ಹೊಸದುರ್ಗ: ಲಿಂಗಪೂಜೆ ಮಾಡುವ ಲಿಂಗಾಯಿತರು ಸನಾತನ ಧರ್ಮ ಹಾಗೂ ವೈದಿಕ ಆಚರಣೆಯಿಂದ ಹೊರಬರಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಾಗತಿಕ ಲಿಂಗಾಯಿತ ಮಹಾಸಭಾದ ಹೊಸದುರ್ಗ ತಾಲೂಕು ಘಟಕದ ಉದ್ಘಾಟನೆ ಹಾಗೂ ಸೇವಾ ದೀಕ್ಷಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಲಿಂಗ ಪೂಜೆ ಮಾಡುವ ಜನ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮಕ್ಕೂ ಹೊಗುತ್ತಾರೆ, ತಿರುಪತಿ ತಿಮ್ಮಪ್ಪನಿಗೂ ಹೊಗುತ್ತಾರೆ. ಮನೆಯಲ್ಲಿ ಹೋಮ ಹವನ, ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ ಮಾಡಿದರೆ ಏನು ಪ್ರಯೋಜನ ? ಜಾಗತಿಕ ಲಿಂಗಾಯಿತ ವೇದಿಕೆಯ ಸದಸ್ಯರು ಕೇವಲ ಲಿಂಗಪೂಜೆಗೆ ಮಾತ್ರ ಸೀಮಿತವಾಗಬೇಕು ಎಂದರು.
12ನೇ ಶತಮಾನದಲ್ಲಿ ಲಿಂಗಾಯಿತ ಧರ್ಮವನ್ನು ಸ್ಥಾಪಿಸಿದವರು ವೈದಿಕ ಪರಂಪರೆಯ ಜನರಲ್ಲ, ತಳಸಮುದಾಯ ಹೆಣ್ಣು ಮಕ್ಕಳು. ಲಿಂಗಾಯಿತರು ವೈದಿಕ ಆಚರಣೆ ಮಾಡುವ ಅಗತ್ಯವಿಲ್ಲ. ಇದನ್ನು ಹೇಳಿದರೆ ನಮ್ಮ ಮೇಲೆ ಮುಗಿ ಬೀಳುತ್ತಾರೆ. ಸತ್ಯ ಹೇಳಲು ನಾವು ಹಿಂಜರಿಯುವುದಿಲ್ಲ. ಸತ್ಯ ಯಾವತ್ತಿಗೂ ಸತ್ಯವಾಗಿರುತ್ತದೆ. ವೇದಿಕೆಯ ಸದಸ್ಯರು ಕೇವಲ ಇಂದಿನ ಕಾರ್ಯಕ್ರಮಕ್ಕೆ ಸೀಮಿತವಾಗದೆ ವಾರಕ್ಕೊಮ್ಮೆ ಸಾಮೂಹಿಕ ಇಷ್ಟಲಿಂಗಪೂಜೆ ಸೇರಿದಂತೆ ಲಿಂಗಾಯಿತ ಧರ್ಮದ ಬಗ್ಗೆ ಲಿಂಗಾಯಿತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.ಲಿಂಗಾಯಿತ ಧರ್ಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಯಾವಾಗ ನಡೆಸಬೇಕು ಎಂಬುದನ್ನು ಇಲ್ಲಿರುವ ಕೆಲವರೊಂದಿಗೆ ಸಭೆಯ ನಂತರ ಚರ್ಚಿಸುತ್ತೇವೆ. ನಿಮ್ಮ ಸಲಹೆಗಳನ್ನು ನಮಗಾಗಲೀ, ಜಾಮದಾರ್ ಅವರಿಗಾಲೀ ಹೇಳಬಹುದು ಎಂದರು.ಮೈಸೂರಿನ ಬಸವ ಜ್ಞಾನ ಮಂದಿರದ ಬಸವಾಂಜಲಿ ಮಾತಾಜಿ ಮಾತನಾಡಿ, ಲಿಂಗ ಧಾರಿಗಳೆಲ್ಲಾ ಲಿಂಗಾಯಿತರೇ ಹೊರತು ವೀರಶೈವರಲ್ಲ, ವೀರಶೈವ ಅನ್ನುವ ಪದ ಯಾವಾಗ ಬಂತು ಎನ್ನುವುದು ನನಗೆ ಗೊತ್ತಿಲ್ಲ. ನಾವು ಕಳೆದ 15-20 ವರ್ಷಗಳಿಂದ ಮಾತ್ರ ಕೇಳುತ್ತಿದ್ದೇವೆ. ಲಿಂಗಾಯಿತ ಧರ್ಮವನ್ನು ಕೊಟ್ಟವರು ಬಸವಣ್ಣ ಅವರ ಕಾಯಕ ದಾಸೋಹದಂತೆ ಲಿಂಗಾಯಿತರು ಸೇವಾಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಚಿತ್ರದುರ್ಗ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಮಾತನಾಡಿ, ಧರ್ಮ, ಜಾತಿ, ಸಮಾಜ ಎಲ್ಲವುದಕ್ಕಿಂತ ಮಿಗಿಲಾದದ್ದು ಬದುಕು. ಲಿಂಗಾಯಿತ ಎನ್ನುವುದು ದುಡಿಯುವ ವರ್ಗ. ಲಿಂಗಾಯಿತ ಧರ್ಮ ಯಾವುದೇ ಜಾತಿಗೆ ಮೀಸಲಾಗಿಲ್ಲ. ಎಲ್ಲಿಯವರೆಗೆ ಲಿಂಗಾಯಿತವನ್ನು ಒಂದು ಜಾತಿಯಾಗಿ ನೋಡುತ್ತೇವೆ, ಅಲ್ಲಿಯವರೆಗೆ ಲಿಂಗಾಯಿತ ಧರ್ಮದ ಅಭಿವೃದ್ಧಿ ಸಾಧ್ಯವಿಲ್ಲ. ಇಂದು ಮೀಸಲಾತಿಗಾಗಿ ಧರ್ಮ ಜಾತಿಗಳು ಹುಟ್ಟುಕೊಂಡಿವೆ. ಲಿಂಗಾಯಿತರಲ್ಲಿ ಕುರುಬರು ಇದ್ದಾರೆ, ಮಡಿವಾಳರು ಇದ್ದಾರೆ ಮಾದಾರರು ಇದ್ದಾರೆ ಎಂದರು.ಮಹಾಸಭಾದ ಉಪಾಧ್ಯಕ್ಷ, ನಿವೃತ್ತ ನ್ಯಾಯಾಧೀಶರಾದ ಕೆಂಪೇಗೌಡರು ಮಾತನಾಡಿ, ಲಿಂಗಾಯಿತರು ಹಿಂದುಗಳಲ್ಲ. ಹಿಂದು ದೇಶದ ಜನ, ಹಿಂದು ಎನ್ನುವುದು ಧರ್ಮವಲ್ಲ ಅದೊಂದು ಪ್ರದೇಶದ ಹೆಸರು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್ ಉದ್ಘಾಟಿಸಿದರು. ತಾಲೂಕು ಘಟಕದ ಅಧ್ಯಕ್ಷ ಜಿ.ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಸವರಾಜ ರೊಟ್ಟಿ, ರಾಗಿ ಶಿವಲಿಂಗಪ್ಪ, ಜಿ.ಟಿ.ನಂದೀಶ್, ಬಸವರಾಜ ಕಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಒಳ ಪಂಗಡಗಳ ಅಧ್ಯಕ್ಷರುಗಳು, ಬಸವಾನುಯಾಯಿಗಳು ಇದ್ದರು.