ಧರ್ಮದ ಉಳಿವಿಗಾಗಿ ಹಿಂದೂಗಳು ಒಂದಾಗಲಿ: ಜಗದೀಶ ಕಾರಂತ

KannadaprabhaNewsNetwork |  
Published : Oct 12, 2025, 01:01 AM IST
11ಕೆಪಿಎಲ್3:ಕೊಪ್ಪಳ ನಗರದಲ್ಲಿ ಶನಿವಾರ  ಆರ್ ಎಸ್ ಎಸ್ ಪಥ ಸಂಚಲನ ಜರುಗಿತು. | Kannada Prabha

ಸಾರಾಂಶ

ಕೊಪ್ಪಳ ನಗರದ‌ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಜರುಗಿದ ಆರ್‌ಎಸ್‌ಎಸ್‌ ಪಥ ಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರ ಜಗದೀಶ ಕಾರಂತ ವಿಶೇಷ ಉಪನ್ಯಾಸ ನೀಡಿದರು.

ಕೊಪ್ಪಳ: ಭಾರತದ ಆತ್ಮವಾಗಿರುವ ಹಿಂದುತ್ವದ ಕಗ್ಗೊಲೆಗೆ ಪ್ರಯತ್ನ ನಡೆಯುತ್ತಿದೆ. ಧರ್ಮದ ಉಳಿವಿಗಾಗಿ ಹಿಂದೂಗಳೆಲ್ಲ ಇನ್ನಾದರೂ ಒಂದಾಗಬೇಕಿದೆ ಎಂದು ಆರ್‌ಎಸ್‌ಎಸ್‌ ಮುಖ್ಯ ವಕ್ತಾರ ಜಗದೀಶ ಕಾರಂತ ಹೇಳಿದರು.

ನಗರದ‌ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಜರುಗಿದ ಆರ್‌ಎಸ್‌ಎಸ್‌ ಪಥ ಸಂಚಲನದ ಸಮಾರೋಪ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತ ಒಂದು ಪ್ರಾಚೀನ ಸಂಸ್ಕೃತಿಯ ತಾಯಿ ನೆಲ. ಹಿಂದುತ್ವ ಶ್ರೇಷ್ಠ ರಾಷ್ಟ್ರದ ಸಂಕೇತ. ಸಾವಿರ ವರ್ಷಗಳಿಂದಲ್ಲ, ಯುಗ-ಯುಗಗಳಿಂದ ಅಸ್ತಿತ್ವದಲ್ಲಿರುವ ಒಂದು ಪುರಾತನ ರಾಷ್ಟ್ರ ಈ ಭಾರತ. ಹತ್ತಾರು ರೀತಿಯ ಪ್ರಬಲ ಆಕ್ರಮಣವನ್ನು ಎದುರಿಸಿಯೂ ಜಗತ್ತಿನಲ್ಲಿ ಇಂದಿಗೂ ತಲೆ ಎತ್ತಿ ನಿಂತಿರುವ ಒಂದು ಸ್ವಾಭಿಮಾನಿ ನಾಗರಿಕತೆಯ, ಸಂಸ್ಕೃತಿಯ ತಾಯಿ ನೆಲ ಈ ಭಾರತವಾಗಿದೆ. ಅದಕ್ಕೆ ಕಾರಣ, ಇದರ ಸಂರಕ್ಷಣೆಗಾಗಿ ನಮ್ಮ ಹಿರಿಯರು ಹಾಕಿಕೊಟ್ಟಂತಹ ಸಾಮಾಜಿಕ ಬದ್ಧತೆ, ಹಬ್ಬ- ಹರಿದಿನಗಳಾಗಿವೆ. ಹಿಂದೂ ಧರ್ಮದ ದೇವರು, ದೇವತೆಗಳನ್ನು ರಾಷ್ಟ್ರ, ಧರ್ಮ ವಿರೋಧಿಗಳು ಟೀಕಿಸಿ ಹಿಂದುತ್ವ ಕೊಲೆ ಮಾಡುತ್ತಿದ್ದಾರೆ ಎಂದು ಹೇಳಿದರು. ಒಂಬತ್ತು ಸಾವಿರ ವರ್ಷಗಳ ಹಿಂದೆ ರಾಮಯಣದ ಸಂದೇಶ, 3500 ಹಿಂದೆ ಈ ಭೂಮಿಯಲ್ಲಿ ನಡೆದ ಮಹಾಭಾರತದ ಅಂತಿಮ ನಿರ್ಧಾರ ಧರ್ಮರಕ್ಷಣೆಯಾಗಿದೆ. ಧರ್ಮ ಮತ್ತು ಅಧರ್ಮಗಳ ನಡುವೆ ನಡೆಯುವ ಸಂಘರ್ಷದಲ್ಲಿ ಧರ್ಮದ ರಕ್ಷಣೆಗಾಗಿ ಕಟ್ಟಕಡೆಯಲ್ಲಿ ಸಾಕ್ಷಾತ್ ಭಗವಂತನೇ ಅವತಾರ ತಾಳಿದ ದೇವಭೂಮಿ ಭಾರತ. ಅದು ನಮಗೆಲ್ಲರಿಗೂ ಮಾತೃಭೂಮಿಯೂ ಹೌದು. ಸಾಕ್ಷಾತ್‌ ದೇವರೇ ನಡೆದು ಹೋಗಿರುವ ಕಾರಣಕ್ಕಾಗಿ ಪುಣ್ಯಭೂಮಿಯು ಹೌದು ಈ ಭಾರತ ಎಂದರು.

ಧರ್ಮದ ರಕ್ಷಣೆಗಾಗಿ ಅರ್ಥಾತ್ ರಾಷ್ಟ್ರದ ಉಳಿವಿಗಾಗಿ, ಸಂಸ್ಕೃತಿಯ ಸಂರಕ್ಷಣೆಗಾಗಿ ಭಾರತ ನೆಲದಲ್ಲಿ ನಿರಂತರವಾಗಿ ಸಂಘರ್ಷ ನಡೆಯಿತು. ಜಗತ್ತಿನ ಯಾವ ನಾಗರಿಕತೆಯೂ ಅಸ್ತಿತ್ವದಲ್ಲಿ ಉಳಿದಿಲ್ಲ. ಆದರೆ, ಅನೇಕ ಆಕ್ರಮಣಗಳ ನಡುವೆಯೂ ಇವತ್ತಿಗೂ ಜಗತ್ತಿನಲ್ಲಿ ತನ್ನನ್ನು ತಾನು ಕಾಯ್ದುಕೊಂಡು ಬಂದಿರುವ ರಾಷ್ಟ್ರ ಅಥವಾ ಜನಾಂಗ ಅದು ಭಾರತ ಹಿಂದೂ. ಪೌರಾಣಿಕ ಇತಿಹಾಸವನ್ನು ಕಟ್ಟುಕಥೆಯೆಂದು ಯಾರೂ ಭಾವಿಸಬಾರದು. ಇತಿಹಾಸದ ಒಂದೊಂದು ಘಟನೆಗಳಿಗೂ ಜೀವಂತ ಸಾಕ್ಷಿಗಳು ಇವತ್ತಿಗೂ ಈ ಮಣ್ಣಿನಲ್ಲಿ ಸಿಗುತ್ತವೆ. ಜಗತ್ತನ್ನು ಗೆದ್ದ ಅಲೆಕ್ಸಾಂಡರ್‌ನಿಂದ ಬ್ರಿಟಿಷರ ವರೆಗೆ ಭಾರತದ ಮೇಲೆ ದಾಳಿಯಿಟ್ಟ ಆಕ್ರಮಣಕಾರರಿಗೆ ಲೆಕ್ಕವೇ ಇಲ್ಲ. ಭಾರತದಷ್ಟು ಸುದೀರ್ಘವಾದ ಸಂಘರ್ಷ ಎದುರಿಸಿದ ಮತ್ತೊಂದು ರಾಷ್ಟ್ರವಿಲ್ಲ. ಅದರ ಪರಿಣಾಮವೇ ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವಾಗಿದೆ ಎಂದು ಹೇಳಿದರು.

ಗಮನ ಸೆಳೆದ ಪಥ ಸಂಚಲನ: ನಗರದ ವಿವಿಧ ಭಾಗಗಳಿಂದ ತಾಲೂಕು ಕ್ರೀಡಾಂಗಣದ ವರೆಗೆ ಆರ್‌ಎಸ್‌ಎಸ್‌ನಿಂದ ಪಥ ಸಂಚಲನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ