ಕನ್ನಡಪ್ರಭ ವಾರ್ತೆ ಹಾವೇರಿ (ಶಿಗ್ಗಾಂವಿ)
ಶಿಗ್ಗಾಂವಿಯ ಹೋತನಹಳ್ಳಿಯಲ್ಲಿ ಬುಧವಾರ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಸರಣಿ ವಾಗ್ದಾಳಿ ನಡೆಸಿದರು. ಯಾರಿಗೂ ಹೆಣ್ಣು ನೋಡಲು ಹೋಗಿ ತಾನೇ ಮದುವೆ ಆದನಂತೆ. ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಇದೇ ರೀತಿಯಾಗಿದೆ. ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೆ. ಟಿಕೆಟ್ ನನಗೆ ಬೇಡ ಕಾರ್ಯಕರ್ತರಿಗೆ ನೀಡಿ ಎಂದು ಬೊಮ್ಮಾಯಿ ಹೇಳುತ್ತಿದ್ದರು. ಕೊನೆಗೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. 17 ವರ್ಷಗಳಿಂದ ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಕಾಂಗ್ರೆಸ್ ನೀಡಿರುವ ಒಂದೇ ಒಂದು ಯೋಜನೆ ನಿಮ್ಮ ಅವಧಿಯಲ್ಲಿ ನೀಡಿದ್ದರೆ, ನಾವು ಈ ಕ್ಷೇತ್ರ ಬಿಟ್ಟು ಹೋಗುತ್ತೇವೆ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಈ ವೇಳೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಬೊಮ್ಮಾಯಿ ಅವರಿಗೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಸದಾವಕಾಶ ಸಿಕ್ಕಿತ್ತು. ಆದರೂ ಅವರು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿಲ್ಲ ಎಂದು ಕಿಡಿಕಾರಿದರು.ಚನ್ನಪಟ್ಟಣದ ಟಿಕೆಟ್ ಅನ್ನು ನನ್ನ ತಮ್ಮ ಸುರೇಶ್ ಅವರಿಗೆ ನೀಡಬಹುದಿತ್ತು. ಆದರೆ, ಕಾಂಗ್ರೆಸ್ ಹಾಗೂ ನಾನು ಆ ಕೆಲಸ ಮಾಡದೆ, ಬಿಜೆಪಿ ಸಹವಾಸ ಸಾಕು ಎಂದು ಕಾಂಗ್ರೆಸ್ ಸೇರಿದ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಸೇರಿದ ಅವರು ದಡ್ಡರೇ? ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಅವರಿಗೆ ಅರಿವಾಗಿದೆ. ಶಿಗ್ಗಾಂವಿ ಕ್ಷೇತ್ರದ ಜನರೇ ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬಂದಿದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತು, ಏಕೆ ಅಧಿಕಾರಕ್ಕೆ ಬರಲಿಲ್ಲ? ಯಡಿಯೂರಪ್ಪ ಅವರು ಆಪರೇಷನ್ ಕಮಲ ನಡೆಸಿ ಸರ್ಕಾರ ಮಾಡಿದರು. ಆದರೆ ಈ ಬಾರಿ ಅವರ ನಾಣ್ಯ ಚಲಾಚಣೆಯಾಗಲಿಲ್ಲ ಎಂದರು.
ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾಗಿದ್ದಾಗ, ಬಗರ್‌ಹುಕುಂ ಅರ್ಜಿ ಹಾಕಿಸಿ ರೈತರಿಗೆ ಜಮೀನು ನೀಡುವ ಮಹತ್ತರವಾದ ಕೆಲಸ ಆರಂಭವಾಯಿತು. ಇಂದಿರಾ ಗಾಂಧಿ, ದೇವರಾಜ ಅರಸು ಕಾಲದಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದು, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಜಾರಿಗೆ ತರಲಾಯಿತು. ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಅಶಕ್ತರಿಗೆ ನೀಡಲಾಯಿತು. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಯೋಜನೆಗಳು ಜಾರಿಗೆ ಬಂದವು. 2023ರಲ್ಲಿ ಅಧಿಕಾರಕ್ಕೆ ಬರುವ ಮುಂಚಿತವಾಗಿ ಕರ್ನಾಟಕದ ಜನರ ಬಳಿ ಮನವಿ ಮಾಡಿ ''''''''ಕಾಂಗ್ರೆಸ್ ಮೇಲೆ ವಿಶ್ವಾಸವಿಡಿ'''''''' ಎಂದೆವು. ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಕಾಂಗ್ರೆಸ್ ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ ಎಂದು ಹಳ್ಳಿ, ಹಳ್ಳಿಯನ್ನು ಸುತ್ತಿ ಜನ ಜಾಗೃತಿ ಮಾಡಿದೆವು ಎಂದರು.
ಬಿಜೆಪಿ ಬಡವರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ. ಬಿಜೆಪಿಯಿಂದ ಒಂದೇ ಒಂದು ಕುಟುಂಬಕ್ಕೆ ಅನುಕೂಲವಾಗಿಲ್ಲ. ಉದ್ಯೋಗ ಖಾತ್ರಿ, ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗೆ ಪ್ರತ್ಯೇಕ ಹಣವನ್ನು ಮೀಸಲಿಟ್ಟಿದ್ದೇವೆ. ಹಿಂದೂ, ಮುಸಲ್ಮಾನ್ ಎಂದು ಧರ್ಮಗಳಿವೆ, ವಿಷಬೀಜ ಬಿತ್ತುವುದೇ ಬಿಜೆಪಿ ಕೆಲಸ. ಹಿಂದು ಮುಂದು ಎಂದು ಬಿಜೆಪಿಯವರು ಹೇಳುತ್ತಾರೆ. ಕಾಂಗ್ರೆಸ್ ಅವರು ನಾವೆಲ್ಲ ಒಂದು ಎಂದು ಹೇಳುತ್ತೇವೆ. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉತ್ತಮ ಮತವನ್ನು ಪಡೆದಿದ್ದರು. ಕೇವಲ 8000 ಮತಗಳ ಅಂತರದಿಂದ ಸೋತರು. ಈ ಉಪಚುನಾವಣೆಯಲ್ಲಿ ಲೋಕಸಭೆಗಿಂತ ಹೆಚ್ಚಿನ ಮತಗಳನ್ನು ಪೈಲ್ವಾನ್ ಪಠಾಣ್ ಅವರು ಪಡೆಯುತ್ತಾರೆ. ಕನಿಷ್ಠ 25,000 ಮತಗಳ ಅಂತರದಿಂದ ಗೆದ್ದು, ವಿಧಾನಸೌಧ ಪ್ರವೇಶಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.