ಹೊರಗಿನಿಂದ ಕಲಿಯುವುದು ಸಾಕಷ್ಟಿದೆ: ತನ್ವೀರ್‌ ಆಸೀಫ್‌

KannadaprabhaNewsNetwork |  
Published : Jun 16, 2025, 03:12 AM IST
6 | Kannada Prabha

ಸಾರಾಂಶ

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಹೊರಗಿನಿಂದ ಕಲಿಯುವುದು ಸಾಕಷ್ಟಿರುತ್ತದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಹೊರಗಿನಿಂದ ಕಲಿಯುವುದು ಸಾಕಷ್ಟಿರುತ್ತದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ನಾರಾಯಣಶಾಸ್ತ್ರಿ ರಸ್ತೆಯ ದಿ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ತಾತಯ್ಯ ಸ್ಮಾರಕ ಉಪನ್ಯಾಸ ಮಾಲೆ - 2025 ರ ಅಂಗವಾಗಿ ನಾಗರೀಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು - ಭೇದಿಸುವ ಸಲಕರಣೆಗಳು, ಸಾಧನೆಗಳು- ಗುರಿ ಮತ್ತು ಪೂರ್ವ ಸಿದ್ಧತೆಗಳ ಕೆಲವು ಆಯಾಮಗಳು ಕುರಿತು ಅವರು ಮಾತನಾಡಿದರು.

ಸ್ಪರ್ಧಾತ್ಮ ಪರೀಕ್ಷೆಗೆ ನಾವು ತಯಾರಿ ನಡೆಸುವಾಗ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ನಾವೇ ಎಲ್ಲವನ್ನೂ ಓದಲು ಸಾಧ್ಯವಿಲ್ಲ. ಬೇರೆಯವರಿಂದ ಮತ್ತು ಹೊರಗಿನಿಂದ ಕಲಿಯುವುದು ಬಹಳಷ್ಟಿದೆ. ನಾನು ಎಲ್ಲವನ್ನೂ ಕಲಿತಿದ್ದೇನೆ ಎಂಬ ಅಹಮ್ಮಿಕೆಯು ಮನುಷ್ಯನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಇನ್ನೂ ಕಲಿಯಬೇಕಿದೆ ಎಂಬ ವಿನಯವಂತಿಕೆ ಆತನನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು.

ನನ್ನ ಜೀವನ ಎಂದಾಗ ಕೇವಲ ನನ್ನದೊಂದೇ ಜೀವನ ಕಾಣುತ್ತದೆ. ನನ್ನ ಮುಂದಿನ ಮತ್ತು ನನ್ನ ಸಮಾಜದ ನೂರಾರು ಮಂದಿಯ ಜೀವನದ ಪಾಠ ದೊಡ್ಡದು ಎಂಬುದನ್ನು ತಿಳಿಯಬೇಕು. ಆಗ ಅಹಂಕಾರ ಕಡಿಮೆ ಆಗುತ್ತದೆ. ಜೇನು ಹೇಗೆ ಕೇವಲ ಒಂದು ಹೂವಿನ ಮಕರಂದದಿಂದ ಜೇನು ಉತ್ಪಾದಿಸಲು ಸಾಧ್ಯವಿಲ್ಲವೋ, ಹಾಗೆಯೇ ನಾವು ಒಂದೇ ವಿಷಯದ ಮೇಲೆ ಕೇಂದ್ರೀಕರಿಸಿ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಸಂಗತಿಗಳು ಕೇವಲ ಪರೀಕ್ಷೆಗೆ ಮಾತ್ರವಲ್ಲ. ಜೀವನಕ್ಕೂ ಇದೇ ಅನ್ವಯಿಸುತ್ತದೆ. ನಾನು ಚಿಕ್ಕವನ್ನು ಎಂಬ ಭಾವನೆ ಇರಬೇಕು. ಮೂರ್ಖರು ಮಾತ್ರ ಎಲ್ಲಾ ಗೊತ್ತು ಎಂಬ ಭ್ರಮೆಯಲ್ಲಿರುತ್ತಾರೆ ಎಂದು ಅವರು ಹೇಳಿದರು.

ಹೊಸದಾಗಿ ಏನಾದರೂ ಸಾಧಿಸಬೇಕು ಎಂದಾಗ ನಿಮ್ಮ ಆಲೋಚನಾ ಶಕ್ತಿ ಹೆಚ್ಚಾಗಬೇಕು. ಒಂದರಿಂದ ಹತ್ತು ಮುಟ್ಟುವುದು ಸುಲಭ. ಆದರೆ ಶೂನ್ಯದಿಂದ ಒಂದನ್ನು ಮುಟ್ಟುವುದು ಸುಲಭವಲ್ಲ. ಸೋಲನ್ನು ಧೈರ್ಯದಿಂದ ಎದುರಿಸುವುದನ್ನು ಕಲಿಯಬೇಕು. ಏಕಾಗ್ರತೆ ಬೆಳೆಸಿಕೊಳ್ಳಬೇಕು. ಏಕೆಂದರೆ ಚಂಚಲತೆಗೆ ಇತ್ತೀಚೆಗೆ ವಿಫಲ ಅವಕಾಶವಿದೆ. ಆದ್ದರಿಂದ ಧ್ಯಾನ, ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು. ಜಗತ್ತಿನಲ್ಲಿ ಒಳ್ಳೆಯದು ಮತ್ತು ಕೆಟ್ಟದು ಎರಡೂ ಇರುತ್ತದೆ. ನಾವು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪುಸ್ತಕಗಳನ್ನು ಓದುವಾಗ ಪರಿವಿಡಿ, ಮುಖಪುಟ, ಬೆನ್ನುಡಿಯನ್ನು ಓದಿದರೆ ಅದರೊಳಗಿನ ಸಾರ ಅರ್ಥವಾಗಿಬಿಡುತ್ತದೆ. ನಮ್ಮ ಮಾತನಾಡುವ ಶಕ್ತಿಯಿಂದ ಓದುವ ಶಕ್ತಿ ವೇಗವಾಗಿರುತ್ತದೆ. ನಿರಂತರ ಅಧ್ಯಯನದಿಂದ ಒಂದು ಸಾಲಿನ ಮಧ್ಯದ ಒಂದು ವಾಖ್ಯ ಓದಿದರೆ ಉಳಿದೆಲ್ಲವೂ ಅರ್ಥವಾಗಿಬಿಡುತ್ತದೆ. ಹಾಗೆ ನಿರಂತರ ಅಧ್ಯಯನದಲ್ಲಿ ನಾವು ತೊಡಗಬೇಕು ಎಂದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮತ್ತು ಅಧ್ಯಕ್ಷೀಯ¸ಭಾಷಣ ಮಾಡಿದ ಸಂಸ್ಥೆ ಅಧ್ಯಕ್ಷ ಸಿ.ವಿ. ಗೋಪಿನಾಥ್‌, ನಾನು ಇಲ್ಲಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ನಾವು ಇಲ್ಲಿ ಪ್ರತಿ ಭಾನುವಾರ ಮನೆ ಮನೆಗೆ ಹೋಗಿ ಭಿಕ್ಷೆ ಎತ್ತಿ ಓದಿದ್ದೇವೆ. ಎಸ್‌.ಎಲ್‌. ಭೈರಪ್ಪ ಸೇರಿದಂತೆ ಅನೇಕ ಮಹನೀಯರು ಇಲ್ಲಿದ್ದರು. ಶ್ರಾವಣ ಶನಿವಾರದಲ್ಲಿ ನಮ್ಮ ಅಮ್ಮ ನಾಲ್ಕು ಮನೆಯ ಭಿಕ್ಷೆ ಬೇಡಿಸುತ್ತಿದ್ದರು. ಅದು ನನ್ನಲ್ಲಿ ಸಹಜವಾಗಿ ಚಿಕ್ಕವನು ಎಂಬ ಭಾವನೆ ಮೂಡಿಸಿತು ಎಂದರು.

ಶೇಖ್‌ತನ್ವೀರ್‌ಆಸಿಫ್‌ಅವರು ಪ್ರಮಾಣಿಕರು, ವಿನಯಶೀಲತೆ ಇದೆ. ಟೊಮೆಟೋ ಎಂದ ಮೇಲೆ ಒಂದೆರಡು ಕೊಳತೆ ಹಣ್ಣು ಇರಬಹುದು. ಆದರೆ ಶೇಖ್‌ಅವರಲ್ಲಿ ವಿನಯತೆ ಹೆಚ್ಚಿದೆ. ಅವರು ಕಷ್ಟದಿಂದ ಬಂದವರು ಎಂದರು.

ಬಳಿಕ ನಡೆದ ಸಂವಾದದಲ್ಲಿ ಶೇಖ್‌ ಅವರು, ಸರ್ಕಾರಿ ಕೆಲಸ ಪಡೆಯುವುದೇ ಜೀವನದ ಗುರಿಯಾಗಬಾರದು. ಅದಕ್ಕೂ ಹೆಚ್ಚಾಗಿ ಸ್ವಯಂ ಉದ್ಯೋಗದ ಮೂಲಕ ಅನೇಕ ಒಳ್ಳೆಯ ಕೆಲಸ ಮಾಡಬಹುದು. ಅನೇಕರಿಗೆ ಉದ್ಯೋಗ ಕೊಡಬಹುದು. ಗುಜರಾತ್‌ನಲ್ಲಿ ನಾಗರೀಕ ಸೇವೆ ಪರೀಕ್ಷೆ ತೆಗೆದುಕೊಳ್ಳುವವರು ಕಡಿಮೆ. ಏಕೆಂದರೆ ಅಲ್ಲಿ ಎಲ್ಲರೂ ಉದ್ಯಮಿಗಳಾಗಲು ಬಯಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯದರ್ಶಿ ಅಶ್ವತ್ಥ್‌ ನಾರಾಯಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ