- ಸಾವಿರಾರು ಸಂಖ್ಯೆಯಲ್ಲಿ ನಾವೇ ಮಠಕ್ಕೆ ಬಂದು ಹೊರಹಾಕ್ತೀವಿ: ಎಚ್.ಎಸ್.ನಾಗರಾಜ ಎಚ್ಚರಿಕೆ - ಹರಿಹರ ಮಾಜಿ ಶಾಸಕರಿಗೆ ತಾಕತ್ತಿದ್ರೆ ಮಠ ಕಟ್ಟಿ, ಉಚ್ಚಾಟಿತ ಸ್ವಾಮೀಜಿಗೆ ಅಲ್ಲಿ ಸ್ವಾಮಿ ಮಾಡಲಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ಇನ್ನೊಂದು ವಾರದೊಳಗೆ ಪೀಠ ತೊರೆಯದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಬಂದು, ಅಲ್ಲಿಂದ ನಿಮ್ಮನ್ನು ಹೊರಹಾಕಬೇಕಾಗುತ್ತದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟಿ, ಸಮಾಜದ ಹಿರಿಯ ಮುಖಂಡ ಎಚ್.ಎಸ್. ನಾಗರಾಜ ಎಚ್ಚರಿಸಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿ ಸಿದ್ಧವಾಗಿರಬೇಕು. ಸಾವಿರಾರು ಸಂಖ್ಯೆಯಲ್ಲಿ ನಾವು ಮಠಕ್ಕೆ ಬರುತ್ತೇವೆ. ಯಾವ ದಿನ ಪೀಠಕ್ಕೆ ಬರುತ್ತೇವೆಂದು ಸಹ ದಿನಾಂಕ ಪ್ರಕಟಿಸುತ್ತೇವೆ. ಇನ್ನೊಂದು ವಾರದಲ್ಲಿ ಮಠ ತೊರೆಯದಿದ್ದರೆ, ಹೊರಹಾಕುವ ಕೆಲಸ ನಾವು ಮಾಡುತ್ತೇವೆ ಎಂದರು.
ಒಂದು ವಾರದೊಳಗೆ ಮಠ ಬಿಡದಿದ್ರೆ ಸಾವಿರಾರು ಜನರನ್ನು ಕರೆ ತಂದು, ನಿಮ್ಮನ್ನು ಮಠದಿಂದಲೇ ಹೊರಹಾಕುತ್ತೇವೆ. ಕಳೆದ 8 ವರ್ಷದಲ್ಲಿ ಧಾರ್ಮಿಕ ಚಟುವಟಿಕೆ ಮಾಡದ ಸ್ವಾಮೀಜಿ ಈಗ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಪೀಠದಲ್ಲಿ ಸದ್ಯಕ್ಕೆ ಸೂಕ್ತ ವಾತಾವರಣ ಇಲ್ಲದ ಹಿನ್ನೆಲೆ ವಚನಾನಂದ ಸ್ವಾಮೀಜಿ ಪೀಠ ತ್ಯಜಿಸುವವರೆಗೂ ಪಾಲಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಪೀಠಕ್ಕೆ ಕಳಿಸಬಾರದು ಎಂದು ಮನವಿ ಮಾಡಿದರು.
ಮಾಜಿ ಸಚಿವ ಮುರುಗೇಶ ನಿರಾಣಿ 2 ವರ್ಷದ ಹಿಂದೆ ಶ್ರೀಮಠದ ಅಭಿವೃದ್ಧಿಗೆ ನೀಡಿದ್ದ ₹2 ಕೋಟಿ ಎಲ್ಲಿದೆ? ಅಷ್ಟೂ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ವಚನಾನಂದ ಸ್ವಾಮಿಗಳು ನಿರಾಣಿ ಅವರಿಂದ ಆಣೆ- ಪ್ರಮಾಣ ಮಾಡಿಸಿಕೊಂಡು, ಸುಳ್ಳು ಹೇಳಿಸುವ ಪ್ರಯತ್ನ ಮಾಡಿದರು. ಇಷ್ಟು ದಿನಗಳಲ್ಲಿ ಒಂದು ದಿನವಾದರೂ ಮಠದಲ್ಲಿ ಇದ್ದೀಯಾ? ಈಗ ಸಮಾಜದ ಭಕ್ತರು ಬೇಕಾ? ಗೌರವಯುತವಾಗಿ ಮಠದಿಂದ ಜಾಗ ಖಾಲಿ ಮಾಡಿದರೆ ಗೌರವ ಎಂದು ಅವರು ಪುನರುಚ್ಛರಿಸಿದರು.
ಕೂಡಲ ಸಂಗಮ ಪೀಠದ ಅಧ್ಯಕ್ಷ ಅಶೋಕ ಗೋಪನಾಳ್ ಮಾತನಾಡಿ, ಕೂಡಲ ಸಂಗಮ ಪೀಠ ಮೀಸಲಾತಿ ಹೋರಾಟ ನಡೆಸಿದಾಗ ಅನೇಕ ಮುಖಂಡರು ಲೋಡ್‌ಗಟ್ಟಲೇ ಅಕ್ಕಿ ನೀಡಿದ್ದರು. ಆದರೆ, ಅನೇಕ ಲೋಡ್ ಅಕ್ಕಿಯನ್ನು ಮಾಜಿ ಶಾಸಕರು ಮಾರಿದ್ದರು. ಇದರ ಲೆಕ್ಕವನ್ನೂ ಕೇಳಿ ನಾವು ಕೂಡ ರಾಜ್ಯ ವ್ಯಾಪಿ ಹೋರಾಟ ಮಾಡುತ್ತೇವೆ. ರಂಗೀಲಾ ಸ್ವಾಮಿ, ಮೇಕಪ್ ಸ್ವಾಮಿ, ಎಸಿ ರೂಂ ಸ್ವಾಮಿ ಅಂದವರನ್ನೇ ವಚನಾನಂದ ಸ್ವಾಮಿ ಹತ್ತಿರ ಸೇರಿಸಿಕೊಂಡಿದ್ದಾರೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ ಮೀಸಲಾತಿ ಹೋರಾಟ ಮಾಡಲಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದರು. ಆ ಕಾನೂನು ಹೋರಾಟದ ಕಡತ ತೋರಿಸಲಿ ಎಂದು ಸವಾಲು ಹಾಕಿದರು.
- - -
ಹನಗವಾಡಿ ಬಳಿ ಹೆದ್ದಾರಿಯಲ್ಲಿ 5 ಎಕರೆ ಜಾಗವನ್ನು ತಮ್ಮ ತಂದೆ ಎಚ್.ಶಿವಪ್ಪ ಪಡೆದುಕೊಂಡಿದ್ದರು. ಅದರ ಸ್ವಲ್ಪ ಹಣ ನೀಡಿದ್ದೆವು. ಆದರೆ, ನೋಂದಣಿ ಆಗಿರಲಿಲ್ಲ. ಪೀಠಕ್ಕೆ ಜಾಗ ಕೇಳಿದಾಗ ನೀಡಲಾಗಿತ್ತು. ಇದು ವಿವಾದದಲ್ಲಿದೆ. ಇವತ್ತು ಲೆಕ್ಕ ಕೊಡಿ ಅಂತಾ ಕೇಳುವ ವ್ಯಕ್ತಿ ಹಿಂದೆ ಇದೇ ವಚನಾನಂದ ಸ್ವಾಮಿಗೆ ಬೈದಾಗ ನಮ್ಮನ್ನು ಬಳಸಿಕೊಂಡಿದ್ದ ಸ್ವಾಮಿ ಈಗ ಅದೇ ವ್ಯಕ್ತಿಗೆ ಕರೆಸಿ, ನಮ್ಮನ್ನು ಬೈಯ್ಯುತ್ತಿದ್ದೀರಿ? ಮಠದ ಏಳಿಗೆಗೆ ಯಾವುದೇ ಪಾತ್ರವಿಲ್ಲದ ವ್ಯಕ್ತಿಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಪರವಾಗಿ ಲೆಕ್ಕ ಕೊಡಿ ಹೋರಾಟದ ನೇತೃತ್ವ ವಹಿಸಿದ ಮಾಜಿ ಶಾಸಕನಿಗೆ ತಾಕತ್ತಿದ್ದರೆ ಮಠ ಕಟ್ಟಿ, ನಿಮ್ಮನ್ನೇ ಸ್ವಾಮೀಜಿ ಮಾಡಲಿ.
- - -
-16ಕೆಡಿವಿಜಿ9, 10, 11: ದಾವಣಗೆರೆಯಲ್ಲಿ ಹರಿಹರ ಪಂಚಮಸಾಲಿ ಟ್ರಸ್ಟ್‌ನ ಟ್ರಸ್ಟಿ, ಸಮಾಜದ ಹಿರಿಯ ಮುಖಂಡ ಎಚ್.ಎಸ್.ನಾಗರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.