ಮಹೇಂದ್ರ ದೇವನೂರು
ಪೋಷಕರು ಆಂಗ್ಲ ಭಾಷಾ ವ್ಯಾಮೋಹದಲ್ಲಿ ಮುಳುಗಿರುವುದರಿಂದಲೋ ಅಥವಾ ತಮ್ಮ ಮಕ್ಕಳನ್ನು ವೈದ್ಯ, ಎಂಜಿನಿಯರ್ ವೃತ್ತಿಯಲ್ಲಿ ನೋಡುವ ಹೆಬ್ಬಯಕೆಯಿಂದಾಗಿಯೋ ಸಾಂಪ್ರದಾಯಿಕ ಕಲೆಗಳ ಕಲಿಕೆಯ ಮೂಲಕ ಅದನ್ನೇ ವೃತ್ತಿ ಮಾಡಿಕೊಳ್ಳಲು ಅನೇಕ ಸವಾಲನ್ನು ಎದುರಿಸಬೇಕಿದೆ ಎಂದು ಶಾಸಕ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿದರು.
ದಸರಾ ಮಹೋತ್ಸವ ಅಂಗವಾಗಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ವತಿಯಿಂದ ಸಿದ್ದಾರ್ಥನಗರದ ಕಾವಾ ಆವರಣದಲ್ಲಿ ಆಯೋಜಿಸಿದ್ದ ಕಲಾ ಜಾತ್ರೆ ಉದ್ಘಾಟನೆ, ಟೆರಾಕೋಟಾ ಭಿತ್ತಿ ಶಿಲ್ಪಕಲೆಯ ಅನಾವರಣ ಹಾಗೂ ರಾಷ್ಟ್ರೀಯ ಕರಕುಶಲ ವಸ್ತು, ಲಲಿತ ಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮಲ್ಲಿರುವ ಅನೇಕ ಕಲೆ, ಸಂಸ್ಕೃತಿಗಳು ನಾಶಗೊಳ್ಳುತ್ತಿದ್ದು, ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸವಾಲನ್ನು ಎದುರಿಸಬೇಕಾಗಿದೆ ಎಂದರು.
ಕಲೆ ಮೇಲೆ ಅಭಿಮಾನವಿದ್ದಾಗ ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ.ನಿಜವಾದ ಕಲೆ ಮತ್ತು ಸಂಸ್ಕೃತಿ ಜೀವನದ ಕಷ್ಟ ಸುಖ ಮತ್ತು ಬದುಕಿನ ಏಳು ಬೀಳನ್ನು ತಿಳಿಸಿಕೊಡುವುದರೊಂದಿಗೆ ಸರಿಮಾಡಿಕೊಳ್ಳಲು ಅವಕಾಶ ನೀಡಲಿದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಇದರ ಅರಿವು ಮೂಡಿಸುವುದು ಮುಖ್ಯ ಎಂದರು.
ಅಲ್ಲದೇ ದೃಶ್ಯವಿದು ನಟಿಸಲು, ನಾದವಿದು ಆಲಿಸಲು, ಕಾವ್ಯವಿದು ವಾಚಿಸಲು, ನಾಟ್ಯವಿದು ನರ್ತಿಸಲು, ನಟನೆಯಿದು ನಟಿಸಲು, ಚಂದನ ವನದ ನಂದನವನಕ್ಕಿದೋ ಸ್ವಾಗತ ಎಂಬ ಶೀರ್ಷಿಕೆಯಲ್ಲಿ ಗಣ್ಯರನ್ನು ಸ್ವಾಗತಿಸಲಾಯಿತು.
ಸಾಂಪ್ರದಾಯಿಕ ಚಿತ್ರಕಲೆ ವಿಭಾಗದಲ್ಲಿ ಬೆಂಗಳೂರಿನ ಬೃಂದ (ಯಶೋಧಾ ಕೃಷ್ಣ) ಪ್ರಥಮ, ಬಿ. ರೂಪಾ (ರಾಜೇಶ್ವರಿ) ದ್ವಿತೀಯ, ಆರ್. ಕೀರ್ತಿ (ಶಿವ) ತೃತೀಯ.
ಕರಕುಶಲ ಕಲೆ ? ಇನ್ಲೇ ವಿಭಾಗದಲ್ಲಿ ಮೈಸೂರಿನ ಆರ್. ಮೋಹನ್ (ವುಡ್‌ಇನ್ಲೇ) ಪ್ರಥಮ, ಬೆಂಗಳೂರಿನ ಎಸ್. ಹರ್ಷಿತ್(ಕಿನ್ನಲ ಕಲೆ) ದ್ವಿತೀಯ, ಕಮ್ಮಾರ ಹನುಮಂತಪ್ಪ (ಬಾಟಲ್ ಕಲೆ) ತೃತೀಯ. ಚಿತ್ರಕಲೆ ವಿಭಾಗದಲ್ಲಿ ಬೆಂಗಳೂರಿನ ಬಿ.ಎಚ್. ಲೋಕೇಶ್(ಪಯಣ) ಪ್ರಥಮ, ಎಚ್. ಶಿವಕುಮಾರ್(ಕೊನೆಯ ಸ್ನಾನ) ದ್ವಿತೀಯ ಮತ್ತು ಕೆ.ಆರ್. ನಗರದ ಎಂ.ಎಲ್. ಪವನ ಕುಮಾರ್(ತ್ರೆಡ್‌ಆಫ್‌ಲೈಫ್‌ಅಂಡ್ ಡೆತ್) ತೃತೀಯ.
ಛಾಯಾಚಿತ್ರ ವಿಭಾಗದಲ್ಲಿ ಮೈಸೂರಿನ ಎಂ.ಎಸ್. ಬಸವಣ್ಣ (ಟೈಗರ್ ಅಟಾಕ್ ಆನ್ ವೈಲ್ಡ್ ಡೀರ್) ಪ್ರಥಮ, ಬಾಗಲಕೋಟೆಯ ಇಂದ್ರ ಕುಮಾರ್‌ಬಿ. ದಸೆನವರ್(ಡ್ರಾಟ್) ದ್ವಿತೀಯ ಮತ್ತು ಹಾವೇರಿಯ ಮನೋಜ್ ಸುನಗರ್ (ಹೋರಿ ಹಬ್ಬ) ತೃತೀಯ ಸ್ಥಾನಗಳಿಸಿದ್ದಾರೆ.
ಗ್ರಾಫಿಕ್ಸ್ / ಮುದ್ರಣ ಕಲೆ ವಿಭಾಗದಲ್ಲಿ ಬೆಂಗಳೂರಿನ ಟಿ.ಎ. ತುಳಸಿ (ಕಟ್‌ಆಫ್‌ಇನ್‌ಹೆರಿಟೆನ್ಸ್) ಪ್ರಥಮ, ಕಲಬುರ್ಗಿಯ ಕಾವ್ಯ ಗದ್ದಿ (ಆನ್‌ದಿ ವೇ) ಮತ್ತು ಚಿತ್ರದುರ್ಗದ ಜಿ.ಎಂ. ಮುತ್ತುರಾಜ್ ಅವರ (ಡೀಮ್ಸ್‌ಬಿಯಾಂಡ್‌ಕೆರೆನ್ಸಿ).
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಾದೇಶಿಕ ನಿರ್ದೇಶಕ ಪ್ರೊ.ಡಿ. ಮಹೇಂದ್ರ, ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಅನಿಮೇಷನ್ ಕಲಾವಿದ ವೈಭವ್ ಕುಮರೇಶ್, ಶಿಲ್ಪ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಕರ್ನಾಟಕ ಶಿಲ್ಪಕಲಾ ಸಂಸ್ಥೆ ಅಧ್ಯಕ್ಷ ಎಂ.ಸಿ. ರಮೇಶ್, ಲಲಿತಕಲೆ ಉಪ ಸಮಿತಿ ಅಧ್ಯಕ್ಷ ರಘು ರಾಜೇ ಅರಸ್, ಕಾವಾ ಡೀನ್ ಎ. ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಎಸ್. ಮಠಪತಿ, ಸಮಿತಿ ಉಪಾಧ್ಯಕ್ಷ ಭಾಸ್ಕರ್, ರಾಜೇಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್, ಕಾರ್ಯದರ್ಶಿ ಸೂರ್ಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.ಪ್ರದರ್ಶನದ ಆಕರ್ಷಣೆ:
ಪ್ರಸ್ತುತ ಸಮಾಜದಲ್ಲಿ 5ಜಿ ಜಗತ್ತಾಗಿದ್ದು, ಹುಟ್ಟಿದ ಮಕ್ಕಳಿಂದ ಹಿಡಿದು ಹಿರಿಯವರೆಗೂ ಮೊಬೈಲ್ ನ ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗಿದ್ದಾರೆ. ಮುಂದೆ ಹೊಟ್ಟೆಯಲ್ಲಿರುವ ಮಗು ಸಹ 6ಜಿ ಕಾಲದ್ದಾಗಿದ್ದು, ಮೊಬೈಲ್ ಹಿಡಿದೇ ಹೊರಬರಲಿದೆ ಎಂಬಂತಹ ಕಲಾಕೃತಿ, ಸಾಮಾಜಿಕ ಜಾಲತಾಣವೆಂಬ ಬಲೆಯಲ್ಲಿ ಸಿಲುಕಿದ ಮನುಷ್ಯರು ಎಂಬ ಕಲ್ಪನೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ಸ್ ಸ್ಟಾ ಗ್ರಾಂ, ಯೂ ಟ್ಯೂಬ್, ಎಕ್ಸ್ ಖಾತೆ ಈ ರೀತಿಯ ಜಾಲತಾಣವೆಂಬ ಬಲೆಯಲ್ಲಿ ಸಿಲುಕುತ್ತಿರುವ ಮನುಷ್ಯನ ಕಲಾಕೃತಿಗಳನ್ನು ಪ್ರದರ್ಶನದಲ್ಲಿರಿಸಿದ್ದು, ಪ್ರಸ್ತುತ ಮಾನವನ ವರ್ತನೆಯ ನೈಜತೆಯು ಎಲ್ಲರನ್ನು ಆಕರ್ಷಿಸಿತು.ಗಮನ ಸೇಳೆದ ಕಲಾಕೃತಿಗಳು:
ಅಂತಯೇ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಪಡೆದಿರುವ ರೂಪ ವಸುಂಧರ ಅವರ ಒಣ ಎಲೆ, ಹೂವಿನಿಂದ ರಚಿಸಿರುವ ಚಿತ್ರಕಲೆ, ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಬಗೆಯ ಕುರಿತು ಕಲಾವಿದ ಎ.ಆರ್. ಮಂಜುನಾಥ್ ಅವರು ಚಿತ್ರಿಸಿರುವ ಕಲಾಕೃತಿಗಳು, ಪ್ರಸಿದ್ಧ ಸಾಹಿತಿಗಳು, ಮೈಸೂರು ಅರಮನೆ, ಜಯಮಾರ್ತಾಂಡ ಗೇಟ್, ನಂದಿ, ಚಾಮುಂಡಿಬೆಟ್ಟದ ಗೋಪುರ, ದೊಡ್ಡ ಗಡಿಯಾರ ಹಾಗೂ ಚಿತ್ರನಟರ ಸ್ಕೆಚ್ ಆರ್ಟ್ ಸೇರಿದಂತೆ ಹಲವು ವಿದ್ಯಾರ್ಥಿಗಳಿಂದ ಚಿತ್ರಿಸಿರುವ ಮಂಡಲ ಕಲೆ, ಬಾಲ್ಯಾವಸ್ಥೆಯಲ್ಲಿ ಆಟೋಟವಾಡುತ್ತಿರುವ ಮಕ್ಕಳ ಕ್ಯಾನ್ವಾಸ್ ಚಿತ್ರ, ಪೋಟ್ರೇಟ್ ಚಿತ್ರಗಳು ಮತ್ತು ಕಾರ್ಯಕ್ರಮದ ಆಕರ್ಷಣೆಯಲ್ಲೊಂದಾದ ಟೆರಾಕೋಟಾ ಭಿತ್ತಿ ಶಿಲ್ಪಕಲೆಯಲ್ಲಿ ಮಹಿಳೆ ವಿವಿಧ ವಿನ್ಯಾಸ, ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ಸೇರಿದಂತೆ ಇನ್ನಿತರೆ ಕಲಾಕೃತಿಗಳು ವೀಕ್ಷಕರನ್ನು ಸೆಳೆಯಿತು.