ಕುಕನೂರು: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ತಮ್ಮ ಪ್ರತಿಭೆ ಮೂಲಕ ಉಳಿಸುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಹೇಳಿದರು.ಪಟ್ಟಣದ ಶ್ರೀ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಸಭಾಭವನದಲ್ಲಿ ಶ್ರೀ ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ 50ನೇ ವರ್ಷದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಜಾನಪದ ಸಂಗೀತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಾನಪದ ಕಲೆ ಎಂಬುದು ಗ್ರಾಮೀಣ ಸೊಗಡಿನ ಪ್ರತೀಕ. ಜಾನಪದ ಕಲೆ ಎಂಬುದು ಸಾಮಾನ್ಯ ಆದದ್ದು ಅಲ್ಲ. ಅಂತಹ ಕಲೆ ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.ಹಿರಿಯ ಸಾಹಿತಿ ಡಾ. ಕೆ.ಬಿ. ಬ್ಯಾಳಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರ ಅಪಾರವಾಗಿದೆ. ರಾಜ್ಯದ ಹಲವಾರು ಕಲೆಗಳ ತವರು ಆಗಿದೆ. ಪರಂಪರಾಗತ ಕಲೆಯನ್ನು ಉಳಿಸಲು ಬೆಳೆಸಲು ಸರಕಾರ ಮತ್ತು ಜನರು ಶ್ರಮಿಸಬೇಕಾಗಿದೆ ಎಂದರು.ಸಾಹಿತಿ ಆರ್.ಪಿ. ರಾಜೂರು ಮತ್ತು ಡಾ.ಫಕೀರಪ್ಪ ವಜ್ರಬಂಡಿ ಮಾತನಾಡಿ, ಹಿಂದಿನ ಕಾಲದಲ್ಲಿ ಜಾನಪದ ಕಲೆ ಜನರ ನಾಡಿ ಮಿಡಿತವಾಗಿತ್ತು . ಆ ಕಾಲದಲ್ಲಿ ಜನರು ತಮ್ಮ ನಿತ್ಯದ ಕೆಲಸವನ್ನು ಹಾಡುತ್ತಾ ಮಾಡುತ್ತಿದ್ದರು. ಒಂದೊಂದು ಕೆಲಸಕ್ಕೂ ಒಂದೊಂದು ಹಾಡನ್ನು ಕಟ್ಟಿ ಹಾಡುತ್ತಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಜನಪದ ಸಂಸ್ಕೃತಿ, ಕಲೆ, ಸಾಹಿತ್ಯ ಮರೆಯಾಗುತ್ತಿರುವುದು ಅತ್ಯಂತ ವಿಷಾದ ಸಂಗತಿ ಎಂದರು.ಶಿಕ್ಷಕ ಶರಣಪ್ಪ ಕೊಪ್ಪದ್, ವೀರಯ್ಯ ಹಿರೇಮಠ, ಕುಕನೂರು ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ, ವೀರಭದ್ರೇಶ್ವರ ವಿಕಲಚೇತನ ಸಂಘದ ಅಧ್ಯಕ್ಷ ಈರಪ್ಪ, ಹಿರಿಯ ಕಲಾವಿದ ಶರಣಯ್ಯ ಇಟಗಿ, ಚನ್ನಪ್ಪ ಗೌಡ ಮಾಲಿಪಾಟೀಲ್, ಅನ್ನಪೂರ್ಣಮ್ಮ ಮುಂಡರಗಿ, ಆಕಾಶವಾಣಿ ಕಲಾವಿದ ಮೇಘರಾಜ ಜಿಡಗಿ, ಶಿಕ್ಷಕಿ ಪಾರ್ವತಮ್ಮ ಗುತ್ತೇದಾರ್, ಈರಪ್ಪ ಕೌದಿ ಮತ್ತಿತರರಿದ್ದರು.ವೀರಭದ್ರಪ್ಪ ಸುಂಕದ ವಚನ ಗಾಯನ, ಅನಸೂಯಾ ಸಾಂಸ್ಕೃತಿಕ ಜಾನಪದ ಗೀತೆಗಳು ಮತ್ತು ಸೋಬಾನ ಪದ ಹಾಡಿದರು. ಬಸವರಾಜ ಕೊಡ್ಲಿ ನಿರೂಪಿಸಿ, ವಂದಿಸಿದರು.