ಸಂಸ್ಥೆಯ ಏಳ್ಗೆಗೆ ಉದ್ಯೋಗಿಗಳು ಪ್ರಾಮಾಣಿಕತೆಯಿಂದ ಶ್ರಮಿಸಲಿ: ಶಿವರಾಮ ಹೆಬ್ಬಾರ

KannadaprabhaNewsNetwork |  
Published : May 03, 2026, 02:30 AM IST
ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಆವಾರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಆವಾರದಲ್ಲಿ ಶನಿವಾರ ಶಾಸಕ ಶಿವರಾಮ ಹೆಬ್ಬಾರ ಎಂಸಿಎ ಕಾಲೇಜಿಗೆ ಚಾಲನೆ ನೀಡಿ, ಬೃಹತ್‌ ಉದ್ಯೋಗ ಮೇಳ ಉದ್ಘಾಟಿಸಿದರು.

ಯಲ್ಲಾಪುರ: ಉದ್ಯೋಗಿಗಳು ಸಂಸ್ಥೆಯ ಏಳಿಗೆಗಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಆವಾರದಲ್ಲಿ ಶನಿವಾರ ಎಂಸಿಎ ಕಾಲೇಜಿಗೆ ಚಾಲನೆ ನೀಡಿ, ಬೃಹತ್‌ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗಿಗಳಾದವರು ತಮಗೆ ಉದ್ಯೋಗ ನೀಡಿದ ಸಂಸ್ಥೆಯ ಬಗ್ಗೆ ಕೃತಜ್ಞರಾಗಿರಬೇಕು. ಉದ್ಯೋಗಿಗಳು ಏಳೆಂಟು ಗಂಟೆ ಕೆಲಸ ಮಾಡಿದರೆ ಉದ್ಯೋಗದಾತರು ೨೦ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಅಷ್ಟು ಕಠಿಣ ಶ್ರಮವಿದೆ ಎಂದು ಹೇಳಿದರು.

ರಾಜ್ಯದ ಹಲವೆಡೆಯ ಉದ್ಯೋಗದಾತರು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಭಾಗದ ಬುದ್ಧಿವಂತರನ್ನು ಉದ್ಯೋಗಕ್ಕಾಗಿ ಬಯಸುತ್ತಾರೆ. ಇಂತಹ ಪ್ರತಿಭಾವಂತರು ಪಡೆಯುವ ಉದ್ಯೋಗ ಕೇವಲ ಅವರ ಬದುಕಿಗೆ ಮಾತ್ರ ಸೀಮಿತಗೊಳ್ಳದೇ, ಉದ್ಯೋಗದಾತರ ಉನ್ನತಿಗೂ ಶ್ರಮಿಸಬೇಕು ಎಂದರು.

ಕೇವಲ ಅಂಕಗಳಿಂದಲೇ ಉತ್ತಮ ಬದುಕು ಅಸಾಧ್ಯ. ಬದುಕುವ ಜ್ಞಾನ, ಸಾಮಾನ್ಯ ಜ್ಞಾನ, ತಾಂತ್ರಿಕ ಜ್ಞಾನ ಅಲ್ಲದೇ ಆಂಗ್ಲ ಭಾಷೆಯಲ್ಲಿ ಪ್ರೌಢಿಮೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯವಾಗಿದೆ. ನಾವಿಂದು ಈ ಜ್ಞಾನವನ್ನು ಪಡೆದುಕೊಳ್ಳದಿದ್ದರೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದರು.

ಹುಬ್ಬಳ್ಳಿಯ ಇಮ್ಯಾಕ್ಯುಲೇಟ್ ಓರಾಕಲ್ ಸಂಸ್ಥಾಪಕ ಮತ್ತು ಪ್ರಾಧ್ಯಾಪಕ ಡಾ. ಆರೋಗ್ಯಸ್ವಾಮಿ ಮಾತನಾಡಿ, ವಿಶ್ವದರ್ಶನ ಸಂಸ್ಥೆ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುತ್ತಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜನಾರ್ದನ ಆರ್.ಡಿ. ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ವಿವಿಧ ಕೌಶಲ್ಯಗಳನ್ನೂ ಹೊಂದಿರಬೇಕು. ಉದ್ಯೋಗಾವಕಾಶಗಳಲ್ಲಿ ಅಂಕಗಳ ಜತೆಗೆ ಕೌಶಲ್ಯಗಳಿಗೂ ಅಷ್ಟೇ ಮಹತ್ವವಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಜೂನ್ ತಿಂಗಳಿನಿಂದ ಎಂಸಿಎ ತರಗತಿಗಳು ಆರಂಭವಾಗುತ್ತಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಿದ್ದೇವೆ. ಇಂದಿನ ಈ ಮೇಳದಲ್ಲಿ ೨೦೦೦ ವಿದ್ಯಾರ್ಥಿಗಳು ನೋಂದಾವಣಿ ಮಾಡಿಕೊಂಡಿದ್ದಾರೆ. ರಾಜ್ಯದ ೪೦ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಮತ್ತು ಕಂಪನಿಗಳು ಉದ್ಯೋಗಿಗಳು, ಶಿಕ್ಷಕರನ್ನು ಅರಸಿ ಬಂದಿವೆ ಎಂದರು.

ಉದ್ಯೋಗ ಮೇಳ ನಡೆಸುವಲ್ಲಿ ನೇತೃತ್ವ ವಹಿಸಿದ ಜೀವನಕುಮಾರ, ಮೇಳದ ಅಗತ್ಯತೆ ಮತ್ತು ಉದ್ಯೋಗದ ಕುರಿತು ಮಾಹಿತಿ ನೀಡಿದರು. ಆಡಳಿತ ಮಂಡಳಿಯ ನಿರ್ದೇಶಕರಾದ ಗಣಪತಿ ಮಾನಿಗದ್ದೆ, ವಿಘ್ನೇಶ್ವರ ಗಾಂವ್ಕರ, ಗುತ್ತಿಗೆದಾರ ಅಶೋಕ ನಾಯ್ಕ, ಬಿಸಿಎ ಕಾಲೇಜು ಮುಖ್ಯಸ್ಥ ಪ್ರಸನ್ನ ಭಟ್ಟ ಉಪಸ್ಥಿತರಿದ್ದರು.

ಬಿಸಿಎ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶೈಕ್ಷಣಿಕ ಸಲಹೆಗಾರ ಡಾ. ಡಿ.ಕೆ. ಗಾಂವ್ಕರ ಸ್ವಾಗತಿಸಿ, ವಂದಿಸಿದರು. ಬಿಇಡಿ ಉಪನ್ಯಾಸಕಿ ವೀಣಾ ಭಾಗ್ವತ ನಿರ್ವಹಿಸಿದರು.

ಕಾಲೇಜು ಕಟ್ಟಡ ಉದ್ಘಾಟನೆ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಮೂಹದ ಆವಾರದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಿಸಿಎ, ಎಂಸಿಎ ಕಾಲೇಜು ಕಟ್ಟಡವನ್ನು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶನಿವಾರ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಯಣದ ಭಕ್ತಿರಸದಲ್ಲಿ ಮಿಂದೆದ್ದ ಗೋಕುಲಂ ಗೋಶಾಲೆ
ದುಬೈನಿಂದ ಪತಿ ಪಾರ್ಸೆಲ್‌ ಕಳುಹಿಸಿದ್ದಾರೆ ಎಂದು ನಂಬಿಸಿ ಮಹಿಳೆಗೆ ವಂಚನೆ