ಕನ್ನಡಪ್ರಭ ವಾರ್ತೆ ತುಮಕೂರುಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ 66ನೇ ಹುಟ್ಟುಹಬ್ಬವನ್ನು ಮಂಗಳವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪನವರ ನೇತೃತ್ವದಲ್ಲಿ ಬೃಹತ್ ಕೇಕ್ ಕತ್ತರಿಸಿ, ಸಿಹಿ ವಿತರಿಸಿದರು. ಕುಮಾರಸ್ವಾಮಿಯವರ ಆರೋಗ್ಯ, ಆಯುಷ್ಯ ವೃದ್ಧಿಯಾಗಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲೆಂದು ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರು ಜಾರಿಗೆ ತಂದ ಜನ ಮೆಚ್ಚಿರುವ ಯೋಜನೆಗಳು, ರೈತರ ಸಾಲ ಮನ್ನಾ, ಸಾರಾಯಿ ನಿಷೇಧದಂತಹ ಕಾರ್ಯಕ್ರಮಗಳ ಮೂಲಕ ಅವರು ಜನಮಾನಸದಲ್ಲಿ ಉಳಿದಿರುವ ನಾಯಕರಾಗಿದ್ದಾರೆ. ಸಜ್ಜನಿಕೆ, ಸರಳ ವ್ಯಕ್ತಿತ್ವ, ವಿಕಲಚೇತನರು, ವಯೋವೃದ್ಧರು, ರೈತರು, ಬಡವರ ಬಗ್ಗೆ ಸ್ಪಂದಿಸುವ ಮಾತೃಹೃದಯ ಹೊಂದಿರುವ ಧೀಮಂತ ನಾಯಕ ಎಂದು ಹೇಳಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿಯವರ ಪರಿಶ್ರಮ, ನಿಷ್ಠಾವಂತ ಕಾರ್ಯಕರ್ತರಿಂದ ರಾಜ್ಯದಲ್ಲಿ ಜೆಡಿಎಸ್ ಸದೃಢವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕಾಣುವ ಆಶಯ ನಮ್ಮೆಲ್ಲರದ್ದು ಎಂದರು. ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಕುಮಾರಣ್ಣನವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ನೀಡಿದ ಕೊಡುಗೆ ಜನಮಾನಸದಲ್ಲಿದೆ. ಅವರ ಅಧಿಕಾರವಧಿಯ ಸುವರ್ಣ ಗ್ರಾಮ ಯೋಜನೆಯಿಂದ ಹಳ್ಳಿಹಳ್ಳಿಗಳ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾದವು. ಶಾಲಾಕಾಲೇಜು ಕಟ್ಟಡಗಳು, ಆಸ್ಪತ್ರೆ, ವಿದ್ಯುತ್ ಉಪಕೇಂದ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪನೆ ಮಾಡುವ ಮೂಲಕ ಜನರಿಗೆ ಅಗತ್ಯವಿದ್ದ ಕಾರ್ಯಕ್ರಮಗಳನ್ನು ಮಾಡಿದ ಜನಸಾಮಾನ್ಯರ ಹೃದಯ ಗೆದ್ದ ನಾಯಕ ಎಂದು ಬಣ್ಣಿಸಿದರು.