ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಬೆಳಗ್ಗೆ ೧೧ ಗಂಟೆ ಸುಮಾರಿಗೆ ಬೆಂಗಳೂರಿನಿಂದ ಪಟ್ಟಣಕ್ಕೆ ಆಗಮಿಸಿದ ಜಗದ್ಗುರು ರಾಮಾನಂದಾಚಾರ್ಯ ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜರನ್ನು ಪೂರ್ಣಕುಂಭ ಕಳಶದೊಂದಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ವೇದಿಕೆಯ ದಿವ್ಯ ಪೀಠದಲ್ಲಿ ಆಸೀನರಾದ ಸ್ವಾಮೀಜಿಯವರಿಗೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ದಂಪತಿ ಪಾದಪೂಜೆ ನೆರವೇರಿಸಿ, ಆರತಿ ಬೆಳಗಿದರು, ಶ್ರೀಗಳು ದಂಪತಿಗೆ ಫಲಾಶೀರ್ವಾದ ನೀಡಿದರು.
ಶ್ರೀ ಸ್ವಾಮಿ ನರೇಂದ್ರಾಚಾರ್ಯಜೀ ಮಹಾರಾಜರು ನೆರೆದಿದ್ದ ಜನರನ್ನುದ್ದೇಶಿಸಿ ಪ್ರವಚನ ನೀಡಿ, ಬದುಕಿನಲ್ಲಿ ಎಲ್ಲರಿಗೂ ಸಂಕಷ್ಟಗಳಿವೆ. ಅವುಗಳ ಪರಿಹಾರಕ್ಕೆ ಮುಂದಾಗುವ ದಾರಿಯನ್ನು ಅವರೇ ಕಂಡುಕೊಳ್ಳಬೇಕು. ಆಧ್ಯಾತ್ಮವನ್ನು ಅರಿತು ಗುರುವರ್ಯರಲ್ಲಿ ನಂಬಿಕೆಯಿಟ್ಟಾಗ ಸಮಸ್ಯೆಗಳು ದೂರವಾಗುತ್ತವೆ ಎಂದರು.ಮನುಷ್ಯ ಜಂಜಾಟದ ಬದುಕಿನಿಂದ ಆಚೆ ಬಂದು ನೆಮ್ಮದಿಯ ಜೀವನದೆಡೆಗೆ ಸಾಗಲು ನಾವು ನಮ್ಮ ಪ್ರವಚನಗಳ ಮೂಲಕ ದೇಶದೆಲ್ಲೆಡೆ ಸಂಚರಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಆಶ್ರಮಗಳು ದೇಶದ ವಿವಿಧೆಡೆ ೧೨ ಕೇಂದ್ರಗಳನ್ನು ಹೊಂದಿವೆ. ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಛತ್ತೀಸ್‌ಗಡ, ತೆಲಂಗಾಣ, ಗೋವಾ, ಮಹಾರಾಷ್ಟ್ರದಲ್ಲಿ ಆಶ್ರಮಗಳಿದ್ದು, ಶೀಘ್ರದಲ್ಲೇ ಕರ್ನಾಟಕ ರಾಜ್ಯದಲ್ಲಿಯೂ ಆಶ್ರಮ ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸೂಕ್ತ ಜಾಗ, ಜಿಲ್ಲೆಯ ಹುಡುಕಾಟದಲ್ಲಿರುವುದಾಗಿ ಹೇಳಿದರು.
ಸ್ವ ಸ್ವರೂಪ ಸಂಪ್ರದಾಯ ಭಕ್ತ ಸೇವಾಸಮಿತಿ ಅಧ್ಯಕ್ಷ, ಕಾರ್ಯಕ್ರಮದ ಆಯೋಜಕ ಭುವನಹಳ್ಳಿ ಯೋಗೀಶ್ ಮಾತನಾಡಿ, ತಾಲೂಕಿನ ಭಕ್ತರಿಗೆ ಸ್ವಾಮೀಜಿಯವರ ಕಾರ್ಯಕ್ರಮದ ಕುರಿತಾಗಿ ಮನವಿ ಮಾಡಿದ್ದಕ್ಕೆ ಜನ ಪೂರಕವಾಗಿ ಸ್ಪಂದಿಸಿ, ಮೂರು ಸಾವಿರಕ್ಕೂ ಹೆಚ್ಚು ಜನ ಆಗಮಿಸಿ ಅವರ ಪ್ರವಚನ ಆಲಿಸಿ, ಸಮಸ್ಯೆ ಮಾರ್ಗದರ್ಶನ ಪಡೆದಿದ್ದಾರೆ. ತಾಲೂಕಿನಲ್ಲಿ ಇದು ಎರಡನೇ ಕಾರ್ಯಕ್ರಮವಾಗಿದ್ದು, ಅತಿಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಗುರುವಿನ ಶಕ್ತಿ ಏನು ಎಂಬುದು ಜನರಿಗೆ ಮನವರಿಕೆಯಾಗಿದೆ. ಯಾವುದೇ ಹಣ ಪಡೆಯದೇ ಉಚಿತವಾಗಿ ಸಮಸ್ಯೆಗೆ ಸ್ವಾಮೀಜಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಕುಸುಮಾ ಬಾಲಕೃಷ್ಣ, ಪುರಸಭಾ ಅಧ್ಯಕ್ಷರು ಸಿ.ಎನ್.ಮೋಹನ್, ಮಾಜಿ ಅಧ್ಯಕ್ಷ ಸಿ.ಎನ್.ಶಶಿಧರ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಆರ್.ಅನಿಲ್ ಕುಮಾರ್, ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜೆ.ಮಂಜುನಾಥ್, ನಿರ್ದೇಶಕರಾದ ಆನಂದ್ ಕಾಳೇನಹಳ್ಳಿ, ಸಂತೋಷ್, ನುಗ್ಗೇಹಳ್ಳಿ ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಸಂಪತ್‌ಕುಮಾರ್, ಮುಖಂಡರಾದ ಬ್ಲ್ಯೂಲೈನ್ಸ್ ದೇವರಾಜು, ಓಬಳಾಪುರ ಬಸವರಾಜ್, ಜಂಬೂರು ಮಹೇಶ್, ದೊಡ್ಡಗನ್ನಿ ಸತೀಶ್, ಸ್ವ ಸ್ವರೂಪ ಸಂಪ್ರದಾಯ ಬೆಂಗಳೂರು ಜಿಲ್ಲಾ ನಿರೀಕ್ಷಕ ಬಾಳ ಸಾಹೇಬ ಪೇಳು, ಜಿಲ್ಲಾಧ್ಯಕ್ಷ ಮಹಾದೇವ್, ನಿಕ್ಕಂ, ಸದಸ್ಯ ಜಗದೀಶ್ ಬೋಜೆ ಸೇರಿ ಇತರರು ಇದ್ದರು.------------------------------------------------------------------