ಸಂಸ್ಥೆಯ ಏಳ್ಗೆಗೆ ಶ್ರಮಿಸಿದ ಮಹನಿಯರ ಸ್ಮರಿಸುವ ಕಾರ್ಯವಾಗಲಿ: ಡಾ. ಪ್ರಭಾಕರ ಕೋರೆ

KannadaprabhaNewsNetwork |  
Published : Feb 02, 2025, 11:48 PM IST
2ಎಚ್‌ಯುಬಿ21, 22ಹುಬ್ಬಳ್ಳಿ ವಿದ್ಯಾನಗರದ ಜೆಜಿ ಕಾಮರ್ಸ್ ಕಾಲೇಜಿನ ಸಭಾಭವನದಲ್ಲಿ ಭಾನುವಾರ ನಡೆದ 75 ವರ್ಷದ ಪುನರ್ಮಿಲನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಜ. ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾನುವಾರ 75 ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಹುಬ್ಬಳ್ಳಿ: ಯಾವುದೇ ಒಂದು ಸಂಸ್ಥೆಯ ಏಳ್ಗೆಗೆ ಶ್ರಮಿಸಿದವರನ್ನು ಮರೆಯದೇ ಅವರನ್ನು ಸದಾ ಸ್ಮರಿಸುವ ಕಾರ್ಯವಾಗಬೇಕು. ಅನೇಕ ಮಹನೀಯರ ಪರಿಶ್ರಮದ ಫಲವಾಗಿ ಸ್ಥಾಪನೆಗೊಂಡ ಕೆಎಲ್‌ಇ ಶಿಕ್ಷಣ ಸಂಸ್ಥೆ ಇಂದು ರಾಜ್ಯಾದ್ಯಂತ ಹೆಮ್ಮರವಾಗಿ ಬೆಳೆದಿರುವುದು ಸಂತಸದ ಸಂಗತಿ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಜ. ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾನುವಾರ ನಡೆದ 75 ವರ್ಷದ (ಪುನರ್ಮಿಲನ) ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದು ಸಣ್ಣ ಸಂಸ್ಥೆಯಿಂದ ಆರಂಭವಾದ ಕೆಎಲ್‌ಇ ಶಿಕ್ಷಣ ಸಂಸ್ಥೆ ಇಂದು ರಾಜ್ಯಾದ್ಯಂತ 310 ಶಿಕ್ಷಣ ಸಂಸ್ಥೆಗಳನ್ನು ಹೊಂದುವಂತಾಗಿದೆ. ಅವುಗಳ ಶ್ರೇಯೋಭಿವೃದ್ಧಿಗೆ ಈ ಬಾರಿಯ ಸಂಸ್ಥೆಯ 110ನೇ ಸಾಮಾನ್ಯ ಸಭೆಯಲ್ಲಿ ಒಟ್ಟು ₹3800 ಕೋಟಿ ವೆಚ್ಚದ ಬಜೆಟ್ ಮಂಡನೆ ಮಾಡಲಾಗುತ್ತಿದೆ ಎಂದರು.

ಇಲ್ಲಿ ವಿದ್ಯಾರ್ಥಿಗಳು ಯಾವತ್ತೂ ಮಾಜಿಗಳಲ್ಲ, ಅವರು ಈ ಕಾಲೇಜಿನ ಖಾಯಂ ವಿದ್ಯಾರ್ಥಿಗಳೆ ಆಗಿರುತ್ತಾರೆ. ನಾನು ಸಹ ಇದೇ ಕಾಲೇಜಿನಲ್ಲಿ ಕಲಿತಿದ್ದೇನೆ. ಸಂಸ್ಥೆಯಲ್ಲಿ ಕಲಿತ ಅನೇಕರು ರಾಜಕಾರಣಿ, ಪೊಲೀಸ್, ಉದ್ಯಮ ಹಾಗೂ ಶಿಕ್ಷಣ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವುದು ಸಂತಸದ ಸಂಗತಿ ಎಂದರು.

ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಸುಭಾಷ ಅಡಿ ಮಾತನಾಡಿ, ಎಲ್ಲರ ಜೀವನದಲ್ಲಿ ವಿದ್ಯಾರ್ಥಿ ಜೀವನ ಎಂಬುದು ಬಹಳ ಮಹತ್ವದ ಘಟ್ಟವಾಗಿರುತ್ತದೆ. ವಿದ್ಯಾರ್ಥಿ ಜೀವನ ಜಾತಿ, ಮತ, ಪಂತ ಎಂಬ ಯಾವುದೇ ಬೇಧ- ಭಾವ ಇಲ್ಲದ ಪವಿತ್ರ ಸಂಬಂಧವಾಗಿದೆ ಎಂದರು.

1947ರಲ್ಲಿ ಅನೇಕ ಸಮಾನ ಮನಸ್ಕರ ಶ್ರಮದ ಫಲವಾಗಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಆರಂಭಿಸಲಾಯಿತು. ನಂತರ ಕೆಎಲ್‌ಇ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮೂಲಕ ಶಿಕ್ಷಣ ದಾಸೋಹಕ್ಕೆ ಕಾರಣವಾಯಿತು. ಜೀವನ ರೂಪಿಸಲು ಶಿಕ್ಷಣ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದರು.

ನಿವೃತ್ತ ಪ್ರಾಚಾರ್ಯ ಆರ್. ನಟರಾಜ ಮಾತನಾಡಿದರು. ನಂತರ ಕಾಲೇಜಿನ ನಿವೃತ್ತ ಪ್ರಚಾರ್ಯರು ಹಾಗೂ ಪ್ರಾಧ್ಯಾಪಕರು ಸೇರಿದಂತೆ ದಾನಿಗಳಾದ ಉದ್ಯಮಿ ಆನಂದ ಸಂಕೇಶ್ವರ, ಆನಂದ ಕಡೇಮನಿ, ಉಮೇಶ ಚಿಕ್ಕಮಠ, ವಿನಯ ಪಾಟೀಲ, ಎಸ್.ಆರ್. ಪಾಟೀಲ, ಉದಯ ರಾಯ್ಕರ ಅವರನ್ನು ಸನ್ಮಾನಿಸಲಾಯಿತು.

75ನೇ ವರ್ಷದ ಸ್ನೇಹ ಸಮ್ಮೀಲನದ ಅಂಗವಾಗಿ ಕಾಲೇಜಿನ ಆವರಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಕ್ತದಾನ ಮಾಡಿದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್. ಪಾಟೀಲ, ಖಜಾಂಚಿ ಬಾಬಾ ಭೂಸದ, ಸುನೀಲ ದೇವರಡ್ಡಿ, ನಿವೃತ್ತ ಪ್ರಾಚಾರ್ಯ ಎಸ್.ಆರ್. ಹಿರೇಮಠ, ಎಸ್.ಸಿ.ಮಟಗುಡ್ಡ, ಎಸ್.ಡಿ. ಐಹೊಳ್ಳಿ ಸೇರಿದಂತೆ ಹಲವರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ