-ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ. ವೀರೇಶ್ ಸಲಹೆ
-----ಕನ್ನಡಪ್ರಭವಾರ್ತೆ ಚಿತ್ರದುರ್ಗ
ಕೇವಲ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಬದಲು ಪ್ರತಿಯೊಬ್ಬರಿಂದಲೂ ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಕೆಲಸವಾಗಬೇಕೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ತಿಳಿಸಿದರು.ಕರ್ನಾಟಕ ರತ್ನ ಡಾ.ರಾಜ್‍ಕುಮಾರ್, ಸಾಂಸ್ಕೃತಿಕ ಕಲಾ ಪರಿಷತ್, ಸಮತಾ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಕವಿಗೋಷ್ಟಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾನಪದ, ತತ್ವಪದ, ಸೋಬಾನೆ ಪದ, ಗೀಗಿ ಪದ ಇವುಗಳಿಗೆ ಮತ್ತೆ ಜೀವ ತುಂಬಬೇಕಿದೆ. ಕನ್ನಡದ ಬಗ್ಗೆ ಯಾರಲ್ಲಿಯೂ ಉತ್ಸಾಹ ಕಡಿಮೆಯಾಗ ಬಾರದು. ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಸಂಸ್ಕೃತಿ, ಸಂಸ್ಕಾರ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ವಯಸ್ಸಾದ ವೃದ್ಧರನ್ನು ಮಕ್ಕಳು ಜೋಪಾನ ಮಾಡದೆ ಅನಾಥಾಶ್ರಮಕ್ಕೆ ಕಳಿಸುತ್ತಿರುವುದು ನಿಜಕ್ಕೂ ಹೆತ್ತವರಿಗೆ ಮಾಡಿದ ದ್ರೋಹ. ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯದ ಜಾನಪದ ಹಾಡುಗಾರ್ತಿ ಸಿರಿಯಜ್ಜಿ ಸಾವಿರಾರು ಜಾನಪದಗಳನ್ನು ಹಾಡಿದ್ದಾರೆ. ಬಾಯಿಂದ ಬಾಯಿಗೆ ಪಸರಿಸುವ ಜಾನಪದ, ಸೋಬಾನೆ, ತತ್ವಪದ, ಗೀಗಿಪದಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದು ಹೇಳಿದರು.ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಹನ್ನೆರಡನೇ ಶತಮಾನದ ಬಸವಣ್ಣ, ಪದ್ಮಭೂಷಣ, ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸೇರಿದಂತೆ ಅನೇಕ ಸರ್ವಶ್ರೇಷ್ಠ ಮಹನೀಯರನ್ನು ಕನ್ನಡಿಗರು ನೆನಪಿಸಿಕೊಳ್ಳಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಆರ್.ಶೇಷಣ್ಣಕುಮಾರ್ ಮಾತನಾಡಿ, ಒಳ್ಳೆಯ ಮನಸ್ಸನ್ನು ಗೆಲ್ಲಲು ಒಳ್ಳೆಯ ಮನಸ್ಸಿರುವವರಿಂದ ಮಾತ್ರ ಸಾಧ್ಯ. ಕಲಾವಿದರಲ್ಲಿ ಒಳ್ಳೆಯ ಮನಸ್ಸಿರುತ್ತದೆ. ಎಷ್ಟೆ ಸಂಘಟನೆ ಮಾಡಿ ಹೋರಾಟ ನಡೆಸಿದರು ಕಲಾವಿದರುಗಳಿಗೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗುತ್ತಿಲ್ಲ ಎಂದರು.
ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ರಾಜ್ಯಾಧ್ಯಕ್ಷ ಪರಶುರಾಮ್ ಗೊರಪ್ಪರ್ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಕೆ.ಬಿ.ಕೃಷ್ಣಪ್ಪ, ಸಮತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಓ.ವೆಂಕಟೇಶ್‍ನಾಯ್ಕ, ಕಿರುತೆರೆ ನಟಿ ಇಂದ್ರಸುಧಾ, ಹೆಚ್.ಸಿ. ದಿವುಶಂಕರ್, ಸಿಲ್ವರ್ ರಾಕ್ ವೆಲ್ಟರ್ ಫೌಂಡೇಶನ್‍ನ ಜೆ.ಆಶಾ, ಜಿ.ಸರಸ್ವತಮ್ಮ, ವೈ.ಉಷಾದೇವಿ, ಜಿ.ಟಿ.ಗಂಗಮ್ಮ, ಸೌಭಾಗ್ಯ ಮುಷ್ಟಿಗೇರಿ ಇದ್ದರು.-----------------
ಪೋಟೋ: ಪತ್ರಕರ್ತರ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಾ.ಕೆ.ಎಂ.ವೀರೇಶ್ ಉದ್ಘಾಟಿಸಿದರು.-----------
ಫೋಟೋ: 27 ಸಿಟಿಡಿ2