ಅಂಬೇಡ್ಕರ್ ವಿಚಾರಧಾರೆಗಳು ಕೇವಲ ಭಾಷಣಗಳಿಗೆ ಸೀಮಿತವಾಗದಿರಲಿ

KannadaprabhaNewsNetwork |  
Published : Oct 10, 2026, 01:45 AM IST
9ಎಚ್ಎಸ್ಎನ್11ಎ : ನಗರಕ್ಕೆ ಆಗಮಿಸಿದ ಅಂಬೇಡ್ಕರ್‌ ನಾಲ್ಕನೇ ತಲೆಮಾರಿನ ಅಮನ್ ಆನಂದರಾಜ್ ಅವರಿಗೆ ಎನ್‌ಆರ್‌ ವೃತ್ತದಲ್ಲಿ ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. | Kannada Prabha

ಸಾರಾಂಶ

ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಆಶಯದಂತೆ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಹೋದರತ್ವದ ಆಧಾರದ ಮೇಲೆ ಉತ್ತಮ ಭಾರತ ನಿರ್ಮಿಸಲು ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಸಮುದಾಯದ ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಅಹಂ ಬದಿಗಿಟ್ಟು ಒಂದಾಗಬೇಕು ಎಂದು ಮಹಾರಾಷ್ಟ್ರದ ಅಂಬೇಡ್ಕರ್‌ ಕುಟುಂಬದ ನಾಲ್ಕನೇ ತಲೆಮಾರಿನ ಸದಸ್ಯ ಅಮನ್ ಆನಂದರಾಜ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಆಶಯದಂತೆ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಹೋದರತ್ವದ ಆಧಾರದ ಮೇಲೆ ಉತ್ತಮ ಭಾರತ ನಿರ್ಮಿಸಲು ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಸಮುದಾಯದ ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯ ಮತ್ತು ಅಹಂ ಬದಿಗಿಟ್ಟು ಒಂದಾಗಬೇಕು ಎಂದು ಮಹಾರಾಷ್ಟ್ರದ ಅಂಬೇಡ್ಕರ್‌ ಕುಟುಂಬದ ನಾಲ್ಕನೇ ತಲೆಮಾರಿನ ಸದಸ್ಯ ಅಮನ್ ಆನಂದರಾಜ್ ಕರೆ ನೀಡಿದರು.

ನಗರದ ಕಲಾಭವನದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್‌ನ ಮೂರನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ, ಸಂಘಟನೆ ಮತ್ತು ಹಕ್ಕುಗಳಿಗಾಗಿ ಹೋರಾಟದ ಮೂಲಕವೇ ಸಮಾಜದ ಪ್ರಗತಿ ಸಾಧ್ಯ. ಅಂಬೇಡ್ಕರ್‌ ಅವರ ವಿಚಾರಧಾರೆಯನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಅವರ ಚಿಂತನೆಗಳನ್ನು ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪ್ರತಿಪಾದಿಸಿದರು.

ಹಾಸನಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವುದು ಹೆಮ್ಮೆಯ ಸಂಗತಿ. ೧೯೫೨ರಲ್ಲಿ ಡಾ. ಅಂಬೇಡ್ಕರ್ ಅವರು ಹಾಸನಕ್ಕೆ ಭೇಟಿ ನೀಡಿದ್ದರು ಹಾಗೂ ಎ.ಕೆ. ಬೋರ್ಡಿಂಗ್ ಶಾಲೆಗೆ ತೆರಳಿದ್ದರು ಎಂಬ ವಿಚಾರ ತಿಳಿದು ಸಂತೋಷವಾಗಿದೆ. ಶಿಕ್ಷಣದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಅಂಬೇಡ್ಕರ್‌ ಅವರು ನಡೆಸಿದ ಪ್ರಯತ್ನಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಬೇಕು ಎಂದರು. ಯಾವುದೇ ಕೆಲಸ ಚಿಕ್ಕದು ಅಥವಾ ದೊಡ್ಡದು ಎಂಬ ಭೇದವಿಲ್ಲ. ಪ್ರತಿಯೊಬ್ಬರೂ ತಾವು ನಿರ್ವಹಿಸುವ ಕೆಲಸದ ಬಗ್ಗೆ ಹೆಮ್ಮೆ ಹೊಂದಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಇಂದಿನ ಕಾರ್ಯಕ್ರಮದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಜನರು ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸದ ಸಂಗತಿ. ಆದರೆ, ಸಮುದಾಯದ ಜನರು ಶಿಕ್ಷಣದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ಪರಸ್ಪರ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಹೀಗಾಗಿ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ಕೈಜೋಡಿಸಬೇಕು ಎಂದು ಹೇಳಿದರು.

ಅಮನ್ ಆನಂದರಾಜ್ ಅವರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಯುವಜನರಿಗೆ ಸ್ಫೂರ್ತಿಯಾಗಿರುವ ನಿಮ್ಮ ಆಗಮನದಿಂದ ಹೊಸ ಉತ್ಸಾಹ ಮೂಡಿದೆ. ಹಾಸನಕ್ಕೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಸಮಾಜದ ಅಭಿವೃದ್ಧಿ ಮತ್ತು ಯುವಜನರ ಪ್ರಗತಿಗೆ ಕೈಗೊಳ್ಳುವ ಕಾರ್ಯಗಳಲ್ಲಿ ನಮ್ಮ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಮಾಜದ ಉನ್ನತಿಗಾಗಿ ಅವರು ನಡೆಸಿದ ಹೋರಾಟ ಸದಾ ಸ್ಮರಣೀಯ. ದಲಿತ ಸಮುದಾಯದ ಜನರು ರಾಜಕೀಯವಾಗಿ ಸಬಲರಾಗಬೇಕು. ರಾಜಕೀಯ ಹುದ್ದೆಗಳನ್ನು ಹೊಂದುವುದಷ್ಟೇ ಅಲ್ಲದೆ, ನಿರ್ಧಾರ ಕೈಗೊಳ್ಳುವ ಅಧಿಕಾರವೂ ಸಮುದಾಯಕ್ಕೆ ದೊರೆಯಬೇಕು. ಮಹಾರಾಷ್ಟ್ರದಿಂದ ಅಮನ್ ಆನಂದರಾಜ್ ಅವರು ಹಾಸನಕ್ಕೆ ಆಗಮಿಸಿರುವುದು ಸಂತಸದ ಸಂಗತಿ. ಅವರನ್ನು ಸ್ವಾಗತಿಸಲು ಮತ್ತು ಅವರ ಮಾತುಗಳನ್ನು ಆಲಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿರುವುದು ಅಂಬೇಡ್ಕರ್ ಅವರ ವಿಚಾರಧಾರೆಗೆ ಇರುವ ಗೌರವವನ್ನು ತೋರಿಸುತ್ತದೆ ಎಂದರು.

ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರ ಪತ್ನಿ ಪ್ರತಿಭಾ ಮಂಜುನಾಥ್ ಮಾತನಾಡಿ, ಸಂಘಟನೆಯ ಬೆಳವಣಿಗೆಯ ಜತೆಗೆ ಸಮುದಾಯದ ಮಕ್ಕಳ ಭವಿಷ್ಯಕ್ಕೂ ಆದ್ಯತೆ ನೀಡಬೇಕು. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. ಸಂಘಟನೆಯ ಮೂರನೇ ವರ್ಷದ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಭಾಗವಹಿಸಿರುವುದು ಸಂತಸದ ಸಂಗತಿ. ಮುಂದಿನ ಹತ್ತು ವರ್ಷಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಆಶಿಸಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ವಿವಿಧ ಸಮುದಾಯಗಳ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಒಗ್ಗಟ್ಟು ಮೂಡಿಸುವುದು ಸುಲಭದ ಕೆಲಸವಲ್ಲ. ಯುವಜನರನ್ನು ಸಂಘಟಿಸಿ ಸಾಮಾಜಿಕ ಜಾಗೃತಿ ಮೂಡಿಸುವ ಭೀಮ್‌ ಆರ್ಮಿ ಸಂಘಟನೆಯ ಪ್ರಯತ್ನ ಶ್ಲಾಘನೀಯ. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಸಂತಸ ತಂದಿದೆ. ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶವನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆ ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ಉದ್ಯೋಗ, ಉದ್ಯಮಶೀಲತೆ ಮತ್ತು ಸಾಮಾಜಿಕ ಅಭಿವೃದ್ಧಿಯತ್ತ ಗಮನಹರಿಸಬೇಕು. ಯುವಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರ ಚೈತನ್ಯ ಮಹಾಸ್ವಾಮೀಜಿ, ಭೀಮ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ಮತೀನ್ ಕುಮಾರ್, ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಅವರ ಪತ್ನಿ ಚಂಚಲ ಕುಮಾರಸ್ವಾಮಿ, ಹಿರಿಯ ಮುಖಂಡ ನಾರಾಯಣದಾಸ್, ಎನ್.ಆರ್. ಸಂತೋಷ್, ರಾಜೇಂದ್ರ ದೊಡ್ಡಮಗ್ಗೆ, ನಾಗರಾಜು ಹೆತ್ತೂರು, ದೂದ್ ಪೀರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ಜಿಲ್ಲಾ ಸಂಚಾಲಕ ಮಂಜುನಾಥ ಎಂ.ಸಿ., ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ್ ನಿಡನೂರು, ಹಾಸನ ತಾಲೂಕು ಅಧ್ಯಕ್ಷ ಹೇಮಂತ್ ಡಿ.ಕೆ., ಆಲೂರು ತಾಲೂಕು ಅಧ್ಯಕ್ಷ ನವೀನ್ ಕಾರ್ಜುವಳ್ಳಿ, ಪ್ರತಾಪ್, ಉಪಾಧ್ಯಕ್ಷ ಧರ್ಮೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆಗೆ ಮುನ್ನವೇ ಕಟ್ಟಡ ಬಿರುಕು
ಬಸರವಳ್ಳಿ ಪಂಚಾಯಿತಿ ಹಸಲರ ವಾರ್ಡಿಗೆ ಬೇಕಿದೆ ಸಂಪರ್ಕ ಸೇತುವೆ