ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿ ಪರಿಷತ್ ಚುನಾವಣೆ ಕಾರ್ಯಕ್ರಮದಲ್ಲಿ ಡಾ. ಪ್ರೀತಿ ಸುಧಾಕರ್ ಅಭಿಮತ
ದೊಡ್ಡ ವ್ಯಕ್ತಿಗಳಾಗಿ, ನಾಯಕರಾಗಿ ಯಾರೂ ಹುಟ್ಟುವುದಿಲ್ಲ. ತಾವು ಬೆಳೆದು ಬರುವ ಸಂದರ್ಭಗಳಲ್ಲಿ ನಿರಂತರ ಪ್ರಜ್ಞಾಪೂರ್ವಕ ಕಾರ್ಯಗಳಿಂದ ನಾಯಕರಾಗಿ ರೂಪಗೊಳ್ಳುತ್ತಾರೆ ಎಂದು ಶಾಂತ ವಿದ್ಯಾಸಂಸ್ಥೆಗಳ ಧರ್ಮದರ್ಶಿ ಡಾ. ಪ್ರೀತಿ ಸುಧಾಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಶಿಕ್ಷಣ ಸಂಸ್ಥೆಯ ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಶಾಲಾ ನಾಯಕರು ಹಾಗೂ ವಿವಿಧ ತರಗತಿಗಳ ಪ್ರತಿನಿಧಿಗಳಿಗೆ ಪ್ರತಿನಿಧಿ ಪತ್ರ ವಿತರಿಸಿ ಮಾತನಾಡಿ, ಕುಟುಂಬದಿಂದ ರಾಷ್ಟ್ರದವರೆಗೆ ಸಮರ್ಥ ನಾಯಕರ ಅವಶ್ಯಕತೆ ಇದ್ದು ಶಾಲಾ ಹಂತದಲ್ಲಿಯೇ ನಾಯಕತ್ವದ ತರಬೇತಿ ಪಡೆಯುವುದರಿಂದ ಪ್ರತಿಯೊಬ್ಬರೂ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು, ಪ್ರಜಾಪ್ರಭುತ್ವದಲ್ಲಿ ಸಮರ್ಥ ನಾಯಕರ ಅವಶ್ಯಕತೆ ಅತ್ಯಂತ ಮಹತ್ವದ್ದಾಗಿರುತ್ತದೆ. ಸಮರ್ಥ ಮತ್ತು ಸಂವೇದನಾಶೀಲ ನಾಯಕರಿದ್ದರೆ ಮಾತ್ರ ಒಂದು ಕುಟುಂಬ, ಸಂಸ್ಥೆ, ವ್ಯವಸ್ಥೆ ಹಾಗೂ ಇಡೀ ದೇಶ ಬೆಳೆಯಲು ಸಾಧ್ಯ ಎಂದರು.ವಿದ್ಯಾಭ್ಯಾಸದ ಹಂತದಲ್ಲಿ ನಾಯಕರು ತನ್ನ ಶಾಲೆ ಅಥವಾ ತರಗತಿಯ ವಿದ್ಯಾರ್ಥಿಗಳನ್ನು ಗುರಿ ಸಾಧನೆಯತ್ತ ವ್ಯವಸ್ಥಿತವಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಮತ್ತು ಸಂವೇದನೆ ಹೊಂದಿರಬೇಕು, ಶಾಲೆಯ ವಿವಿಧ ಚಟುವಟಿಕೆಗಳ ಯೋಜನೆ, ಕಾರ್ಯನಿರ್ವಹಣೆ, ಜವಾಬ್ದಾರಿ ಹಂಚಿಕೆ ಹಾಗೂ ಕಾರ್ಯಕ್ರಮದ ಮೌಲ್ಯವನ್ನು ನಿರ್ಧರಿಸಿ ಇನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ನಾಯಕರಾಗಿ ಎಲ್ಲ ವಿದ್ಯಾರ್ಥಿಗಳು ಬೆಳೆಯಬೇಕು, ತನ್ನ ಗುರಿಯನ್ನು ಅರ್ಥ ಮಾಡಿಕೊಳ್ಳುವುದು, ಪಾರದರ್ಶಕ ಚಟುವಟಿಕೆಗಳು, ನೈತಿಕತೆ, ಎಲ್ಲರನ್ನು ಒಳಗೊಳ್ಳುವ ಗುಣ, ಉಸ್ತುವಾರಿ ತಂತ್ರ ಮತ್ತು ಅನುಭೂತಿಯನ್ನು ನಾಯಕರು ಹೊಂದಿದ್ದು ಶಾಲೆಗಳ ಚಟುವಟಿಕೆಗಳನ್ನು ಗುಣಾತ್ಮಕವಾಗಿ ಮುನ್ನಡೆಸುವಲ್ಲಿ ನೆರವಾಗಬೇಕು ಎಂದು ಪ್ರೇರೇಪಿಸಿದರು.
ಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಅಲ್ಲಪ್ಪ ಪ್ರಸಾದ್ ಶಾಲಾ ನಾಯಕರಿಗೆ ನಾಯಕತ್ವದ ಪ್ರಮಾಣವಚನ ಬೋಧಿಸಿ, ನಾಳಿನ ನಾಯಕರಾಗಬೇಕಾದ ನೀವು ನಾಯಕತ್ವದ ಬೌದ್ಧಿಕ, ಸಾಮಾಜಿಕ, ತಾಂತ್ರಿಕ, ನಿರ್ವಹಣಾತ್ಮಕ ಹಾಗೂ ನೈತಿಕತೆಯ,ಸಾಕ್ಷಿ ಪ್ರಜೆಗಳಾಗಿ ಬಾಳಬೇಕೆಂದರು.
ಕಾರ್ಯಕ್ರಮದಲ್ಲಿ ಶಾಂತ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಮತ್ತು ಡೀನ್ ಡಾ. ನವೀನ್ ಸೈಮನ್, ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಿನಾಥ್, ಅಧ್ಯಾಪಕರಾದ ರಂಗರಾಜನ್, ಕಲ್ಯಾಣಿ, ಕಲೀಮುಲ್ಲಾ, ಸಿರೀಶ, ರಾಧಾ, ಶಶಿಧರ್, ವೆಂಕಟೇಶ್ ಇದ್ದರು.