ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ಪ್ರವಾಸಿಗರ ಮೇಲೆ ನಡೆಸಿರುವ ಅಟ್ಟಹಾಸ ಹಾಗೂ ಹತ್ಯೆ ಖಂಡಿಸಿ ತಾಲೂಕು ವಕೀಲರ ಸಂಘದ ಸದಸ್ಯರು ಪ್ರಭಟನೆ ನಡೆಸಿದರು.ಪಟ್ಟಣದ ನ್ಯಾಯಾಲಯದ ಬಳಿ ಇರುವ ವಕೀಲರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಸತ್ಯನಾರಾಯಣ ನೇತೃತ್ವದಲ್ಲಿ ಸಭೆ ಸೇರಿ ಉಗ್ರರ ದಾಳಿಯಿಂದ ಪ್ರವಾಸಿಗರು ಹತ್ಯೆಯಾಗಿರುವುದನ್ನು ಖಂಡಿಸಿದರು. ಕೇಂದ್ರ ಸರ್ಕಾರ ಕೂಡಲೆ ಉಗ್ರರ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ನಂತರ ಸಭೆ ಮುಗಿಸಿ ನ್ಯಾಯಾಲಯದಿಂದ ಉಗ್ರರ ವಿರುದ್ದ ಘೋಷಣೆಗಳ ಕೂಗಿ ಪಾದಯಾತ್ರೆ ನಡೆಸಿದ ವಕೀಲರು ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಪಾಕಿಸ್ತಾನದ ಉಗ್ರರಿಗೆ ಭಾರತ ಸರ್ಕಾರ ತಕ್ಕ ಉತ್ತರ ನೀಡಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುವಂತೆ ಒತ್ತಾಯಿಸಿದರು.ಬಳಿಕ ತಾಲೂಕು ಕಚೇರಿ ಎದುರು ಧರಣಿ ನಡೆಸಿ ಪ್ರವಾಸಿಗರ ಮೇಲೆ ಗುಂಡಿಕ್ಕಿ ಅಟ್ಟಹಾಸ ಮೆರೆದಿರುವ ನರಹಂತಕರನ್ನು ಸದೆ ಬಡೆಯುವ ಕೆಲಸ ಮಾಡಬೇಕು. ಪ್ರವಾಸಿಗರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಸ್ಲಿಂರನ್ನು ಓಲೈಸಿಕೊಳ್ಳಲು ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ 370 (ಜೆ) ಆರ್ಟಿಕಲ್ ಕುರಿತ ಹೇಳಿಕೆಯಿಂದ ಉಗ್ರರನ್ನು ಸಮರ್ಥಿಸಿಕೊಂಡಂತಿದೆ. ಕೂಡಲೇ ದೇಶದ ಜನರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಒತ್ತಾಯಿಸಿದರು.ಕೂಡಲೇ ಪತ್ರಿಕಾ ಹೇಳಿಕೆಗಳ ಮೂಲಕ ತಕ್ಷಣದಲ್ಲಿ ಬಹಿರಂಗ ಕ್ಷಮಯಾಚನೆಗೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಹಾಗೂ ಸದಸ್ಯ ಎಸ್ ವೆಂಕಟೇಶ್ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪವನ್‌ಗೌಡ, ಹಿರಿಯ ವಕೀಲರಾದ ಜಯಸ್ವಾಮಿ, ಕುಮಾರ್, ಎಸ್ ವೆಂಕಟೇಶ್, ಶಿವರಾಮು, ಲಿಂಗರಾಜು, ಸಿ.ಎಸ್ ವೆಂಕಟೇಶ್, ಜಯಕುಮಾರ್, ಪುಲಿಕೇಶಿ, ನಾರಾಯಣಸ್ವಾಮಿ, ಜ್ಯೋತಿ, ಜ್ಞಾನವಿ, ಸೌಮ್ಯ ಪಲ್ಲವಿ, ಪುಷ್ಪಾ, ಸೇರಿದಂತೆ ಇತರ ವಕೀಲರು ಭಾಗವಹಿಸಿದ್ದರು.