ಮಹಾನಗರದ ಬೀದಿ ಬೆಳಗಲಿವೆ ಎಲ್‌ಇಡಿ ಬಲ್ಬ್‌ಗಳು

KannadaprabhaNewsNetwork |  
Published : Aug 01, 2025, 12:30 AM IST
ಫೋಟೋ ಎ‍ಲ್‌ಇಡಿ ಸ್ಟ್ರೀಟ್ ಲೈಟ್‌ (ನೆಟ್‌ ಫೋಟೋ) | Kannada Prabha

ಸಾರಾಂಶ

ಪಿಪಿಪಿ ಮಾದರಿಯಲ್ಲಿ ಅವಳಿ ನಗರದಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆದವರೇ 7 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ.

ಮಹಮ್ಮದರಫೀಕ್ ಬೀಳಗಿ

ಹುಬ್ಬಳ್ಳಿ: ಹು-ಧಾ ಮಹಾನಗರದ ಬೀದಿಗಳನ್ನು ಇನ್ಮುಂದೆ ಎಲ್ಇಡಿ ಬಲ್ಬ್‌ಗಳು ಬೆಳಗಲಿದ್ದು, ಇದಕ್ಕಾಗಿ ಮಹಾನಗರ ಪಾಲಿಕೆ ವಿಶೇಷ ಯೋಜನೆ ರೂಪಿಸಿ ಜಾರಿ ಮಾಡಿದೆ. ಮುಂದಿನ 8 ತಿಂಗಳ ಅವಧಿಯಲ್ಲಿ ಮಹಾನಗರ ಎಲ್ಇಡಿ ಬಲ್ಬ್‌ಗಳ ಬೆಳಕಿನಲ್ಲಿ ಕಂಗೊಳಿಸಲಿದೆ.

ಬೀದಿ ದೀಪಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ. ಅದರ ನಿವಾರಣೆಗೆಂದು ಮಹಾನಗರ ಪಾಲಿಕೆ ಸುಮಾರು ₹93 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಎಲ್‌ಇಡಿ ದೀಪ ಅಳವಡಿಸಲು ಮುಂದಾಗಿದೆ. ಈಗಾಗಲೇ ಟೆಂಡರ್ ಆಹ್ವಾನಿಸಿದೆ.

ಅವಳಿ ನಗರಗಳ ಮುಖ್ಯರಸ್ತೆ, ಬಡಾವಣೆ ಮಾರ್ಗ, ಉದ್ಯಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ 64 ಸಾವಿರಕ್ಕೂ ಹೆಚ್ಚು ದೀಪಗಳಿವೆ. ಬಹುತೇಕ ಕಡೆ ಎಸ್‌ವಿಎಲ್ (ಸೋಡಿಯಂ ವೆಪರ್ ಲೈಟ್), ಟ್ಯೂಬ್‌ ಲೈಟ್ ಹಾಗೂ ಕೆಲವು ಕಡೆ ಮಾತ್ರ ಎಲ್‌ಇಡಿಗಳಿವೆ. ಇವುಗಳಿಂದ ಪಾಲಿಕೆಗೆ ವಿಪರೀತ ಬಿಲ್ ಬರುತ್ತಿದ್ದು, ಮಹಾನಗರ ಪಾಲಿಕೆಯು ಪ್ರತಿ ತಿಂಗಳು ₹2 ಕೋಟಿಗೂ ಅಧಿಕ ಮೊತ್ತದ ಬಿಲ್ ಪಾವತಿಸುತ್ತದೆ. ಬಿಲ್‌ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಯೋಜಿಸಿದೆ.

ಎನರ್ಜಿ ಎಫೀಶಿಯೆನ್ಸಿ ಸ್ಕಿಂನಲ್ಲಿ ಅವಳಿ ನಗರದಲ್ಲಿ ಎಷ್ಟು ಎಲ್ಇಡಿ ಲೈಟ್‌ಗಳ ಅವಶ್ಯಕತೆ ಇದೆ ಎಂಬುದರ ಕುರಿತು ವರದಿ ಪಡೆಯಲಾಗಿದೆ. ಸಮೀಕ್ಷೆಯಲ್ಲಿ ಸುಮಾರು 77,000 ದೀಪಗಳ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ. ಈಗಾಗಲೇ ಟೆಕ್ನಿಕಲ್ ಬಿಡ್ ಹಾಗೂ ಫೈನಾನ್ಸಿಯಲ್ ಬಿಡ್ ಓಪನ್ ಆಗಿದ್ದು, ಅಂತಿಮ ಹಂತದಲ್ಲಿ ಇದೆ. ಈ ಯೋಜನೆಯಿಂದ ಪ್ರತೀ ವರ್ಷ ಹೊಸ ಬಲ್ಬ್ ಗಳ ಖರೀದಿಗಾಗಿ ಬಳಸುತ್ತಿದ್ದ ₹6 ಕೋಟಿ ಉಳಿತಾಯವಾಗಲಿದೆ.

ಬಲ್ಬ್‌ ಅಳವಡಿಕೆಗೆ ಎಂಟು ತಿಂಗಳ ಗಡುವು ನೀಡಿದ್ದು ಟೆಂಡರ್ ಪಡೆದವರೇ ನಿರ್ವಹಣೆ ಮಾಡಿ ಶೇ. 49ರಷ್ಟು ವಿದ್ಯುತ್ ಉಳಿತಾಯವನ್ನು ತೋರಿಸಬೇಕು. ಇದಕ್ಕೆ ಪಾಲಿಕೆ ಹೆಚ್ಚುವರಿ ಖರ್ಚು ಮಾಡುತ್ತಿಲ್ಲ. ಬದಲಾಗಿ ಅಂದಾಜು ₹93 ಕೋಟಿ ವೆಚ್ಚವನ್ನೆಲ್ಲ ಖಾಸಗಿ ಗುತ್ತಿಗೆದಾರ ಕಂಪನಿಯೇ ಭರಿಸಬೇಕಿದೆ.

ಮಹಾನಗರ ಪಾಲಿಕೆಯು ಪ್ರತಿ ತಿಂಗಳು ಈಗ ₹2 ಕೋಟಿ ವಿದ್ಯುತ್‌ ಶುಲ್ಕ ಭರಿಸುತ್ತಿರುವ ಮೊತ್ತದಲ್ಲೇ ಅರ್ಧದಷ್ಟು ಹೆಸ್ಕಾಂಗೆ ಬಿಲ್ ರೂಪದಲ್ಲಿ ಇನ್ನುಳಿದ ಅರ್ಧದಷ್ಟು ಖಾಸಗಿ ಕಂಪನಿಗೆ ಪ್ರತಿ ತಿಂಗಳು ಇಎಂಐ ರೂಪದಲ್ಲಿ ಪಾವತಿಸಬೇಕಿದೆ. ಇದರಿಂದ ಪಾಲಿಕೆ ಪ್ರತಿವರ್ಷ ದೀಪಗಳ ಅಳವಡಿಕೆಗೆ ಖರ್ಚು ಮಾಡುವ ₹5ರಿಂದ ₹6 ಕೋಟಿ ಉಳಿತಾಯವಾಲಿದೆ. ಪಾಲಿಕೆಗೆ ಬಿಲ್‌ ಹೊರೆ ಕಡಿಮೆ ಆಗುವ ಜತೆಗೆ ಖಾಸಗಿ ಕಂಪನಿಗೆ ಕ್ರಮೇಣ ಲಾಭವಾಗಿ ಪರಿವರ್ತನೆ ಆಗಲಿದೆ.

ಪಿಪಿಪಿ ಮಾದರಿಯಲ್ಲಿ ಅವಳಿ ನಗರದಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆದವರೇ 7 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು.ಪಾಲಿಕೆ ಅಂದಾಜು ₹2 ಕೋಟಿ ವಿದ್ಯುತ್ ಬಿಲ್‌ನಲ್ಲಿ ಹೆಸ್ಕಾಂಗೆ ಕೋಟಿಯಷ್ಟು ಮತ್ತು ಗುತ್ತಿಗೆದಾರರಿಗೆ ಇಎಂಐ ರೂಪದಲ್ಲಿ ಮಿಕ್ಕ ಹಣ ಪಾವತಿಸಲಾಗುತ್ತದೆ. ಇದರಿಂದ ಪಾಲಿಕೆಗೆ ಪ್ರತಿ ವರ್ಷ ₹5ರಿಂದ ₹6 ಕೋಟಿ ಉಳಿತಾಯವಾಗಲಿದೆ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್.ಎಂ. ಗಣಾಚಾರಿ ಹೇಳಿದರು.

ಸಮೀಕ್ಷೆ ನಡೆಸದೇ ವರದಿ?: ಎಲ್‌ಇಡಿ ಬಲ್ಬ್‌ ಅಳವಡಿಸಬೇಕೆಂದರೆ ಮೊದಲು ವಿದ್ಯುತ್‌ ಕಂಬಗಳ ಸಮೀಕ್ಷೆ ನಡೆಸಬೇಕು. ಇಲ್ಲೂ ನಡೆಸಲಾಗಿದೆ. ಆದರೆ, ಭೌತಿಕವಾಗಿ ಹೋಗಿ ನಡೆಸಿಲ್ಲ. ಬದಲಿಗೆ ಒಂದು ಕೊಠಡಿಯಲ್ಲಿ ಕುಳಿತು ಸಮೀಕ್ಷೆ ನಡೆಸಲಾಗಿದೆ ಎಂಬ ಆರೋಪವೂ ಇದೆ. ಆರೋಪಕ್ಕೆ ಪುಷ್ಟಿ ನೀಡುವಂತೆ ಸಮೀಕ್ಷೆ ನಡೆಸಿರುವುದಕ್ಕೆ ವಿದ್ಯುತ್‌ ಕಂಬಗಳ ಮೇಲೆ ಎಲ್ಲೂ ಸಂಖ್ಯೆ ಆಗಲಿ, ಇತರೆ ಕುರುಹುಗಳಾಗಲಿ ಇಲ್ಲವೇ ಇಲ್ಲ. ಇನ್ನಾದರೂ ಸಮೀಕ್ಷೆ ನಡೆಸಿಯೇ ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''