ಪರಿಹಾರ ಹಣ ಸಾಲಕ್ಕೆ ಹೊಂದಾಣಿಕೆ ಮಾಡಿದರೆ ಕಾನೂನು ಕ್ರಮ: ಡಿಸಿ ದಿವ್ಯಪ್ರಭು

KannadaprabhaNewsNetwork |  
Published : May 17, 2024, 12:33 AM IST
16ಡಿಡಬ್ಲೂಡಿ2 | Kannada Prabha

ಸಾರಾಂಶ

ರೈತರ ಒಪ್ಪಿಗೆ ಇಲ್ಲದೆ ಅವರ ಸಾಲದ ಖಾತೆಗೆ ಹಣ ಹೊಂದಾಣಿಕೆ ಮಾಡದಿರುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈಗಾಗಲೇ ಸಾಕಷ್ಟು ಬಾರಿ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ.

ಧಾರವಾಡ:

ರೈತರಿಗೆ ಬರುವ ಪರಿಹಾರ ಹಣವನ್ನು ಬ್ಯಾಂಕ್‌ಗಳು ಸಾಲಕ್ಕೆ ಹೊಂದಿಸುತ್ತಿರುವ ಕುರಿತು ದೂರು ಬರುತ್ತಿವೆ. ಈ ವಿಷಯದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ನೀಡಿರುವ ನಿರ್ದೇಶನ ಉಲ್ಲಂಘಿಸಿದರೆ ಅಂತಹ ಬ್ಯಾಂಕ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಬ್ಯಾಂಕರ್ಸ್‌ ಪ್ರಗತಿ ಪರಿಶೀಲನಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೆ ಅವರ ಸಾಲದ ಖಾತೆಗೆ ಹಣ ಹೊಂದಾಣಿಕೆ ಮಾಡದಿರುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈಗಾಗಲೇ ಸಾಕಷ್ಟು ಬಾರಿ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ. ಆದಾಗ್ಯೂ ಕುಂದಗೋಳ, ನವಲಗುಂದ ಸೇರಿ ಕೆಲವೆಡೆ ಈ ರೀತಿ ಘಟನೆಗಳಾಗಿವೆ. 2023ರ ಮುಂಗಾರು ವಿಫಲವಾಗಿದ್ದರಿಂದ ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪಡೀತ ತಾಲೂಕುಗಳೆಂದು ಘೋಷಣೆ ಮಾಡಿ, ಸರ್ಕಾರದ ನಿಯಮಾವಳಿಗಳ ಪರಿಹಾರ ಹಣ, ಇತರ ಸೌಲಭ್ಯ ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಈಗ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಆರಂಭ ಆಗುತ್ತಿರುವುದರಿಂದ ರೈತರು ಭೂಮಿ ಉಳುಮೆ ಮಾಡಿ ಬಿತ್ತನೆಗೆ ಸಿದ್ಧಗೊಳಿಸಬೇಕು, ಬೀಜ, ಗೊಬ್ಬರ ಖರೀದಿಸಬೇಕು. ಅವರ ನೆರವಿಗಾಗಿ ರಾಜ್ಯ ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ನೇರವಾಗಿ ಬರಪರಿಹಾರ ಜಮೆ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತವು ಕಳೆದ ವರ್ಷ ಮತ್ತು ಈ ವರ್ಷದಲ್ಲಿ ಎರಡ್ಮೂರು ಬಾರಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಜಿಲ್ಲೆಯ ಪ್ರತಿ ಬ್ಯಾಂಕ್ ಮುಖ್ಯಸ್ಥರಿಗೆ, ವ್ಯವಸ್ಥಾಪಕರಿಗೆ ಮಾಹಿತಿ ನೀಡಲಾಗಿದೆ. ರೈತರ ಸಹಮತ ಪಡೆಯದೇ ಅವರ ಬರ ಪರಿಹಾರದ ಹಣವನ್ನು ಅವರ ಸಾಲದ ಖಾತೆಗೆ ಜಮೆ ಮಾಡಿಕೊಂಡರೆ ಆಯಾ ಬ್ಯಾಂಕ್ ಮುಖ್ಯಸ್ಥರನ್ನು ಮತ್ತು ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಜವಾಬ್ದಾರರನ್ನಾಗಿಸಿ, ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ. ಬರಗಾಲದಿಂದ ನೊಂದಿರುವ ರೈತರಿಗೆ ಪ್ರಸಕ್ತ ಮುಂಗಾರು ಉತ್ತಮ ಫಸಲಿನ ಭರವಸೆ ಮೂಡಿಸಿದ್ದು, ರೈತ, ಕೃಷಿ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ