ಸೋಲು ನಿಮ್ಮ ಗೆಲುವಿನ ಮೆಟ್ಟಿಲಾಗಲಿ: ಪೂನಂ ಬೆಳ್ಳಿಯಪ್ಪ

KannadaprabhaNewsNetwork |  
Published : Nov 09, 2024, 01:00 AM ISTUpdated : Nov 09, 2024, 01:01 AM IST
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಅಥ್ಲೇಟ್‌ ಪೂನಂ ಬೆಳ್ಳೆಯಪ್ಪ ಮಾತನಾಡಿದರು. | Kannada Prabha

ಸಾರಾಂಶ

ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾದರೂ ಅದರಿಂದ ಸಿಗುವ ಅನುಭವ ನಮ್ಮನ್ನು ಮುಂದಿನ ಹಂತಕ್ಕೆ ಕೊಂಡ್ಯೊಯ್ಯುತ್ತದೆ. ನಿರಂತರ ಪ್ರಯತ್ನಗಳು ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಸುತ್ತದೆ.

ಹುಬ್ಬಳ್ಳಿ:

ಕ್ರೀಡಾಪಟುಗಳಿಗೆ ಸೋಲೇ ಗೆಲುವಿನ ಮೆಟ್ಟಿಲಾಗಬೇಕು. ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಕ್ರೀಡಾಸ್ಫೂರ್ತಿಯನ್ನು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಯಶಸ್ಸಿನ ಮೆಟ್ಟಿಲು ಹತ್ತಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಪೂನಂ ಬೆಳ್ಳಿಯಪ್ಪ ಹೇಳಿದರು.

ಅವರು ಇಲ್ಲಿನ ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ಶುಕ್ರವಾರ ರಾಜೀವಗಾಂಧಿ ಆರೋಗ್ಯ ವಿವಿ ವ್ಯಾಪ್ತಿಯ ಅಂತರ್‌ ಕಾಲೇಜು ಅಥ್ಲೆಟಿಕ್‌ನ ಸಮಾರೋಪದಲ್ಲಿ ಪಾಲ್ಗೊಂಡು ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.

ಕ್ರೀಡೆಯಲ್ಲಿ ಯಶಸ್ಸು ಕೆಲವರಿಗೆ ಬೇಗ ಲಭಿಸುತ್ತದೆ, ಇನ್ನೂ ಕೆಲವರಿಗೆ ವಿಳಂಬವಾಗುತ್ತದೆ. ವಿಳಂಬದಿಂದ ನಿರಾಶೆ ಅನುಭವಿಸಬೇಕಿಲ್ಲ. ನಿರಂತರ ಪ್ರಯತ್ನಗಳ ಮೂಲಕ ಯಶಸ್ಸನ್ನು ಸಾಧಿಸಬಹುದಾಗಿದೆ ಎಂಬುದನ್ನು ಪ್ರತಿಯೊಬ್ಬ ಕ್ರೀಡಾಪಟುಗಳು ಅರಿತುಕೊಳ್ಳಬೇಕು. ಕ್ರೀಡೆ ದೈಹಿಕ, ಮಾನಸಿಕ, ಶಿಸ್ತು ಬೆಳೆಸುವ ಜತೆಗೆ ಭಾವನಾತ್ಮಕ ಅನುಭವಗಳನ್ನು ನೀಡುತ್ತದೆ. ಪ್ರತಿ ಹಂತದಲ್ಲಿ ಪ್ರೇರಣೆ ಪಡೆದುಕೊಂಡು ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕು ಎಂದರು.

ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾದರೂ ಅದರಿಂದ ಸಿಗುವ ಅನುಭವ ನಮ್ಮನ್ನು ಮುಂದಿನ ಹಂತಕ್ಕೆ ಕೊಂಡ್ಯೊಯ್ಯುತ್ತದೆ. ನಿರಂತರ ಪ್ರಯತ್ನಗಳು ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಸುತ್ತದೆ. ಕ್ರೀಡೆಯನ್ನು ಪ್ರೀತಿಸಿ ಅದರಲ್ಲಿ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿಕೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು.ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್ ಎಫ್. ಕಮ್ಮಾರ ಮಾತನಾಡಿ, ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳ ಕಾಲ ಯಶಸ್ವಿಯಾಗಿ ಕ್ರೀಡಾಕೂಟ ನಡೆದಿರುವುದು ಸಂತಸ ತಂದಿದೆ. ಇದಕ್ಕೆಲ್ಲ ಸಹಕರಿಸಿದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಇಂತಹ ಕ್ರೀಡೆಗಳ ಸದುಪಯೋಗ ಪಡೆದುಕೊಳ್ಳುವುದರೊಂದಿಗೆ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆ ತೋರ್ಪಡಿಸುವ ಮೂಲಕ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಅಥ್ಲೇಟ್‌ ಪೂನಂ ಬೆಳ್ಳೆಯಪ್ಪ ಅ‍ವರನ್ನು ಸನ್ಮಾನಿಸಲಾಯಿತು. ಸಿಂಡಿಕೇಟ್ ಸದಸ್ಯ ಡಾ. ಎಂ.ಜಿ. ಜೀವಣ್ಣವರ, ಸೆನೆಟ್ ಸದಸ್ಯ ಸೋಮಶೇಖರ ಕಲ್ಮಠ, ಕೂಟದ ಸಂಘಟನಾ ಚೇರಮನ್ ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಕೆ.ಎಫ್. ಕಮ್ಮಾರ, ಕಾರ್ಯದರ್ಶಿ ಡಾ. ರಾಜಶೇಖರ ದುಂಡರಡ್ಡಿ, ಡಾ. ದ್ಯಾಬೇರಿ ಸೇರಿದಂತೆ ಹಲವರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ