
ಕನ್ನಡಪ್ರಭ ವಾರ್ತೆ ಮಡಿಕೇರಿ
ದಕ್ಷಿಣ ಭಾರತದ ಜೀವನದಿ ಕಾವೇರಿ ಮೂಲದಲ್ಲಿಯೇ ಕಲುಷಿತಗೊಳ್ಳುತ್ತಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಗಡಿ ಗುರುತು ಕುರಿತು ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಟಗಳ ಅಭಿವೃದ್ಧಿ ಬಗ್ಗೆ ಹಾಗೂ ನದಿ ತಟದಲ್ಲಿರುವ ಒತ್ತುವರಿ ತೆರವು ಹಾಗೂ ನದಿ ತಟದ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರ್ಕಾರದ ಮೂಲಕ ಕ್ರಿಯಾ ಯೋಜನೆ ರೂಪಿಸಲು ಕರಡು ಪ್ರಸ್ತಾವನೆ ಒಂದನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಮಗ್ರ ಮಾಹಿತಿಯೊಂದಿಗೆ ಮನವಿ ಸಲ್ಲಿಸಿದೆ.
ನದಿ ತಟದಲ್ಲಿರುವ ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯಗಳು, ಕಲುಷಿತ ನೀರು ನದಿಗೆ ನೇರವಾಗಿ ಸೇರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ನದಿ ತಟಗಳು ಅಕ್ರಮವಾಗಿ ಒತ್ತುವರಿಯಾಗುವುದರೊಂದಿಗೆ ವಾಣಿಜ್ಯ ಕಟ್ಟಡಗಳು, ಅಂಗಡಿ ಮುಂಗಟ್ಟುಗಳು ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು ಅವೈಜ್ಞಾನಿಕವಾಗಿ ವಿಲೇವಾರಿ ಯಾಗುತ್ತಿರುವುದು ಕಾವೇರಿ ನದಿ ಮಾಲಿನ್ಯಗೊಳಿಸಲು ಪ್ರಮುಖ ಕಾರಣವಾಗಿವೆ.ಈ ಬಗ್ಗೆ ಸರ್ಕಾರದ ಮೂಲಕ ಮುಂದಿನ ಕ್ರಮಕ್ಕಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ತಿಳಿಸಿದ್ದಾರೆ.
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಸಂಬಂಧಿಸಿದಂತೆ ತಲಕಾವೇರಿ, ಭಾಗಮಂಡಲ, ಬೆಂಗೂರು, ಕುಂದಚೇರಿ, ನಾಪೋಕ್ಲು, ಬಲ್ಲಮಾವಟಿ, ಪಾರಾಣೆ, ಹೊದ್ದೂರು, ಮೂರ್ನಾಡು ಗ್ರಾಮದ ಮೂಲಕ ಹರಿಯುವ ಕಾವೇರಿಗೆ ಆಗಬೇಕಾದ ಯೋಜನೆಗಳು:• ತಲಕಾವೇರಿಯಲ್ಲಿ ಸಮರ್ಪಕ ಕುಡಿಯುವ ನೀರಿನ ಘಟಕ ಸ್ಥಾಪನೆ, ಹೈಟೆಕ್ ಸಮುದಾಯ ಶೌಚಾಲಯ ಮತ್ತು ಸಮರ್ಪಕ ನಿರ್ವಹಣೆ.
• ಭಾಗಮಂಡಲ ವ್ಯಾಪ್ತಿಯಲ್ಲಿ ನದಿ ತಟದಿಂದ ದೂರದಲ್ಲಿ ಹೈಟೆಕ್ ಸಮುದಾಯ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಘಟಕ ಸ್ಥಾಪನೆ, ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಹೆಚ್ಚಿನ ವಾಹನ ಸೌಲಭ್ಯ, ಶಾಶ್ವತ ಪರಿಹಾರಕ್ಕೆ ಒಳಚರಂಡಿ ಯೋಜನೆ ಅನುಷ್ಠಾನ. ಮೂಲ ಕಾವೇರಿಯ ವ್ಯಾಪ್ತಿಯಲ್ಲಿರುವ ಭಾಗಮಂಡಲ ಗಾಮಪಂಚಾಯಿತಿಗೆ ಸೀಮಿತವಾಗಿ ಹೆಚ್ಚುವರಿ ವಿಶೇಷ ಅನುದಾನ ಕಲ್ಪಿಸಲು ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸಬೇಕಾಗಿದೆ.• ನಾಪೊಕ್ಲು ವ್ಯಾಪ್ತಿಯಲ್ಲಿ ನದಿ ತಟದಲ್ಲಿ ತಡೆಗೋಡೆ ನಿರ್ಮಾಣ, ನದಿ ತೀರದಲ್ಲಿರುವ 1200ಕ್ಕೂ ಅಧಿಕ ಮನೆಗಳ ಸ್ಥಳಾಂತರ ಹಾಗೂ ಪುನರ್ವಸತಿ ಕಲ್ಪಿಸುವುದು, ಕಸ ವಿಲೇವಾರಿಗೆ ರಕ್ಷಣೆ ಮಾಡುವುದು.
• ನದಿ ಹರಿಯುವ ಮೂರ್ನಾಡು ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಯೋಜನೆ ರೂಪಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.ವಿರಾಜಪೇಟೆ ತಾಲೂಕು ವ್ಯಾಪ್ತಿಯ ಕಾಕೋಟುಪರಂಬು, ಬೇತ್ರಿ, ಹಾಲುಗುಂದ, ಕನ್ನಂಗಾಲ, ಸಿದ್ದಾಪುರ, ನೆಲ್ಲಿಹುದಿಕೇರಿ ಗ್ರಾಮಗಳು ಆಗಬೇಕಾದ ಯೋಜನೆಗಳು:-• ಕಾಕೋಟುಪರಂಬು ಮತ್ತು ಬೇತ್ರಿ ವ್ಯಾಪ್ತಿಯಲ್ಲಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯ ಸೇರುತ್ತಿದೆ. ನದಿ ತಟದಲ್ಲಿರುವ 150ಕ್ಕೂ ಅಧಿಕ ಮನೆಗಳನ್ನು ಸ್ಥಳಾಂತರಿಸುವುದು ಅವುಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ನದಿತಟದ ಅಭಿವೃದ್ಧಿಗೊಳಿಸುವುದು.
• ಹಾಲುಗುಂದ ಮತ್ತು ಕನ್ನಂಗಾಲ ಗ್ರಾಮಗಳ ವ್ಯಾಪ್ತಿಯಲ್ಲಿ ನದಿ ತೀರದಲ್ಲಿ 150ಕ್ಕೂ ಅಧಿಕ ಮನೆಗಳನ್ನು ಮತ್ತು ಕನ್ನಂಗಾಲ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಮನೆಗಳು ಕಂಡುಬರುತ್ತಿವೆ.• ಸಿದ್ದಾಪುರ ವ್ಯಾಪ್ತಿಯಲ್ಲಿ ನದಿತಟದಲ್ಲಿ 400ಕ್ಕೂ ಅಧಿಕ ಮನೆಗಳಿಂದ ನೇರವಾಗಿ ತ್ಯಾಜ್ಯಗಳು ನದಿ ಸೇರುತ್ತಿವೆ. ಕಸವಿಲೇವಾರಿಗೆ ಕ್ರಮಕೈಗೊಳ್ಳುವುದು ಮತ್ತು ನದಿ ಸಂರಕ್ಷಣೆ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ, ನಿರ್ವಹಣೆ ಮಾಂಸದ ಅಂಗಡಿಗಳಿಂದ ಹೊರಸೂಸುವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ.
• ಸಿದ್ದಾಪುರದಲ್ಲಿ ಒಳಚರಂಡಿ ಯೋಜನೆಯ ಕ್ರಮಕ್ಕೆ ಆದ್ಯತೆ ನೀಡುವುದು.• ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಮಾಂಸ, ಮೀನು, ಅಂಗಡಿಗಳಿಂದ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಕಂಡುಬಂದಿದೆ. 200ಕ್ಕೂ ಅಧಿಕ ಮನೆಗಳು ನದಿತಟದಲ್ಲಿ ನಿರ್ಮಾಣಗೊಂಡಿವೆ. ತೆರವುಗೊಳಿಸಿ ಪುನರ್ವಸತಿ ಕಲ್ಪಿಸುವುದು ಮತ್ತು ನದಿ ತಟವನ್ನು ಅಭಿವೃದ್ಧಿಗೊಳಿಸುವುದು.ಕುಶಾಲನಗರ ತಾಲೂಕು ಒಳಪಡುವ ಗ್ರಾಮಗಳಾದ ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು, ನಂಜರಾಯಪಟ್ಟಣ, ದುಬಾರೆ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಹಾಗೂ ಕುಶಾಲನಗರ ಪುರಸಭೆ ವ್ಯಾಪ್ತಿ.
ಆಗಬೇಕಾದ ಯೋಜನೆಗಳು:ಪಟ್ಟಣದಲ್ಲಿ ಅಪೂರ್ಣಗೊಂಡಿರುವ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸಿ ತಕ್ಷಣ ಲೋಕಾರ್ಪಣೆ ಗೊಳಿಸುವುದು. ಈ ಮೂಲಕ ಸ್ವಚ್ಛ ಪಟ್ಟಣ ಸ್ವಚ್ಛ ಕಾವೇರಿ ಗುರಿ ಈಡೇರುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನದಿ ತಟಗಳ ಹೊತ್ತು ಗಡಿ ಗುರುತು ಮಾಡುವ ಮೂಲಕ ನದಿಗೆ ನೇರವಾಗಿ ಕಲುಷಿತ ನೀರು ಸೇರದಂತೆ ಸ್ಥಳೀಯ ಆಡಳಿತದ ಮೂಲಕ ಕ್ರಮ ಕೈಗೊಳ್ಳುವುದು.ನದಿ ತಟದಲ್ಲಿರುವ ಅಕ್ರಮ ನಿಯಮಬಾಹಿರ ಕಟ್ಟಡಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ಮರಗಿಡಗಳನ್ನು ನೆಡುವ ಯೋಜನೆ ರೂಪಿಸುವುದು. ಕುಶಾಲನಗರ ಮತ್ತು ಮಡಿಕೇರಿ ಒಳಚರಂಡಿ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು. ಕಾಮಗಾರಿ ತಡವಾಗಿರುವ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಲು ಕ್ರಮಕೈಗೊಳ್ಳುವುದು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾವೇರಿ ನದಿ ಸಂರಕ್ಷಣೆಗಾಗಿ ಸರ್ಕಾರದ ಮೂಲಕ ಮುಂದಿನ ವರ್ಷದ ಬಜೆಟ್ನಲ್ಲಿ ಅನುದಾನ ಕಲ್ಪಿಸುವ ಮೂಲಕ ಹಂತಹಂತವಾಗಿ ಅನುಷ್ಠಾನಗೊಳಿಸಿ ಪವಿತ್ರ ನದಿ ಹಾಗೂ ದಕ್ಷಿಣ ಭಾರತದ ಜೀವ ನಾಡಿಯಾಗಿರುವ ಕಾವೇರಿ ನದಿಯ ಸಂರಕ್ಷಣೆ ಮತ್ತು ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಲು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಚಂದ್ರಮೋಹನ್ ತಿಳಿಸಿದ್ದಾರೆ.ನದಿ ತಟಗಳ ಒತ್ತುವರಿ ತೆರವು ಸಂಬಂಧಿಸಿದಂತೆ ಈಗಾಗಲೇ ಕುಶಾಲನಗರ ವ್ಯಾಪ್ತಿಯಲ್ಲಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ವರದಿ ಸಲ್ಲಿಸಲು ಸಂಬಂಧಿಸಿದ ತಾಲೂಕು ತಹಸಿಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ನದಿ ತಟದ ಬಫರ್ ಜೋನ್ ಸಂಬಂಧಿಸಿದಂತೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನದಿಗೆ ನೇರವಾಗಿ ಕಲುಷಿತ ನೀರು ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.। ವೆಂಕಟ್ ರಾಜಾ, ಜಿಲ್ಲಾಧಿಕಾರಿ