ರಾಣಿಬೆನ್ನೂರು ನಗರಸಭೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

KannadaprabhaNewsNetwork |  
Published : Jun 13, 2025, 05:35 AM IST
ಫೋಟೊ ಶೀರ್ಷಿಕೆ: 12ಆರ್‌ಎನ್‌ಆರ್2ರಾಣಿಬೆನ್ನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಪರಸ್ಪರ ವಾಗ್ವಾದದಲ್ಲಿ ತೊಡಗಿರುವುದು ಫೋಟೊ ಶೀರ್ಷಿಕೆ: 12ಆರ್‌ಎನ್‌ಆರ್2ಎರಾಣಿಬೆನ್ನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು. ಫೋಟೊ ಶೀರ್ಷಿಕೆ: 12ಆರ್‌ಎನ್‌ಆರ್2ಬಿರಾಣಿಬೆನ್ನೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರು ಮಂಡಿಸಿದ ಉಪ ಸೂಚನೆ ವಿರೋಧಿಸಿ ಕೈ ಎತ್ತಿ ಮತದಾನ ಮಾಡಿದ ಆಡಳಿತ ಪಕ್ಷದ ಸದಸ್ಯರು   | Kannada Prabha

ಸಾರಾಂಶ

ಸಭೆಯಲ್ಲಿ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ವಿಪಕ್ಷದ ಸದಸ್ಯೆ ಪ್ರಭಾವತಿ ತಿಳುವಳ್ಳಿ ಗೋಗೆರೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು.

ರಾಣಿಬೆನ್ನೂರು: ಕೋರಂ ಅಭಾವದ ಕಾರಣ ಅರ್ಧ ಗಂಟೆ ಸಭೆ ಮುಂದೂಡಿಕೆ, ಉಪಸೂಚನೆ ಮಂಡನೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಪರಸ್ಪರ ವಾಗ್ದಾದ, ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಅಲವತ್ತುಕೊಂಡ ಮಹಿಳಾ ಸದಸ್ಯೆ ಮುಂತಾದ ಘಟನೆಗಳು ಗುರುವಾರ ಜರುಗಿದ ಸ್ಥಳೀಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಂಡುಬಂದವು. ಸಾಮಾನ್ಯ ಸಭೆ ಬೆಳಗ್ಗೆ 11ಕ್ಕೆ ಗಂಟೆಗೆ ನಿಗದಿಯಾಗಿದ್ದರೂ 11.30ಕ್ಕೆ ಆಗಮಿಸಿದ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಮಳೆ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ಸಭೆಗೆ ಆಗಮಿಸುವುದು ತಡವಾಗಿದೆ. ಆದ್ದರಿಂದ ಸಭೆಯನ್ನು ಅರ್ಧ ಗಂಟೆ ಕಾಲ ಮುಂದೂಡಲಾಗಿದೆ ಎಂದು ಹೇಳಿ ಸಭೆಯಿಂದ ತೆರಳಿದರು. ನಂತರ ಶಾಸಕ ಪ್ರಕಾಶ ಕೋಳಿವಾಡ ಸಮೇತ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು 11.55ಕ್ಕೆ ಸಭೆಗೆ ಆಗಮಿಸಿದರು. 12.09ಕ್ಕೆ ಸಭೆ ಪ್ರಾರಂಭವಾಯಿತು.

ಉಪಸೂಚನೆ, ಸದಸ್ಯರ ವಾಗ್ವಾದ: ಸಭೆ ಪ್ರಾರಂಭವಾಗಿ ನಗರಸಭೆ ಸಿಬ್ಬಂದಿ ಅಜೆಂಡಾದಲ್ಲಿನ ಮೊದಲನೇ ವಿಷಯ ಓದಲು ಪ್ರಾರಂಭಿಸುತ್ತಿದ್ದಂತೆ ಎದ್ದು ನಿಂತ ವಿಪಕ್ಷ (ಕೆಪಿಜೆಪಿ) ಸದಸ್ಯ ಪ್ರಕಾಶ ಬುರುಡಿಕಟ್ಟಿ ಮಾತನಾಡಿ, ಹಿಂದಿನ ಸಭೆಯ ಕೆಲವು ವಿಷಯಗಳಿಗೆ ತಮ್ಮ ಆಕ್ಷೇಪವಿದ್ದು, ಅದಕ್ಕಾಗಿ ಉಪಸೂಚನೆ ಮಂಡಿಸುವುದಾಗಿ ತಿಳಿಸಿದರು.

ಇದಕ್ಕೆ ಆಡಳಿತ ಪಕ್ಷದ ನಿಂಗರಾಜ ಕೋಡಿಹಳ್ಳಿ ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಪ್ರಕಾಶ ಬುರುಡಿಕಟ್ಟಿ ಹಾಗೂ ನಿಂಗರಾಜ ಕೋಡಿಹಳ್ಳಿ ನಡುವೆ ತೀವ್ರ ವಾಗ್ವಾದ ನಡೆಯಿತು. ಇದೇ ವಿಚಾರವಾಗಿ ಆಡಳಿತ ಪಕ್ಷದ ಪುಟ್ಟಪ್ಪ ಮರಿಯಮ್ಮನವರ ಸ್ಪಷ್ಟನೆ ನೀಡಲು ಮುಂದಾದಾಗ ಒಮ್ಮೆಲೆ ಮೂರ‍್ನಾಲ್ಕು ಸದಸ್ಯರು ಎದ್ದು ನಿಂತು ಮಾತನಾಡತೊಡಗಿದರು. ಆಗ ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದಂತಾಯಿತು. ಕೊನೆಗೆ ಅಳೆದು ತೂಗಿ ಉಪ ಸೂಚನೆಯನ್ನು ಮತಕ್ಕೆ ಹಾಕಲು ನಿರ್ಧರಿಸಲಾಯಿತು. ಉಪಸೂಚನೆ ಪರವಾಗಿ 9 ಹಾಗೂ ವಿರುದ್ಧವಾಗಿ 18 ಮತ ಚಲಾಯಿಸಿದರು. ಮೂವರು ಸದಸ್ಯರು ತಟಸ್ಥವಾಗುಳಿದರು. ಹೀಗಾಗಿ ಉಪ ಸೂಚನೆ ಬಿದ್ದು ಹೋಯಿತು. ಅವಕಾಶಕ್ಕಾಗಿ ಗೋಗೆರೆದ ಮಹಿಳಾ ಸದಸ್ಯೆ: ಸಭೆಯಲ್ಲಿ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ವಿಪಕ್ಷದ ಸದಸ್ಯೆ ಪ್ರಭಾವತಿ ತಿಳುವಳ್ಳಿ ಗೋಗೆರೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ವಿಜ್ಞಾನ ಉದ್ಯಾನ ನಿರ್ಮಾಣಕ್ಕೆ ಅನುಮೋದನೆ: ನಗರದಲ್ಲಿ ವಿಜ್ಞಾನ ಉದ್ಯಾನ(ಸೈನ್ಸ್ ಪಾರ್ಕ್) ನಿರ್ಮಾಣ ಮಾಡುವ ವಿಷಯಕ್ಕೆ ಬಹುತೇಕ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಮಕ್ಕಳಿಗೆ ವಿಜ್ಞಾನ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸುವ ಸಲುವಾಗಿ ₹2 ಕೋಟಿ ವೆಚ್ಚದಲ್ಲಿ ವಿಜ್ಞಾನ ಉದ್ಯಾನ ಸ್ಥಾಪಿಸಲಾಗುತ್ತಿದೆ. ಮಕ್ಕಳಿಗೆ ಬಾಯಿಪಾಠ ಮಾಡಿ ಕಲಿಯುವ ಬದಲು ಶೈಕ್ಷಣಿಕವಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಸೈನ್ಸ್ ಪಾರ್ಕ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಯಾವ ನಗರಸಭೆ ವ್ಯಾಪ್ತಿಯಲ್ಲಿ ಇದನ್ನು ಮಾಡಿಲ್ಲ ಎಂದರು. ರಾಜಕಾಲುವೆ ಸ್ವಚ್ಛತೆಗೆ ಆಗ್ರಹ: ಮಳೆಗಾಲ ಸಮಯವಾಗಿರುವುದರಿಂದ ನಗರದಲ್ಲಿನ ರಾಜಕಾಲುವೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಎಲ್ಲ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಕೆಲವು ಕಡೆ ರಾಜ ಕಾಲುವೆ ಮೇಲೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು. ದುಬಾರಿಯಾಗುತ್ತಿರುವ ಒಳಚರಂಡಿ ದುರಸ್ತಿ: ಒಳಚರಂಡಿ ಛೇಂಬರ್ ದುರಸ್ತಿಗಾಗಿ ₹22.85 ಲಕ್ಷ ಮಂಜೂರಿ ನೀಡುವ ವಿಷಯವಾಗಿ ಮಾತನಾಡಿದ ವಿಪಕ್ಷ ಸದಸ್ಯ ಪ್ರಕಾಶ ಬುರುಡಿಕಟ್ಟಿ, ನಗರದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಒಳಚರಂಡಿ ಚೇಂಬರ್ ದುರಸ್ತಿಗಾಗಿ ₹1.50 ಕೋಟಿ ಖರ್ಚು ಮಾಡಲಾಗಿದೆ. ಅಚ್ಚರಿ ಸಂಗತಿ ಎಂದರೆ ಒಳಚರಂಡಿ ನಿರ್ಮಾಣಕ್ಕಾಗಿ ಇಷ್ಟು ಹಣ ಖರ್ಚಾಗಿಲ್ಲ. ಅಧಿಕಾರಿಗಳು ಇದರ ಬಗ್ಗೆ ಚಿಂತನೆ ಮಾಡಬೇಕು ಎಂದರು. ಏಕನಿವೇಶನ ವಿನ್ಯಾಸದಲ್ಲಿ ಅಭಿವೃದ್ಧಿಗೆ ಆಕ್ಷೇಪ: ನಗರದ ಕೆಲವು ಸ್ಥಳಗಳಲ್ಲಿ ಏಕ ನಿವೇಶನ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲು ಅನುಮತಿ ನೀಡುವ ವಿಷಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆಪಿಜೆಪಿ ಸದಸ್ಯ ಪ್ರಕಾಶ ಬುರುಡಿಕಟ್ಟಿ ಇದನ್ನು ವಿರೋಧಿಸಿ ಉಪಸೂಚನೆ ಮಂಡಿಸಿದರು. ಅದನ್ನು ಮತಕ್ಕೆ ಹಾಕಿದಾಗ ಪರವಾಗಿ 7 ಸದಸ್ಯರು, ವಿರುದ್ಧವಾಗಿ 17 ಹಾಗೂ 2 ಸದಸ್ಯರು ತಟಸ್ಥವಾಗಿ ಉಳಿದರು. ಉಪಾಧ್ಯಕ್ಷ ನಾಗರಾಜ ಪವಾರ, ಆಯುಕ್ತ ಎಫ್. ಐ. ಇಂಗಳಗಿ ವೇದಿಕೆಯಲ್ಲಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ