಿಯುವುದು ಮಾತೆ ಯಿಂದ ಹಾಗೂ ಮನೆಯಿಂದ. ಪ್ರತಿ ಮನೆಯಲ್ಲೂ ಮಕ್ಕಳಿಗೆ ಮಾತೃ ಭಾಷೆಯನ್ನು ಕಲಿಸಿದಲ್ಲಿ ಭಾಷೆ ಉಳಿಯುವುದು. ಹಾಗೆಯೇ ನಮ್ಮ ಸಂಸ್ಕೃತಿ ಸಂಪ್ರದಾಯವನ್ನೂ ಕೈಬಿಡಬಾರದು ಎಂದು ಕಿವಿ ಮಾತು ಹೇಳಿದರು.ಮತ್ತೊಬ್ಬ ಮುಖ್ಯ ಭಾಷಣಗಾರರಾಗಿ ಶಿಕ್ಷಕಿ ತಳೂರು ಉಷಾ ಕಾಶಿ ಮಾತನಾಡಿ ಭಾಷೆ, ಸಂಸ್ಕೃತಿಯನ್ನು ಮರೆತರೆ ಆ ಜನಾಂಗವನ್ನು ಮಾರಿಕೊಂಡಂತೆ. ಆದ್ದರಿಂದ ಆಯಾ ಜನಾಂಗಕ್ಕೆ ಸಂಬಂಧಪಟ್ಟ ಭಾಷೆ, ಉಡುಪು ಪದ್ಧತಿ ಪರಂಪರೆಯನ್ನು ಪೋಷಣೆ ಮಾಡಬೇಕು ಎಂದರು. ಪ್ರತಿಯೊಂದು ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಯುವ ಜನತೆ ಅರಿತು ಬಾಳಬೇಕು. ಇದಕ್ಕಾಗಿ ಸಮಾಜಗಳ ಮೂಲಕ ಕಾರ್ಯಾಗಾರ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷರಾದ ಕೇಕಡ ದಿನೇಶ್, ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ, ನಡುವಟ್ಟಿರ ಅನಂತ, ಸಮಾಜದ ನಿರ್ದೇಶಕರು, ಮಹಿಳಾ ಒಕ್ಕೂಟದ ನಿರ್ದೇಶಕರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ಬೈಮನ ಭವಾನಿ ದಿಲೀಪ್ ಅರೆಭಾಷೆ ಗೀತೆ ಹಾಡಿದರು. ಸಿರಕಜೆ ಚಾರ್ವಿ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.