ಸೈನಿಕರನ್ನು ಗೌರವಿಸುವ ಕಾರ್ಯ ಮಾಡೋಣ: ಡಾ.ಚಂದ್ರಶೇಖರ

KannadaprabhaNewsNetwork |  
Published : Nov 28, 2024, 12:33 AM IST
ಬೆಳಗಾವಿ ವಿಭಾಗ ಮಟ್ಟದ ಕೆಜೆವಿಎಸ್ ಸಮ್ಮೇಳನವನ್ನು ಖ್ಯಾತ ಮನೋರೋಗ ತಜ್ಞ ಸಿ.ಆರ್.ಚಂದ್ರಶೇಖರ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳಲ್ಲಿ ಶಿಕ್ಷಕರಲ್ಲಿ ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಈ ಸಮಿತಿ ಸಾಮಾಜಿಕ ಕಳಕಳಿ ಸ್ಮರಣೀಯವಾದುದು

ಕನ್ನಡಪ್ರಭ ವಾರ್ತೆ ಮುಧೋಳ

ನಾವು ಸ್ವತಂತ್ರ್ಯವಾಗಿ ಈ ದೇಶದಲ್ಲಿ ಓಡಾಡಿಕೊಂಡು ಇದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಸೈನಿಕರು. ದೇಶದ ಆರೋಗ್ಯವನ್ನು ಹಗಲಿರುಳೆನ್ನದೆ ಕಾಪಾಡುವ ನಮ್ಮ ಸೈನಿಕರ ಆರೋಗ್ಯ ಹಾಗೂ ಅವರ ಕುಷಲೋಪರಿ ವಿಚಾರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಖ್ಯಾತ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.

ನಗರದ ಸಾಯಿನಿಕೇತನ ಸಿಬಿಎಸ್‌ಇ ಶಾಲಾ ಆವರಣದಲ್ಲಿ ಕೇಂದ್ರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ ಹಾಗೂ ಮುಧೋಳ ತಾಲೂಕು ಘಟಕದಿಂದ ಬೆಳಗಾವಿ ವಿಭಾಗ ಕೆಜೆವಿಎಸ್ ಸಮ್ಮೇಳನ ಹಾಗೂ 69 ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 69 ಮಾಜಿ ಯೋಧರ ಸೈನಿಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸೈನಿಕರನ್ನು ಗೌರವಿಸುವ ಕಾರ್ಯ ನಮ್ಮದಾಗಬೇಕೆಂದರು.

ರಾಜೇಶ ವಾಲಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಕರಲ್ಲಿ ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಈ ಸಮಿತಿ ಸಾಮಾಜಿಕ ಕಳಕಳಿ ಸ್ಮರಣೀಯವಾದುದು. ಇಂದು ಹುಟ್ಟಿದ ಪ್ರತಿಯೋರ್ವ ಮನುಷ್ಯನಿಗೂ ವಿಜ್ಞಾನ ಬೇಕೇ ಬೇಕು. ಎಲ್ಲ ರಂಗದಲ್ಲಿಯೂ ವಿಜ್ಞಾನವನ್ನು ಕಾಣಬಹುದಾಗಿದೆ. ಸೈನಿಕರು ದೇಶ ಕಾಯಲು ಮಾತ್ರವಲ್ಲ ನೆರೆ, ಬರದ ಸಮಯದಲ್ಲಿ, ಕಷ್ಟಕಾಲದಲ್ಲಿ ಆಪತ್ಭಾಂದವರಾಗುತ್ತಾರೆ ಎಂದರು.

ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು ಮಾತನಾಡಿ, ಸೈನಿಕರಲ್ಲಿನ ಶಿಸ್ತು, ಬದ್ಧತೆ, ನಿಷ್ಠೆ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಎಲ್ಲರೂ ಆರೋಗ್ಯದ ದೃಷ್ಟಿಯಿಂದ ದಿನದ ಅಲ್ಪ ಸಮಯ ನಾವು ಮೀಸಲಾಗಿಟ್ಟುಕೊಳ್ಳಬೇಕು. ಯಾವುದೇ ಮಾಟ ಮಂತ್ರದಿಂದ ನಮ್ಮ ಆರೋಗ್ಯ ಸರಿಯಾಗುವದಿಲ್ಲ. ವಿಜ್ಞಾನದಿಂದ ಮಾತ್ರ ನಮ್ಮ ಆರೋಗ್ಯ ಸರಿಯಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಸಮಿತಿ ಗೌರವಾಧ್ಯಕ್ಷ ಡಾ.ಶಿವಾನಂದ ಕುಬಸದ, ಮೇಜರ್ ಅಪ್ಪಾಸಾಬ ನಿಂಬಾಳಕರ, ನ್ಯಾಯವಾದಿ ಪ್ರಕಾಶ ವಸ್ತದ ಮಾತನಾಡಿದರು.

ವಿಶ್ರಾಂತ ಉಪ ನಿರ್ದೇಶಕ ಡಾ.ಆರ್.ಎ.ಕುಲಕರ್ಣಿ, ವಿಜಯಪುರ ಜಿಲ್ಲಾಧ್ಯಕ್ಣ ಜಿ.ಎಸ್.ಕಾಂಬಳೆ, ಜಿಲ್ಲಾಧ್ಯಕ್ಷ ಡಾ.ಸಿದ್ದಣ್ಣ ಬಾಡಗಿ, ತಾಲೂಕಾಧ್ಯಕ್ಷ ವೆಂಕಟೇಶ ಗುಡೆಪ್ಪನವರ, ಮುಖ್ಯೋಪಾಧ್ಯಾಯ ವೆಂಕಟೇಶ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಸಂಜಯ ನಡುವಿನಮನಿ, ಉಮಾ ಕಾತರಕಿ, ಚಂದ್ರಶೇಖರ ನಾಗವಂದ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಸೈಲ ಪಸಾರ, ಶೇಷಪ್ಪ ದುಂಡಪ್ಪ ಪೋತರಡ್ಡಿ, ಜಿ.ಕೆ.ಹುಸೇನಬಾಯಿ, ಗೀತಾ ಕಲೂತಿ, ಅಶ್ವಿನಿ ಅಂಗಡಿ, ಆರ್.ಐ.ಹಣಗಿ ಸೇರಿ ಇತರರಿದ್ದರು.

ಇದೇ ಸಂದರ್ಭದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ 69 ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ