ಕನ್ನಡಪ್ರಭ ವಾರ್ತೆ ಶಿಕಾರಿಪುರ
ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಸಂಕಲ್ಪವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಸಲಹೆ ನೀಡಿದರು.ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ತಾಲೂಕು ಕಸಾಪ, ತಾ.ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾ. ಕರ್ನಾಟಕ ಜಾನಪದ ಪರಿಷತ್ ಹಾಗೂ ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ 1900 ಭಾಷೆಗಳ ಮಧ್ಯೆ ಕನ್ನಡ ಭಾಷೆ ಪ್ರಜ್ವಲಿಸುತ್ತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಲಭಿಸಿದೆ. ಭಾಷೆಯ ಹಿನ್ನೆಲೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಕುವೆಂಪು ರಚಿಸಿದ ನಾಡಗೀತೆಗೆ ನೂರು ವರ್ಷ ತುಂಬಿದ ಹಿನ್ನೆಲೆ ನೂರು ಕಂಠಗಳಲ್ಲಿ ನಾಡಗೀತೆ ಹಾಡಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಆಚರಣೆಯ ಈ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮುಂದಿದೆ ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ.ಸೋಮಶೇಖರ್ ಶಿಮೊಗ್ಗಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ಕನ್ನಡ ನಾಡು ನುಡಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ನಮ್ಮ ಮನಸ್ಸಿನ ಭಾವನೆ ಹೊರಹಾಕಲು ಮಾತೃಭಾಷೆ ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಕಸಾಪ ಅಧ್ಯಕ್ಷ ಎಚ್.ಎಸ್. ರಘು ಮಾತನಾಡಿ, ಮೊದಲ ಕನ್ನಡ ಸಾಮ್ರಾಜ್ಯ ಸ್ಥಾಪಕ ರಾಜ ಮುಯೂರವರ್ಮ ಜನಿಸಿದ ಈ ಮಣ್ಣಲ್ಲಿ ನಾವು ಜನ್ಮ ತಾಳಿರುವುದು ಪೂರ್ವ ಜನ್ಮದ ಪುಣ್ಯವಾಗಿದೆ. ಮಕ್ಕಳಿಗೆ ಮಾತೃಭಾಷೆ ಕನ್ನಡದ ಬಗ್ಗೆ ಅಭಿಮಾನವನ್ನು ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿ ಜೀವನದಿಂದಲೇ ಸಾಹಿತ್ಯ ಓದುವ, ಬರೆಯುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಡಗೀತೆ, ರೈತ ಗೀತೆ, ಹಚ್ಚೇವು ಕನ್ನಡದ ದೀಪ ಹಾಡಿದರು. ಪ್ರಶಾಂತ್ ಕುಸ್ಕೂರು, ದಿನೇಶ್ ಆಚಾರ್, ನಂದಾ ಪ್ರೇಮ್ ಕುಮಾರ್ ಕವನ ವಾಚಿಸಿದರು. ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಜಾನಪದ ಗೀತೆ ಗಾಯನ ಮಾಡಿದರು.
ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಶಿವಾನಂದ ಶಾಸ್ತ್ರಿ, ಕಾರ್ಯದರ್ಶಿ ಡಿ.ಕೆ. ಮಲ್ಲಿಕಾರ್ಜುನ್, ನಿರ್ದೇಶಕ ಶಿವಾನಂದಸಾನು, ಲಯನ್ಸ್ ಕ್ಲಬ್ ಅಧ್ಯಕ್ಷ ಓ.ಸಂದೀಪ್ ಶಾಸ್ತ್ರಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಸಂಘಟನಾ ಕಾರ್ಯದರ್ಶಿ ಕೆ.ಎಸ್. ಹುಚ್ರಾಯಪ್ಪ, ತಾ.ಜಾನಪದ ಪರಿಷತ್ ಅಧ್ಯಕ್ಷ ಬಿ.ಪಾಪಯ್ಯ, ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಸ್.ಎನ್.ನರಸಿಂಹಸ್ವಾಮಿ, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಂ.ಪಿ.ಪ್ರಶಾಂತ್ ಕುಮಾರ್, ಪ್ರಾಂಶುಪಾಲ ಎಂ.ಪಿ.ಲಕ್ಷ್ಮಿಕಾಂತ್, ಮುಖ್ಯೋಪಾಧ್ಯಾಯರಾದ ಲೀಲಾ, ನವೀನ್ ಜೋಗಿ, ಮಲ್ಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.