ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿವೆ ಎಂದು ಕೆಎಚಡಿಸಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿವೆ ಎಂದು ಕೆಎಚಡಿಸಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.ಸೂಳೇಭಾವಿ ಗ್ರಾಮದಲ್ಲಿ ನಡೆದ ಹುನಗುಂದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ, ಗ್ರಾಮ ಪಂಚಾಯತಿ ಸೂಳೇಭಾವಿ ಪಂಚ ಗ್ಯಾರಂಟಿಯ ಯೋಜನೆಯ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿ, ನಮ್ಮ ಸರ್ಕಾರ ಸದಾ ಬಡವರ ಪರ ಚಿಂತನೆ ಮಾಡುತ್ತಿದೆ. ಜನರು ನೆಮ್ಮದಿ, ಪ್ರೀತಿ, ವಾತ್ಸಲ್ಯ, ಶಾಂತಿಯಿಂದ ಸಹಬಾಳ್ವೆ ನಡೆಸುವಂತಹ ಭ್ರಾತೃತ್ವದ ವಾತಾವರಣ ಕಲ್ಪಿಸುತ್ತದೆ. ಬಡವ ಬಲ್ಲಿದ ಎನ್ನದೆ ಎಲ್ಲರೂ ನೆಮ್ಮದಿಯಿಂದ ಬದುಕಬೇಕೆಂಬ ಮಹದಾಸೆಯಿಂದ ಪಂಚ ಗ್ಯಾರಂಟಿ ಯೋಜನೆ ಹಮ್ಮಿಕೊಂಡಿದೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳು ಮನೆ ಮಾತಾಗಿವೆ. ರಾಷ್ಟ್ರೀಯ, ಅಂತಾರಾಷ್ಟೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನೆರೆ ರಾಜ್ಯಗಳು ಸಹ ಅನುಕರಿಸುವಂತಾಗಿದೆ. ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಬೇಕು. ಅನುಷ್ಠಾನ ಹಂತದಲ್ಲಿ ಲೋಪದೋಷ ಸಂಭವಿಸಿದಾಗ ತ್ವರಿತವಾಗಿ ಪರಿಹಾರ ನೀಡಬೇಕು. ಯಾವೊಬ್ಬ ಸಹಾಯಕಯೂ ಹೊರಗುಳಿಯದಂತೆ ಕ್ರಮ ವಹಿಸಬೇಕು ಎಂದರು.

ಹುನಗುಂದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ನೂರಂದಗೌಡ ಕಲ್ಲಗೋಡಿ ಮಾತನಾಡಿ, ಹಸಿದವರಿಗೆ ಅನ್ನ, ಯುವಕರಿಗೆ ಉದ್ಯೋಗ ಹುಡುಕಲು ಯುವ ನಿಧಿ, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮತ್ತು ಕುಟುಂಬ ನಿರ್ವಹಣೆ ಪ್ರೋತ್ಸಾಹ ಧನ, ಹೀಗೆ ಸಕಲ ಸೌಲತ್ತು ನೀಡುವ ಮೂಲಕ ಬಡವರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಟೊಂಕ ಕಟ್ಟಿ ನಿಂತಿದೆ ಎಂದರು.

ಹಿರಿಯ ಮುಖಂಡ ರಹಮಾನಸಾಬ ದೊಡ್ಡಮನಿ ಮಾತನಾಡಿದರು, ಗ್ರಾಪಂ ಅಧ್ಯಕ್ಷ ಪಿಡ್ಡಪ್ಪ ಕುರಿ, ಪಿಡಿಒ ಎಸ್.ಆರ್.ಕೊಳ್ಳೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸದಸ್ಯರು, ಮುಖಂಡರು,ಗ್ರಾಪಂ ಸಿಬ್ಬಂದಿಗಳು ಇದ್ದರು.