ಸಜ್ಜನರು ಸಂಘಟಿತರಾಗಿ ದುರ್ಜನರ ಮಟ್ಟ ಹಾಕಲಿ: ವಿ. ಶ್ರೀಶಾನಂದ

KannadaprabhaNewsNetwork |  
Published : Sep 21, 2026, 02:15 AM IST
ಫೋಟೋ: ಕೊಪ್ಪಳದ ಮಧುಶ್ರೀ ಗಾರ್ಡನ್‌ನಲ್ಲಿ ನಡೆದ ಗಂಗಾ–ಯಮುನಾ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ ಸಮಾರಂಭ. | Kannada Prabha

ಸಾರಾಂಶ

ಕೊಪ್ಪಳ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಭಾನುವಾರ ಗಂಗಾ–ಯಮುನಾ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ ಸಮಾರಂಭವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಉದ್ಘಾಟಿಸಿದರು.

ಕೊಪ್ಪಳ: ಸಜ್ಜನರು ಸಹಕಾರ ತತ್ವದಡಿ ಸಂಘಟಿತರಾಗಿ ದುರ್ಜನರ ಅಟ್ಟಹಾಸಕ್ಕೆ ಕಡಿವಾಣ ಹಾಕುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಕರೆ ನೀಡಿದರು.

ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಭಾನುವಾರ ನಡೆದ ಗಂಗಾ–ಯಮುನಾ ಸೌಹಾರ್ದ ಸಹಕಾರಿ ಸಂಘದ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಜ್ಜನರು ಒಗ್ಗೂಡಿ ಸಂಘಟಿತರಾಗದಿದ್ದರೆ ದುರ್ಜನರಿಗೆ ಅಟ್ಟಹಾಸ ಮೆರೆಯಲು ಅವಕಾಶ ಸಿಗುತ್ತದೆ. ಹೀಗಾಗಿ ಸಮಾಜದ ಹಿತಕ್ಕಾಗಿ ಸಜ್ಜನರು ಸಂಘಟಿತರಾಗಿ, ಸಹಕಾರ ಮನೋಭಾವದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.

ಗದಗಿನ ಸಿದ್ದನಗೌಡರು ದೇಶಕ್ಕೆ ಸಹಕಾರ ತತ್ವದ ಮಹತ್ವವನ್ನು ಪರಿಚಯಿಸಿದರು. ಇಂದು ಸಹಕಾರಿ ಕ್ಷೇತ್ರವು ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಅಸಹಾಯಕರ ಹಾಗೂ ಸಾಮಾನ್ಯ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಿದ್ದರೂ ಜನಸಾಮಾನ್ಯರಿಗೆ ಸುಲಭವಾಗಿ ಸಾಲ ಸಿಗಬೇಕು ಎಂಬ ಉದ್ದೇಶದಿಂದ ಸಹಕಾರಿ ಕ್ಷೇತ್ರ ಬೆಳೆದಿದೆ ಎಂದರು.

ಬ್ಯಾಂಕುಗಳು ಜನರ ನೆರವಿಗೆ ನಿಲ್ಲಬೇಕು. ಸಾಲದ ಮೇಲಿನ ಬಡ್ಡಿ ಸರಳ ಹಾಗೂ ಕೈಗೆಟುಕುವಂತಿರಬೇಕು. ಸಹಕಾರಿ ಸಂಸ್ಥೆಗಳು ಸಹಕಾರ ತತ್ವದಡಿ ಜನರಿಂದ, ಜನರಿಗಾಗಿ ನಡೆಯಬೇಕು; ಜನರನ್ನು ಕಿತ್ತುಕೊಂಡು ತಿನ್ನುವ ವ್ಯವಸ್ಥೆಯಾಗಬಾರದು ಎಂದು ಹೇಳಿದರು.

ಜಗತ್ತಿನ ಸೃಷ್ಟಿಯೇ ಸಹಕಾರ ತತ್ವದಡಿ: ಗವಿಶ್ರೀ

ಜಗತ್ತು ನಿರ್ಮಾಣವಾಗಿರುವುದೂ, ನಿರಂತರವಾಗಿ ನಡೆಯುತ್ತಿರುವುದೂ ಸಹಕಾರ ತತ್ವದಡಿ ಎಂದು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ದೇಹವೇ ಸಹಕಾರ ತತ್ವಕ್ಕೆ ಅತ್ಯುತ್ತಮ ಉದಾಹರಣೆ. ದೇಹದ ಎಲ್ಲ ಅಂಗಾಂಗಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವುದರಿಂದ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯವಾಗುತ್ತದೆ. ಹೃದಯವು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ತನ್ನ ಕೆಲಸ ಮಾಡುತ್ತದೆ. ಕೈ, ಕಾಲು, ಹೃದಯ ಸೇರಿದಂತೆ ದೇಹದ ಪ್ರತಿಯೊಂದು ಅಂಗವೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪರಸ್ಪರ ಸಹಕಾರವೇ ದೇಹದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದರು.

ಅದೇ ರೀತಿ ಸಮಾಜದಲ್ಲೂ ಪರಸ್ಪರ ಸಹಕಾರ, ಸಹಬಾಳ್ವೆ ಮತ್ತು ಸೌಹಾರ್ದದ ಅಗತ್ಯವಿದೆ. ಗಂಗಾ–ಯಮುನಾ ಸೌಹಾರ್ದ ಸಹಕಾರಿ ಸಂಘವು ಸಹಕಾರ ತತ್ವದಡಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.

ಆನ್‌ಲೈನ್ ವೇದಿಕೆ ಸಂಸ್ಥಾಪಕ ಮಹೇಶ ಮಾಶಾಳ, ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು.

ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಳಿಕೋಟಿ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಂಗಾ–ಯಮುನಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗವಿಸಿದ್ದಯ್ಯ ಅಂಗಬಸಯ್ಯನಮಠ ಅಧ್ಯಕ್ಷತೆ ವಹಿಸಿದ್ದರು.

ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಹಕಾರಿ ಮುಖಂಡ ರಮೇಶ ವೈದ್ಯ, ಅಮರೇಗೌಡ ಭಯ್ಯಾಪುರ, ವಿಜಯ ಬಿರದಾರ, ರಾಜಶೇಖರ ಆಡೂರು, ಪ್ರಕಾಶ ಆನಂದಳ್ಳಿ, ಉಪಾಧ್ಯಕ್ಷ ರಮೇಶ ಕವಲೂರು, ಮಲ್ಲಪ್ಪ ಕವಲೂರು, ಸಿಇಒ ಶಶಿಕುಮಾರ ಗಡ್ಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಸಮಾಜಕ್ಕೆ ದಿಕ್ಸೂಚಿಯಾಗಲಿ
ಮಳೆ ಇಲ್ಲ, ಬೆಳೆ ಇಲ್ಲ ಸರ್ಕಾರಕ್ಕೆ ಆದಾಯ ಕಡಿಮೆ ಇದೆ: ರಾಯರಡ್ಡಿ