ಕನ್ನಡಪ್ರಭ ವಾರ್ತೆ ಮಾಲೂರು
ಈ ದೇಶದ ಪ್ರಧಾನ ಮಂತ್ರಿಗಳು ದೇಶ ವಿದೇಶಗಳಲ್ಲಿ ಬುದ್ಧನ ನಾಡಿನಿಂದ ಬಂದವರೆಂದು ಭಾಷಣಗಳಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ಏಕೆ ಬುದ್ಧನ ನೆಲದಲ್ಲಿರುವ ಮೂಲನಿವಾಸಿಗಳಿಗೆ ಸೇರಿದ ಬುದ್ಧನ ಮಂದಿರವನ್ನು ಏಕೆ ಬಿಟ್ಟುಕೊಡುತ್ತಿಲ್ಲ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸಿದ್ದರಾಜು ಪ್ರಶ್ನಿಸಿದರು.ಪಟ್ಟಣದಲ್ಲಿ ಬುದ್ಧಗಯ ಸಂರಕ್ಷಣಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಮೌನ ಮೆರವಣಿಗೆ ಹಾಗೂ ಪ್ರತಿಭಟನಾ ರ‍್ಯಾಲಿಯ ಮುಖಾಂತರ ತಾಲೂಕು ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬೌದ್ಧರ ಇತಿಹಾಸವನ್ನು ಮುಚ್ಚು ಹಾಕಲ್ಪಟ್ಟಿದೆ. ಏಕೆಂದರೆ ಅಶೋಕನ ೮೪,೦೦೦ ಶಾಸನಗಳು ಮೂಲ ನಿವಾಸಿ ಬೌದ್ಧರ ಪರವಾಗಿದೆ ಎಂದರು.
12ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆಭೀಮರಾವ್ ಅಂಬೇಡ್ಕರ್ ಅವರು ರಾಷ್ಟ್ರದಾಧ್ಯಂತ ಪ್ರತಿಭಟನೆಗಳನ್ನು ಮಾಡಲು ಕರೆ ನೀಡಿದ್ದು, ಮೊದಲಿಗೆ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ಮಾಡಲು ಸೂಚಿಸಿದ್ದಾರೆ ಅದರಂತೆ ೧೨ರಂದು ಈ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು ಬುದ್ಧನ ಅನುಯಾಯಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಬುದ್ಧಗಯ ಸಂರಕ್ಷಣ ಹೋರಾಟ ಸಮಿತಿಯ ಸಂಚಾಲಕ ಸಂಪಂಗೆರೆ ಮುನಿರಾಜು ಮಾತನಾಡಿದರು.ಪಟ್ಟಣದ ಪದವಿ ಪೂರ್ವ ಕಾಲೇಜಿನ ಮುಂಭಾಗದಿಂದ ಆರಂಭವಾದ ಬಿಹಾರದ ಟೆಂಪಲ್ ಆಕ್ಟ್ ಖಂಡಿಸಿ ಮೌನ ಪ್ರತಿಭಟನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾರಿಕಾಂಬ ವೃತ್ತದ ಮೂಲಕ ತಾಲೂಕು ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಬೌದ್ಧ ಬಿಕ್ಕುಗಳಾದ ಮನೋವಿಕಿತೆ ಬಂತೇಜಿ, ಸುಖಪಾಲ್ ಬಂತೇಜಿ, ಸಿಂಹಾಣಿ ಬಂತೆಜಿ, ಪುರಸಭೆ ಮಾಜಿ ಅಧ್ಯಕ್ಷ ಸಿ ಲಕ್ಷ್ಮೀನಾರಾಯಣ್, ವೆಂಕಟ್ರಾಂ, ಮಾಲೂರು ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನರಸಿಂಹ, ದಲಿತಪರ ಸಂಘಟನೆಗಳ ಮುಖಂಡರು ಹಾಜರಿದ್ದರು.