ಕನ್ನಡಪ್ರಭ ವಾರ್ತೆ ಮಡಿಕೇರಿ
ರೋಟರಿ ಮಿಸ್ಟಿ ಹಿಲ್ಸ್ ಮತ್ತು ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಸೈನಿಕಶಾಲೆ ಸೇರಲಿಚ್ಛಿಸುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ದೊರಕಿತು.ನಗರದ ಶಿಶುಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ, ಸೈನಿಕ ಶಾಲೆ ಎಂಬುದು ಕೇವಲ ಶಿಕ್ಷಣದ ಕೇಂದ್ರವಲ್ಲ ಅದು ಶಿಸ್ತು, ದೇಶಭಕ್ತಿ, ನಾಯಕತ್ವ ಮತ್ತು ನಂಬಿಕೆಯ ಪಾಠಗಳನ್ನು ಕಲಿಸುವ ಪುಣ್ಯಸ್ಥಳ. ಸೈನಿಕಶಾಲೆಯಲ್ಲಿ ಕಲಿಯುವ ಮಕ್ಕಳು ನಾಳೆಯ ಭಾರತದ ಭದ್ರ ಕೈಗಳು, ದೇಶದ ಹೆಮ್ಮೆಯಾಗಿದ್ದಾರೆ ಎಂದು ಶ್ಲಾಘಿಸಿದರು.ಈ ಶಿಬಿರ ಕೇವಲ ಪರೀಕ್ಷೆಗೆ ತಯಾರಿ ಮಾತ್ರವಲ್ಲ ಇದು ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವ ವೇದಿಕೆ. ನಮ್ಮ ದೇಶದ ಶಕ್ತಿ, ದೇಶ ಸೇವೆ ಮಾಡಲು ಕನಸು ಕಾಣುವ ಯುವಕ, ಯುವತಿಯರಲ್ಲಿದೆ ಎಂದೂ ಜೀವನ್ ಅಭಿಪ್ರಾಯಪಟ್ಟರು.ಸೈನಿಕ ಶಾಲೆಗೆ ಸೇರಲು ಇಚ್ಛೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಕಾರ್ಯಾಗಾರದ ಮೂಲಕ ಮಹತ್ವದ ಹೆಜ್ಜೆ ಹಾಕಿದ್ದೀರಿ. ಸೈನಿಕಶಾಲೆಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಕನಸಿಗೆ ಶ್ರಮ ಮತ್ತು ಸಮಯ ನೀಡುತ್ತಿರುವುದು ಪ್ರಶಂಸನೀಯ. ಇಂಥ ಕಾರ್ಯಾಗಾರವನ್ನು ಆಯೋಜಿಸಿರುವ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಶ್ಲಾಘನೀಯ ಕಾರ್ಯ ಕೈಗೊಂಡಿದೆ ಎಂದು ಜೀವನ್ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಏರ್ ಕಮೋಡರ್ ಜೈಸಿಂಹ ಭಾರತೀಯ ವಾಯು ಪಡೆಗಳ ಮಹತ್ವ ಮತ್ತು ಈ ಸೇನಾ ಪಡೆಗಳಿಗೆ ಸೇರ್ಪಡೆ ಸಂಬಂಧಿತ ಮಾಹಿತಿ ನೀಡಿದರು. ಸರಗೂರು ಸೈನಿಕ ಶಾಲೆಯ ಆಡಳಿತ ಮಂಡಳಿ ಪ್ರಮುಖ ಪ್ರವೀಣ್ ಮಾತನಾಡಿ, ಸೈನಿಕ ಶಾಲಾ ಸೇರ್ಪಡೆಯ ಪರೀಕ್ಷೆಗೆ ಯಾವೆಲ್ಲಾ ರೀತಿ ತಯಾರಿ ಕೈಗೊಳ್ಳಬೇಕು ಎಂದು ತಿಳಿಸಿದರು. ಕುನಾಲ್ ಕಡ್ತರೆ ಮತ್ತು ಪ್ರವೀಣ್ ಕಡ್ತರೆ ಗಣಿತ ಮತ್ತು ಸಾಮಾಜಿಕ ಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಕಾರ್ಯಕ್ರಮ ಸಂಚಾಲಕ ರೋಟರಿ ಮಿಸ್ಟಿ ಹಿಲ್ಸ್ ನ ಡಾ. ಚೆರಿಯಮನೆ ಪ್ರಶಾಂತ್ ಮಾಹಿತಿ ನೀಡಿ, ಸೈನಿಕ ಶಾಲೆಗೆ ಸೇರಲಿಚ್ಛಿಸುವ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮುಂದಿನ 10 ಭಾನುವಾರಗಳಂದು ಈ ತರಬೇತಿ ಮಾಹಿತಿ ಕಾರ್ಯಾಗಾರ ಆಯೋಜಿಸಲ್ಪಟ್ಟಿದೆ. ಪ್ರಸ್ತುತ ಜಿಲ್ಲೆಯಾದ್ಯಂತಲಿನ 15 ವಿದ್ಯಾರ್ಥಿಗಳು ಶಿಬಿರಕ್ಕೆ ನೋಂದಾಯಿಸಲ್ಪಟ್ಟಿದ್ದು ಆಸಕ್ತ ವಿದ್ಯಾರ್ಥಿಗಳಿಗೆ ಇನ್ನೂ ಅವಕಾಶ ಕಲ್ಪಿಸಲಾಗಿದೆ ಎಂದರು.ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ನಿರ್ದೇಶಕರಾದ ಬಿ.ಕೆ. ರವಿಂದ್ರ ರೈ, ಪ್ರಸಾದ್ ಗೌಡ, ಪ್ರಕಾಶ್ ಪೂವಯ್ಯ, ಪಿ.ವಿ. ಅಶೋಕ್ ಹಾಜರಿದ್ದರು.ಸೈನಿಕಶಾಲೆಗೆ ಸೇರ್ಪಡೆ - ಅರ್ಜಿ ಸಲ್ಲಿಕೆಗೆ ನ.9 ಕೊನೇ ದಿನ
ಸೈನಿಕಶಾಲೆಗಳಿಗೆ 6 ಮತ್ತು 9 ನೇ ತರಗತಿಗೆ ಸೇರ್ಪಡೆ ಸಂಬಂದಿತ ಅರ್ಜಿ ಸಲ್ಲಿಸಲು ನವಂಬರ್ 9 ರವರೆಗೆ ಅವಕಾಶ ಕಲ್ಪಿಸಲಾಗಿದೆ . ಅ 30 ಕೊನೆಗೊಂಡಿದ್ದ ಅರ್ಜಿ ಸಲ್ಲಿಕೆ ದಿನಾಂಕವನ್ನು ಇದೀಗ ನ.9 ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಸೈನಿಕ ಶಾಲೆ ಸೇರ್ಪಡೆ ನಿಟ್ಟಿನಲ್ಲಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರೋಟರಿ ಮಿಸ್ಟಿ ಹಿಲ್ಸ್, ಎಸ್.ವಿ.ವೈ.ಎಂ. ಪ್ರಮುಖರು ಮನವಿ ಮಾಡಿದ್ದಾರೆ.