ಹುಬ್ಬಳ್ಳಿ:
ಬೆಳಗ್ಗೆಯಿಂದಲೇ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಐತಿಹಾಸಿಕ ಸಿದ್ಧಾರೂಢ ಮಠ, ಮೂರು ಸಾವಿರಮಠ, ಉಣಕಲ್ಲ ಸಿದ್ದಪ್ಪಜ್ಜನ ಮಠ, ಚಂದ್ರಮೌಳೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ವಿಶೇಷ ಅಭಿಷೇಕ:ವಿವಿಧ ದೇವಾಲಯಗಳಲ್ಲಿ ಶಿವಲಿಂಗಕ್ಕೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರ ಅರ್ಚನೆ ಹಾಗೂ ಪುಷ್ಪಾಲಂಕಾರ ನೆರವೇರಿಸಲಾಯಿತು. ದೇವಾಲಯಗಳ ಪ್ರವೇಶ ದ್ವಾರ ಹಾಗೂ ಆವರಣಗಳನ್ನು ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಭಕ್ತರಿಗೆ ವಿಶೇಷ ದರ್ಶನ ಹಾಗೂ ಪೂಜೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದ ಜನರು ತಮ್ಮ ಮನೆಯಲ್ಲಿ ಸಾಕಿದ ಎತ್ತು ಹಾಗೂ ಆಕಳುಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುವ ಮೂಲಕ ಶ್ರಾವಣ ಸೋಮವಾರ ಆಚರಿಸಿದರು. ಬಹುತೇಕ ಮಠ, ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ ಹಾಗೂ ಸೇವಾ ಸಂಘಟನೆಗಳ ವತಿಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಿದ್ಧಾರೂಢ ಮಠದಲ್ಲಿ ಶ್ರಾವಣ ಸೋಮವಾರದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಶ್ರೀಸಿದ್ಧಾರೂಢ ಸ್ವಾಮಿಗಳ ಹಾಗೂ ಗುರುನಾಥರೂಢದ ಗದ್ದುಗೆಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಮಠಕ್ಕೆ ಭಕ್ತರ ಆಗಮನ ಹೆಚ್ಚಾಗಿತ್ತು. ಭಜನೆ, ಶಿವನಾಮ ಸ್ಮರಣೆ ಹಾಗೂ ಪಂಚಾಕ್ಷರಿ ಮಂತ್ರ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.