ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಸ್ತೂರಿ ರಂಗನ್ ವರದಿಯ ನ್ಯೂನ್ಯತೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಗುರುವಾರದಿಂದ ಜಿಲ್ಲೆಯಾದ್ಯಂತ ಅಭಿಯಾನವನ್ನು ಹಮ್ಮಿಕೊಂಡಿದೆ.ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್. ವಿಜಯಕುಮಾರ್, ಕಸ್ತೂರಿ ರಂಗನ್ ವರದಿ ವಿರೋಧಿ ಮನೆ ಮನೆಗಳಿಗೆ ತೆರಳಿ ಕರಪತ್ರಗಳನ್ನು ವಿತರಿಸಲಾಗುವುದು. ಇದರ ಜತೆಗೆ ವರದಿಯಲ್ಲಿನ ನ್ಯೂನ್ಯತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಈ ವರದಿಯನ್ನು ತಿರಸ್ಕರಿಸಬೇಕೆಂದು ಕೆಲವು ಶಾಸಕರು, ಸಂಸದರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಜಿಲ್ಲೆಯ ಜೆಡಿಎಸ್ ಮುಖಂಡರು ನಿಯೋಗದ ಮೂಲಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿಯ ಸಾಧಕ - ಬಾಧಕಗಳ ಬಗ್ಗೆ ತಿಳಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಈ ವರದಿಗೆ ಆಕ್ಷೇಪಣೆ ಸಲ್ಲಿಸಲು ಸೆ. 30 ಕೊನೆಯ ದಿನ. ಕಸ್ತೂರಿ ರಂಗನ್ ವರದಿಯಿಂದಾಗಿ ಸಮಸ್ಯೆ ಆಗಲಿರುವ ಗ್ರಾಮಸ್ಥರು ಸೇರಿದಂತೆ ಸಂಘ ಸಂಸ್ಥೆಯವರು ಆಕ್ಷೇಪಣೆ ಸಲ್ಲಿಸಬೇಕು. ಜಿಲ್ಲೆಯ ಹಲವು ನಗರ ಪ್ರದೇಶಗಳಿಗೆ ಈ ವರದಿಯಿಂದಾಗಿ ತುಂಬಾ ತೊಂದರೆಯಾಗಲಿದೆ. ಅದ್ದರಿಂದ ಸ್ಥಳೀಯ ಸಂಸ್ಥೆಗಳು ಕೂಡಲೇ ನಿರ್ಣಯ ಕೈಗೊಂಡು ಆಕ್ಷೇಪಣೆ ಸಲ್ಲಿಸುವ ಕೆಲಸ ಜರೂರಾಗಿ ಆಗಬೇಕಾಗಿದೆ. ಹಾಗಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್)ದ ಅಧ್ಯಕ್ಷ ಡಾ.ಎಚ್.ಟಿ. ಮೋಹನ್‌ಕುಮಾರ್ ಅವರು ಮಾತನಾಡಿ, ಕಸ್ತೂರಿ ರಂಗನ್ ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಉಪಗ್ರಹ ಆಧಾರಿತ ನಕ್ಷೆಯನ್ನು ತಯಾರಿಸಲಾಗಿದ್ದು, ಮಲೆನಾಡಿನ ಜನ ಜೀವನ ಸಂಸ್ಕೃತಿಯ ಹಲವಾರು ಗ್ರಾಮ, ನಗರ ಜನ ವಸತಿ ಪ್ರದೇಶಗಳು ಹಾಗೂ ರೈತರ ಭೂಮಿ, ಗೋಮಾಳ, ಹುಲುಬನಿ ಸೇರಿದಂತೆ ಕಂದಾಯ ಭೂಮಿಗಳನ್ನೂ ಈ ವ್ಯಾಪ್ತಿಯಲ್ಲಿ ತಂದು ಅವೈಜ್ಞಾನಿಕ ನಕ್ಷೆ ತಯಾರಿಸಲಾಗಿದೆ ಎಂದರು.
ಈ ವರದಿ, ಗೋವಾ ಪೌಂಡೇಷನ್ ಎಂಬ ಎನ್‌ಜಿಓ ಕೊಡಗೆಯಾಗಿದೆ. ವಿದೇಶದ ಕೆಲವು ಎನ್‌ಜಿಓಗಳು ಸರ್ಕಾರದ ಮೇಲೆ ಒತ್ತಡ ಹೇರಿ ವರದಿ ಜಾರಿಗೊಳಿಸಲು ಆರನೇ ಬಾರಿ ಅಧಿಸೂಚನೆ ಹೊರಡಿಸಿವೆ. ಈ ಹಿಂದೆ ಹೊರಡಿಸಲಾದ ಅಧಿಸೂಚನೆಯನ್ನು ತಡೆ ಹಿಡಿಯುವಂತೆ ಹೋರಾಟ ನಡೆಸಲಾಗಿತ್ತು ಎಂದು ಹೇಳಿದರು.ವರದಿಯ ನ್ಯೂನ್ಯತೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಸಂಜಯ್ ಕುಮಾರ್ ನೇತೃತ್ವದ ಸಮಿತಿ ರಚಿಸಿತ್ತು. ಆದರೆ, ಎರಡು ವರ್ಷಗಳಾದರೂ ಈ ಸಮಿತಿ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದೆ. ಕಸ್ತೂರಿ ರಂಗನ್ ವರದಿಯ ಜಾರಿಗೆ ನಮ್ಮ ವಿರೋಧ ಇಲ್ಲ. ಆದರೆ, ಜನ ವಸತಿ ಪ್ರದೇಶ, ಕಾಫಿ ಬೆಳೆಗಾರರು ಸೇರಿದಂತೆ ಎಲ್ಲಾ ರೀತಿಯ ರೈತರಿಗೆ ತೊಂದರೆಯಾಗದಂತೆ ಕೆಲವು ಮಾರ್ಪಾಡು ತರಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಜಯರಾಂ, ಮುಖಂಡರಾದ ವಸಂತೇಗೌಡ, ಲಿಂಗಪ್ಪಗೌಡ, ದೇವರಾಜ್, ಶಂಕರ್, ಯತೀಶ್, ಮಲ್ಲೇಶ್ ಹಾಗೂ ಕೆ.ಕೆ. ರಘು ಉಪಸ್ಥಿತರಿದ್ದರು.