ರಾಣಿಬೆನ್ನೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳ ಜತೆಯಲ್ಲಿ ಕೌಶಲ್ಯಜ್ಞಾನ ಹೊಂದಿದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ನಗರದಲ್ಲಿ ಶನಿವಾರ ಕೆ.ಬಿ. ಕೋಳಿವಾಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸಿದರೆ ಮಾತ್ರ ಯಶಸ್ಸು ಸಿಗುವುದಿಲ್ಲ. ಅದರೊಂದಿಗೆ ಕೌಶಲ್ಯಗಳ ತರಬೇತಿ ಮುಖ್ಯವಾಗಿದೆ. ಕಲಿತ ವಿದ್ಯೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು. ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಮಾತೃ ಭಾಷೆಯ ಜೊತೆಗೆ ಔದ್ಯೋಗಿಕ ಭಾಷೆಯಾಗಿರುವ ಇಂಗ್ಲಿಷ್ ಭಾಷೆಯನ್ನು ಮಾತನಾಡುವ ಕೌಶಲ್ಯವಿರಬೇಕು. ಇದರಿಂದ ಎಲ್ಲಿಯಾದರೂ ಕೆಲಸ ಸಿಗಲಿದೆ. ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಇಲ್ಲದೆ ಹೋದರೆ ವಿದ್ಯಾವಂತರಾದರೂ ಅನಕ್ಷರಸ್ಥರಿದ್ದ ಹಾಗೆ ಭಾವಿಸಲಾಗುತ್ತದೆ. ನಮ್ಮ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದರು.ವಿಧಾನಸಭಾ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ರಾಣಿಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಕೃಷ್ಣಪ್ಪ ಕಂಬಳಿ, ಸಣ್ಣತಮ್ಮಪ್ಪ ಬಾರ್ಕಿ, ನೀಲಕಂಠಪ್ಪ ಕುಸಗೂರ, ಬಿ.ಬಿ. ನಂದ್ಯಾಲ, ಪುಟ್ಟಪ್ಪ ಮರಿಯಮ್ಮನವರ, ಚಂದ್ರಣ್ಣ ಬೇಡರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ, ಮಂಜಾ ನಾಯ್ಕ, ಗಂಗಪ್ಪ ನಾಯಕ ಮತ್ತಿತರರಿದ್ದರು.