ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿದ ಚಿರತೆಗಳ ಹಾವಳಿ

KannadaprabhaNewsNetwork |  
Published : Sep 20, 2026, 02:45 AM IST
19ಕೆಎಂಎನ್ ಡಿ11,12,13 | Kannada Prabha

ಸಾರಾಂಶ

ಸಿ.ಎ.ಕೆರೆ ಹೋಬಳಿಯ ವಿವಿಧ ಗ್ರಾಮಗಳ ಸುತ್ತಮುತ್ತ ಹೆಚ್ಚುತ್ತಿರುವ ಚಿರತೆಗಳ ಹಾವಳಿಯಿಂದಾಗಿ ಗ್ರಾಮಸ್ಥರು, ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜಮೀನು, ತೋಟದ ಮನೆಗಳ ಬಳಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುಗಳು ಕೇಳಿಬಂದಿದೆ.

ಬಿ.ಎಸ್.ಸುನೀಲ್

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಿ.ಎ.ಕೆರೆ ಹೋಬಳಿಯ ವಿವಿಧ ಗ್ರಾಮಗಳ ಸುತ್ತಮುತ್ತ ಹೆಚ್ಚುತ್ತಿರುವ ಚಿರತೆಗಳ ಹಾವಳಿಯಿಂದಾಗಿ ಗ್ರಾಮಸ್ಥರು, ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜಮೀನು, ತೋಟದ ಮನೆಗಳ ಬಳಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರುಗಳು ಕೇಳಿಬಂದಿದೆ.

ಮದ್ದೂರು ತಾಲೂಕಿನ ಸಿ.ಎ.ಕೆರೆ ಹೋಬಳಿಯ ಕ್ಯಾತಘಟ್ಟ, ದೇವರಹಳ್ಳಿ, ಅರೇಚಾಕನಹಳ್ಳಿ, ಅಣ್ಣೂರು, ಕಾರ್ಕಹಳ್ಳಿ, ಹೊನ್ನಾಯಕನಹಳ್ಳಿ, ಕಾಡುಕೊತ್ತನಹಳ್ಳಿ, ಭುಜವಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿವೆ. ಕ್ಯಾತಘಟ್ಟ ಗ್ರಾಮದ ಹೊರವಲಯ ತೋಟದ ಮನೆಯಲ್ಲಿ ಕಳೆದ ಒಂದು ವಾರದ ಹಿಂದೆ ಚಿರತೆ ಕಾಣಿಸಿಕೊಂಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಸೆ.14ರ ರಾತ್ರಿ ಮೇಕೆಗಳನ್ನು ಎಳೆದೋಯ್ದು ತಿಂದಿದೆ. ಕೆಲ ದಿನಗಳಿಂದ ಪದೇ ಪದೇ ಗ್ರಾಮಗಳ ಸಮೀಪದ ಜಮೀನು, ತೋಟ ಹಾಗೂ ಜನವಸತಿ ಪ್ರದೇಶಗಳ ಬಳಿ ಚಿರತೆಗಳ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ರಾತ್ರಿ ವೇಳೆ ಚಿರತೆಗಳ ಸಂಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಲು ರಾತ್ರಿ ವೇಳೆ ಹೋಗಲು ಭಯ ಪಡುವಂತಾಗಿದೆ.

ಚಿರತೆ ಹಾವಳಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಚಿರತೆಗಳ ಚಲನವಲನ ಪತ್ತೆಹಚ್ಚಲು ಕ್ಯಾಮೆರಾ ಅಳವಡಿಸುವುದು, ಬೋನು ಇರಿಸುವುದು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಿರಂತರ ಗಸ್ತು ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿರತೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸುವ ಯಾವುದೇ ಕ್ರಮಗಳು ಕಂಡು ಬರುತ್ತಿಲ್ಲ. ಜೀವ ಹಾನಿಯಾದ ನಂತರ ಅಧಿಕಾರಿಗಳು ಎಚ್ಚೆತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ವಿಫಲರಾಗುತ್ತಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿ ವೇಳೆ ಗ್ರಾಮದಿಂದ ಶಾಲೆ, ಅಂಗಡಿ ಹಾಗೂ ಇತರ ಕೆಲಸಗಳಿಗೆ ತೆರಳಿ ಮರಳುವವರೂ ರಾತ್ರಿ ವೇಳೆ ಭಯದಿಂದ ಸಂಚರಿಸುವಂತಾಗಿದೆ.

ನಿರ್ಲಕ್ಷ್ಯ ಧೋರಣೆ ಬಿಟ್ಟು ಸುತ್ತಮುತ್ತಲ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಚಿರತೆಗಳನ್ನು ಪತ್ತೆಹಚ್ಚಿ ಸೆರೆಹಿಡಿಯಬೇಕು. ಗ್ರಾಮಸ್ಥರ ಭಯ ನಿವಾರಿಸಲು ತಕ್ಷಣವೇ ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು. ಚಿರತೆ ಹಾವಳಿ ಇರುವ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿ ಬೋನ್ ಗಳನ್ನು ಇರಿಸಿ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.ಒಂದು ವರ್ಷದಿಂದ ಕ್ಯಾತಘಟ್ಟ ವ್ಯಾಪ್ತಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ನೆಪ ಮಾತ್ರಕ್ಕೆ ಬೋನ್ ಇಟ್ಟು ಕೈ ತೊಳೆದುಕೊಳ್ಳುತ್ತಾರೆ. ಆದರೆ, ಚಿರತೆ ಸೆರೆ ಹಿಡಿಯುವ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಸೋಮವಾರ ಗ್ರಾಮದಲ್ಲಿ ಚಿರತೆ ಮೇಕೆಗಳನ್ನು ಹೊತ್ತೊಯ್ದು ತಿಂದು ಹಾಕಿದೆ. ಚಿರತೆ ಸೆರೆ ಕ್ರಮ ವಹಿಸದಿದ್ದರೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು.

- ಗಿರೀಶ್ ಕ್ಯಾತಘಟ್ಟ, ನಿರ್ದೇಶಕರು, ಜಿಲ್ಲಾ ಮುದ್ರಣಾಲಯ ಮಂಡ್ಯ

ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಚಿರತೆ ಹಾವಳಿ ಬಗ್ಗೆ ದೂರು ಬಂದಿದೆ. ಹೀಗಾಗಿ ಕ್ಯಾತಘಟ್ಟ ಗ್ರಾಮದಲ್ಲಿ ಬೋನ್ ಅಳವಡಿಸಿದ್ದು ಚಿರತೆಗಳ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

- ಗವಿಯಪ್ಪ, ವಲಯ ಅರಣ್ಯ ಅಧಿಕಾರಿ. ಮದ್ದೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಜಿ ರಾಮ್‌ ಜಿ’ ಅಡಿ ವಸತಿ ಯೋಜನೆಕೈಕೊಳ್ಳಲು ಕೇಂದ್ರ ಅವಕಾಶ: ಖಂಡ್ರೆ
ಭೂಗಳ್ಳನನ್ನು ಪಕ್ಕದಲ್ಲೇ ಕೂರಿಸಿಕೊಂಡು ಹಗರಣಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ: ಸಚಿವ