ದರೋಡೆಕೋರರಿಂದ ನೀತಿ ಪಾಠ: ಯಶವಂತರಾವ್ ಜಾಧವ್

KannadaprabhaNewsNetwork |  
Published : Oct 07, 2025, 01:02 AM IST
6ಕೆಡಿವಿಜಿ13-ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ವೋಟ್ ಚೋರಿ ಅಭಿಯಾನ ಕೈಗೊಂಡಿರುವ ಕಾಂಗ್ರೆಸ್ಸಿನ ನಾಯಕರನ್ನು ನೋಡಿದರೆ ದರೋಡೆಕೋರರೇ ನೀತಿ ಪಾಠ ಹೇಳಿದಂತಾಗಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವೋಟ್ ಚೋರಿ ಅಭಿಯಾನ ಕೈಗೊಂಡಿರುವ ಕಾಂಗ್ರೆಸ್ಸಿನ ನಾಯಕರನ್ನು ನೋಡಿದರೆ ದರೋಡೆಕೋರರೇ ನೀತಿ ಪಾಠ ಹೇಳಿದಂತಾಗಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಲೇವಡಿ ಮಾಡಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿನ ಇಲ್ಲಿನ ಮುಖಂಡರಿಂದ ದಿಲ್ಲಿಯ ನಾಯಕರೇ ಮಾಡಬಾರದ ಎಲ್ಲಾ ಅಕ್ರಮ ಕೃತ್ಯ ಎಸಗಿ, ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರ ಮಾಡುತ್ತ, ಟೀಕಿಸುವ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ ವಿರುದ್ಧ 1971ರ ಲೋಕಸಭೆ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜನಾರಾಯಣ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ರಾಜನಾರಾಯಣ ಭಾರೀ ಸೋಲನುಭವಿಸುತ್ತಾರೆ. ಫಲಿತಾಂಶ ಒಪ್ಪದ ರಾಜನಾರಾಯಣ 24.4.1970ರಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಭ್ರಷ್ಟಾಚಾರದ ಕೇಸ್ ದಾಖಲಿಸಿದ್ದರು. ಇಂದಿರಾ ಗಾಂಧಿ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳ ವಾಹನ ದುರ್ಬಳಕೆ, ಅಧಿಕಾರಿಗಳಿಂದ ಸಂಪನ್ಮೂಲ ಕ್ರೋಢೀಕರಣ ಮಾಡಿ, ಮತದಾರರಿಗೆ ಹಂಚಿ, ಮದ್ಯ, ಕಂಬಳಿ ಹಂಚಿಕೆ ಮಾಡಿ, ಚುನಾವಣಾ ವೆಚ್ಚ 35 ಸಾವಿರ ರು.ಗಿಂತ ಹೆಚ್ಚು ಖರ್ಚು ಮಾಡಿದ ಬಗ್ಗೆ ದಾಖಲೆ ಸಮೇತ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆಗ ಇಂದಿರಾ ತಪ್ಪಿತಸ್ಥೆಯೆಂದು ತೀರ್ಮಾನಿಸಿ, ಸಂಸತ್ ಸದಸ್ಯತ್ವದಿಂದಲೇ ವಜಾ ಮಾಡಿದ್ದು ಕಾಂಗ್ರೆಸ್ಸಿನ ಇತಿಹಾಸ ಎಂದು ಟೀಕಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲೂ 1998ರಲ್ಲಿ ನಗರಸಭೆ ಅಧ್ಯಕ್ಷರ ಚುನಾವಣೆ ವೇಳೆ ಗೆಲ್ಲಲೇಬೇಕೆಂದು ಕುತಂತ್ರದಿಂದ ಬಿಜೆಪಿ ಹಿರಿಯ ಸದಸ್ಯ ಎಲ್.ಬಸವರಾಜರನ್ನು ಅಪಹರಿಸಿ, ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿ ವೋಟ್ ಚೋರಿ ಅಭಿಯಾನದ ಬಗ್ಗೆ ಪತ್ರಿಕಾಗೋಷ್ಟಿ ಮಾಡಿದ್ದೇ ಹಾಸ್ಯಾಸ್ಪದ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ 1998ರ ಲೋಕಸಭೆ ಚುನಾವಣೆಯಲ್ಲಿ ಅಕ್ರಮಗಳ ಸರ ಮಾಡಿದ್ದಲ್ಲದೇ, ಬೆಂಗಳೂರಿನಿಂದ ಕಾಲಾ ಪತ್ತರ್‌ನ ರೌಡಿ ಗ್ಯಾಂಗನ್ನು ಚುನಾವಣೆ ದಿನ ಗಲಭೆ ಸೃಷ್ಟಿಸಲು ಕರೆಸಿದ್ದರು ಎಂದು ವ್ಯಂಗ್ಯವಾಡಿದರು.

ದೇಶದ ಸಂವಿಧಾನವನ್ನೇ ಗಾಳಿಗೆ ತೂರಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ, ಎಲ್ಲಾ ಮಹಾ ನಾಯಕರು ಅದರ ವಿರುದ್ಧ ಧ್ವನಿ ಎತ್ತಿದಾಗ ಆ ಎಲ್ಲರನ್ನೂ ಜೈಲಿಗೆ ಹಾಕಿ, ಅಧಿಕಾರ ನಡೆಸಿದ್ದ ಕಾಂಗ್ರೆಸ್ಸಿನ ಅಧಿನಾಯಕಿ ಇಂದಿರಾ ಗಾಂಧಿ ಮೊಮ್ಮಗ ರಾಹುಲ್‌ ಗಾಂಧಿ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಾನೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಇಂತಹ ಹಿನ್ನೆಲೆಯ ಕಾಂಗ್ರೆಸ್ ಪಕ್ಷದವರು ಕರಾಳ ಇತಿಹಾಸ ಹೊಂದಿದ್ದು, ಇಂತಹವರು ವೋಟ್ ಚೋರಿ ಅಭಿಯಾನ ನಡೆಸುತ್ತಿರುವುದು ದೇಶದ ದುರಂತವಾಗಿದೆ ಎಂದು ದೂರಿದರು.

ಪಕ್ಷದ ಮುಖಂಡರಾದ ಅಣಬೇರು ಜೀವನಮೂರ್ತಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಬಿ.ರಮೇಶ ನಾಯ್ಕ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ರಾಜು ನೀಲಗುಂದ, ಜಿ.ಕಿಶೋರಕುಮಾರ, ತಿಪ್ಪೇಶ, ರಾಜು ಇತರರು ಇದ್ದರು.

------

ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಶಾಮನೂರು ಕುಟುಂಬದ ಒಂದೇ ಮನೆಯ ಮೂವರು ಗೆದ್ದು, ಶಾಸಕ, ಸಚಿವ, ಸಂಸದರಾಗಿದ್ದಾರೆ. ಹೀಗಿರುವಾಗ ಬಿಜೆಪಿ ಮೇಲೆ ಮತಗಳ್ಳತನದ ಸುಳ್ಳು ಆರೋಪ ಹೊರಿಸಿ ಸಹಿ ಸಂಗ್ರಹಕ್ಕೆ ಮುಂದಾಗಿದ್ದು ನಾಚಿಕೆಗೇಡು. ಕಳೆದ ಚುನಾವಣೆಗಳಲ್ಲಿ ಶಾಮನೂರು ಕುಟುಂಬ ಎಷ್ಟು ಹಣ ಖರ್ಚು ಮಾಡಿದೆ?, ಏನೆಲ್ಲಾ ಹಂಚಿದೆ, ಯಾರ್‍ಯಾರ ಕೈ-ಕಾಲು ಹಿಡಿದರೆಂಬುದು ಎಲ್ಲರಿಗೂ ಗೊತ್ತು. ಇದೀಗ ಮತಗಳ್ಳತನದ ಆರೋಪ ಮಾಡುತ್ತಿರುವುದು ಮತ ಹಾಕಿದ ಜನರಿಗೆ ಮಾಡುವ ಅವಮಾನವಾಗಿದೆ.

ಯಶವಂತರಾವ್ ಜಾಧವ್ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌