ಧಾರವಾಡ:
ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖ ಘಟ್ಟ. ಈ ಸಮಯದಲ್ಲಿ ಕೇವಲ ವಿದ್ಯಾರ್ಜನೆ ಅಲ್ಲದೇ ದೇಶದ ಸ್ಥಿತಿಗತಿಗಳ ಬಗ್ಗೆಯೂ ಅವಲೋಕನ ಹಾಗೂ ನೈತಿಕ ಶಿಕ್ಷಣವು ಮುಖ್ಯ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 58ನೇ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ನಿಮಿತ್ತ ಜೆಎಸ್‌ಎಸ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತೀಯ ಪರಂಪರೆ ಮತ್ತು ರಾಷ್ಟ್ರಪುಷ್ಪ ನಿವೇದಿತಾ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹೆಗ್ಗಡೆ ಅವರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಮೂಲಕ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡುತ್ತಿರುವುದು ನಮ್ಮ ಸೌಭಾಗ್ಯ. ನಮ್ಮ ಅವಲೋಕನೆಗೂ ಸಿಗದಷ್ಟು ಸಮಾಜಮುಖಿ ಕಾರ್ಯ ಮಾಡುತ್ತ ಬಂದಿದ್ದಾರೆ. ಇವರ ಯೋಜನೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೇ ದೇಶಾದ್ಯಂತ ಎಲ್ಲರ ಜನರಿಗೂ ನೆಮ್ಮದಿಯ ಜೀವನ ಕಟ್ಟ್ಟಿಕೊಟ್ಟಿವೆ ಎಂದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರಂತೆ ದೇಶದ ಬಗ್ಗೆ ಪ್ರೇಮ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಮನೋರಂಜನೆಗಾಗಿ ಸಮಯ ವ್ಯರ್ಥ ಮಾಡದೇ ಹೆಚ್ಚಿನ ಜ್ಞಾನ ಹಾಗೂ ದೇಶದ ಉದ್ಧಾರಕ್ಕಾಗಿ ಬಳಸಿಕೊಳ್ಳಬೇಕು. ಯುವಜನತೆಯೇ ದೇಶದ ಶಕ್ತಿ. ಜಾತಿ-ಧರ್ಮಗಳ ಆಧಾರದ ಮೇಲೆ ದೇಶವನ್ನು ಒಡೆದಾಳುವ ನೀತಿ ಸರಿಯಲ್ಲ. ಒಗ್ಗಟ್ಟೆ ನಮ್ಮ ದೇಶದ ಬಲವಾಗಬೇಕು ಎಂಬ ಸಲಹೆ ನೀಡಿದರು.ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, 70ರ ದಶಕದಲ್ಲಿ ಈ ಶಿಕ್ಷಣ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವಾಗ ಶ್ರೇಯೋಭಿವೃದ್ಧಿಗಾಗಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥರ ಪ್ರೇರಣೆಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಜವಾಬ್ದಾರಿ ವಹಿಸಿ ಅಭಿವೃದ್ಧಿಗೊಳಿಸಿದರು ಎಂದರು. ಇದೇ ವೇಳೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಜನತಾ ಶಿಕ್ಷಣ ಸಮಿತಿ ಪರವಾಗಿ ಸನ್ಮಾನಿಸಲಾಯಿತು.
ಚಿನ್ಮಯಿ ಜಾಹಾಗಿರದಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸುಜಾತಾ ಕೊಂಬಳಿ ಸ್ವಾಗತಿಸಿದರು. ವಿವೇಕ ಲಕ್ಷ್ಮೇಶ್ವರ, ಮಹಾಂತ ದೇಸಾಯಿ ಇದ್ದರು.