ಕೊಪ್ಪಳ:
1925ರಲ್ಲಿ ಸ್ಥಾಪನೆಯಾಗಿ ಲಕ್ಷ ಲಕ್ಷ ಜನರ ಬಾಳಿಗೆ ಬೆಳಕಾಗಿರುವ ಕರ್ನಾಟಕ ರೆಡ್ಡಿ ಜನ ಸಂಘಕ್ಕೆ ಈಗ ಶತಮಾನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ. 24ರಂದು ನಡೆಯುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಯಶಸ್ವಿ ಮಾಡಬೇಕೆಂದು ಹರಿಹರ ಎರೆಹೊಸಳ್ಳಿ ರೆಡ್ಡಿ ಗುರುಪೀಠದ ವೇಮಾನಂದ ಸ್ವಾಮೀಜಿ ಕರೆ ನೀಡಿದರು.ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ನಡೆದ ರೆಡ್ಡಿ ಜನ ಸಂಘದ ಶತಮಾನೋತ್ಸವ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೆಡ್ಡಿ ಜನ ಸಂಘ ಹುಟ್ಟಿಕೊಂಡಿರುವುದೇ ರೆಡ್ಡಿ ಸಮುದಾಯದ ಕಲ್ಯಾಣಕ್ಕಾಗಿ. ನೂರು ವರ್ಷಗಳಲ್ಲಿ ಲಕ್ಷ ಲಕ್ಷ ಜನರ ಬಾಳಲ್ಲಿ ಬೆಳಕಾಗಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಕ್ರಾಂತಿ ಮಾಡಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ರೆಡ್ಡಿ ಹಾಸ್ಟೆಲ್ ನಿರ್ಮಿಸಿ ವಾಸಕ್ಕೆ ಮತ್ತು ಪ್ರಸಾದಕ್ಕೆ ಅವಕಾಶ ನೀಡುವ ಮೂಲಕ ವಿದ್ಯಾರ್ಥಿಗಳು ಜೀವನ ಬೆಳಗುವುದಕ್ಕೆ ಕಾರಣವಾಗಿದೆ ಎಂದರು.ಕೇವಲ ಶಿಕ್ಷಣ ಮಾತ್ರವಲ್ಲದೆ ಸಾಕಷ್ಟು ಸಮಾಜಮುಖಿ ಕಾರ್ಯ ಮಾಡಲಾಗಿದೆ. ಇಂಥದ್ದೊಂದು ಸಂಘ ನೂರು ವರ್ಷ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ರೆಡ್ಡಿ ಜನ ಸಂಘವನ್ನು ರಾಜ್ಯವ್ಯಾಪ್ತಿ ವಿಸ್ತರಣೆ ಮಾಡಿ, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ರೆಡ್ಡಿ ಜನ ಸಂಘದ ಮೂಲಕ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಯೋಜನೆ ರೂಪಿಸಿ, 100 ವರ್ಷಗಳ ಸವಿನೆನಪಿಗಾಗಿ ಅಂಥ ಮಹಾನ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಹೀಗಾಗಿ, ಇಂಥ ಮಹಾನ್ ಶತಮಾನೋತ್ಸವ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಸಂಘಟನೆಯ ಬಲ ಪ್ರದರ್ಶನ ಮಾಡಬೇಕಾಗಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿಯೂ ರೆಡ್ಡಿ ಸಮಾಜ ಬಲಿಷ್ಠವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಇದೆ. ಇಲ್ಲಿ ರಡ್ಡಿ ಜನಾಂಗ ಸದಾ ಕಲ್ಯಾಣ ಕಾರ್ಯಕ್ರಮ ಮಾಡುತ್ತಾ, ಒಗ್ಗಟ್ಟು ಪ್ರದರ್ಶಿಸುತ್ತಿದೆ. ಇಲ್ಲಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದರು.ಕರ್ನಾಟಕ ರೆಡ್ಡಿ ಜನ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ರಡ್ಡಿ, ನಿರ್ದೇಶಕರಾದ ಬಾಬು ರೆಡ್ಡಿ, ರಾಜಾ ರೆಡ್ಡಿ, ಎಂ. ಕೃಷ್ಣಾ ರಡ್ಡಿ, ಶಾಂತರಾಜ, ರಾಜ್ಯ ಸಂಘಟನಾ ಅಧ್ಯಕ್ಷ ಎಂ.ಸಿ. ಪ್ರಭಾಕರ ರೆಡ್ಡಿ, ರಡ್ಡಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಆರ್.ಪಿ. ರಡ್ಡಿ, ಆನಂದ ರಡ್ಡಿ, ಪ್ರಭು ಹೆಬ್ಬಾಳ, ವೆಂಕನಗೌಡ, ಮನೋಹರಗೌಡ, ಎಸ್.ಬಿ. ನಾಗರಳ್ಳಿ, ನವೋದಯ ವಿರೂಪಾಕ್ಷಪ್ಪ, ದೇವಪ್ಪ ಅರಿಕೇರಿ, ಹನುಮರಡ್ಡಿ ಹಂಗನಕಟ್ಟಿ, ವೆಂಕಾ ರಡ್ಡಿ ವಕೀಲರು ಮೊದಲಾದವರು ಇದ್ದರು.